ಶುಕ್ರವಾರ, ಏಪ್ರಿಲ್ 10, 2020
19 °C

ಅಗತ್ಯ ಬಿದ್ದರೆ ವಾರಿಸ್‌ ಪಠಾಣ್‌ ವಿಚಾರಣೆ : ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದಲ್ಲಿ ಈಚೆಗೆ ನಡೆದ ಆಲ್‌ ಇಂಡಿಯಾ ಮಜ್ಲಿಸ್‌– ಎ– ಇತ್ತಹಾದುಲ್‌ ಮುಸ್ಲಿಮಿನ್‌ (ಎಂಐಎಂಐಎಂ) ಪಕ್ಷದ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಪಕ್ಷದ ರಾಷ್ಟ್ರೀಯ ವಕ್ತಾರ, ಮಹಾರಾಷ್ಟ್ರದ ಮಾಜಿ ಶಾಸಕ ವಾರಿಸ್‌ ಯೂಸೂಫ್‌ ಪಠಾಣ್‌ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದ ಪೀರ್‌ ಬಂಗಾಲಿ ಮೈದಾನದಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಫೆ.15ರಂದು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಕೋಮುದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ನಗರದ ವಕೀಲರಾದ ಶ್ವೇತಾ ಸಿಂಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಕಲಂ 117, 153 ಹಾಗೂ 153ಎ ಅಡಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

‘ಈಗ ನಮ್ಮ ಸಿಂಹಿಣಿಯರು ಮಾತ್ರ ಹೊರಗೆ ಬಂದಿದ್ದಾರೆ. ಅಷ್ಟಕ್ಕೇ ‘ಅವರಿಗೆ’ ಬೆವರು ಬರುತ್ತಿದೆ. ನಾವೆಲ್ಲರೂ ಬಂದು ನಿಂತರೆ ‘ಅವರ’ ಕಥೆ ಏನು? ನಾವು ಕೇವಲ 15 ಕೋಟಿ ಮಾತ್ರ ಇದ್ದೇವೆ. ಆದರೆ, 100 ಕೋಟಿ ಇರುವ ‘ನೀವು’ ಅನುಭವಿಸಬೇಕಾಗುತ್ತದೆ, ನೆನಪಿಟ್ಟುಕೊಳ್ಳಿ’ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಪಠಾಣ್‌ ಭಾಷಣ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರ ಭಾಷಣದ ವಿಡಿಯೊ ಕೂಡ ಈಗ ವೈರಲ್‌ ಆಗಿದೆ.

‘ಅಕ್ರಮ ಕೂಟ ರಚನೆ, ವರ್ಗಗಳ ಮಧ್ಯೆ ದ್ವೇಷ ಹುಟ್ಟಿಸುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಪಠಾಣ್‌ಗೆ ಶನಿವಾರ ನೋಟಿಸ್‌ ಕಳಿಸಲಾಗಿದೆ. ಅಗತ್ಯಬಿದ್ದರೆ ಅವರನ್ನು ವಿಚಾರಣೆಗೂ ಕರೆಸಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ತಿಳಿಸಿದ್ದಾರೆ.

ಗೃಹ ಸಚಿವರ ಪ್ರತಿಕ್ರಿಯೆ: ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಪಠಾಣ್‌ ಮಾತನಾಡಿರುವುದು ಕೋಮುಭಾವನೆಗೆ ಧಕ್ಕೆ ತರುವ ರೀತಿಯಲ್ಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)