ಶುಕ್ರವಾರ, ನವೆಂಬರ್ 22, 2019
22 °C
ಕಳೆದ ವರ್ಷ ಮುದ್ರಿಸಿಕೊಟ್ಟವರಿಗೆ ಇನ್ನೂ ಪಾವತಿಯಾಗದ ಹಣ

ನಾಡಿನಲ್ಲಿ ನೆರೆ: ಪಠ್ಯಪುಸ್ತಕ ಮುದ್ರಕರಿಗೆ ಬರೆ

Published:
Updated:
Prajavani

ಬೆಂಗಳೂರು: ರಾಜ್ಯದ ನೆರೆ ಪೀಡಿತ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕಗಳೂ ಕೊಚ್ಚಿ ಹೋಗಿದ್ದರಿಂದ ತುರ್ತಾಗಿ ಪಠ್ಯಪುಸ್ತಕ ಪೂರೈಕೆಗೆ ಸರ್ಕಾರ ಆದೇಶ ನೀಡಿದ್ದು, ಕಳೆದ ವರ್ಷ ಕೊಡಗು ಜಿಲ್ಲೆಗೆ ತುರ್ತಾಗಿ ಪುಸ್ತಕ ಮುದ್ರಿಸಿ ಕೊಟ್ಟವರಿಗೆ ಇನ್ನೂ ಹಣ ಪಾವತಿ ಆಗಿಲ್ಲ ಎಂದು ಹಲವು ಮುದ್ರಕರು ಆರೋಪಿಸಿದ್ದಾರೆ.

‘ನೆರೆ ಹಾವಳಿಯಿಂದ ಆಗಿರುವ ಸಂಕಷ್ಟಕ್ಕೆ ನಾವೂ ತಕ್ಷಣ ಸ್ಪಂದಿಸುತ್ತೇವೆ, ಆದರೆ ಕಳೆದ ವರ್ಷ ತುರ್ತಾಗಿ ಪುಸ್ತಕ ಮುದ್ರಿಸಿಕೊಟ್ಟದ್ದಕ್ಕೆ ವಿವಿಧ ಮುದ್ರಕರಿಗೆ ಸುಮಾರು ₹ 80 ಲಕ್ಷ ಹಣ ಕೊಡಲು ಬಾಕಿ ಇದೆ, ಅದಕ್ಕಿಂತ ಮೊದಲಿನ ದಂಡ ಶುಲ್ಕ ಬಾಕಿ ರೂಪದಲ್ಲಿ ₹ 3 ಕೋಟಿ ಹಣ ನೀಡುವುದು ಬಾಕಿ ಇದೆ. ಸರ್ಕಾರ ಈ ಬಾಕಿ ಪಾವತಿಸದೆ ಹೋದರೆ ಹೊಸದಾಗಿ ಪುಸ್ತಕ ಮುದ್ರಿಸಿಕೊಡುವುದು ಹೇಗೆ?’ ಎಂದು ಮುದ್ರಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ಜಿಲ್ಲೆಗಳಿಗೆ ಬಾಕಿ ಉಳಿದಿದ್ದ ಪಠ್ಯಪುಸ್ತಕಗಳನ್ನು ಒಟ್ಟುಗೂಡಿಸಿ ಈಗಾಗಲೇ ರವಾನಿಸಲಾಗಿದೆ. ಆದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 6 ಲಕ್ಷ ಪುಸ್ತಕಗಳನ್ನು ಮುದ್ರಿಸಿ ಕೊಡಬೇಕಿದೆ. ಮುದ್ರಕರಿಗೆ ತುರ್ತಾಗಿ ಮುದ್ರಿಸಿ ಕೊಡಲು ಸೂಚಿಸಲಾಗಿದೆ. ದಸರಾ ರಜೆ ಮುಗಿದು ಶಾಲೆಗಳು ಮತ್ತೆ ಆರಂಭವಾಗುವ ವೇಳೆಗೆ ಪುಸ್ತಕಗಳ ಪೂರೈಕೆ ಮಾಡಲಾಗುವುದು’ ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ನಿರ್ದೇಶಕ ಎಚ್‌. ಎನ್‌. ಗೋಪಾಲಕೃಷ್ಣ ಹೇಳಿದರು.

‘ಕೊಡಗಿಗೆ ಹೆಚ್ಚುವರಿ ಪುಸ್ತಕ ಮುದ್ರಿಸಿ ಕೊಡಲು ಸೂಚಿಸಿಯೇ ಇಲ್ಲ’ ಎಂದು ನಿರ್ದೇಶಕರು ತಿಳಿಸಿದ್ದರೂ, ಪುಸ್ತಕ ಮುದ್ರಿಸಿ ಕೊಡಲು ಸೊಸೈಟಿ ಸುತ್ತೋಲೆಯ ಮೂಲಕವೇ ಸೂಚಿಸಿದ್ದನ್ನು ಮುದ್ರಕರು ಬೊಟ್ಟುಮಾಡಿ ತೋರಿಸಿದ್ದಾರೆ.

ಇದೀಗ ಪಠ್ಯಪುಸ್ತಕ ಮುದ್ರಿಸಿಕೊಡಲು ಕನಿಷ್ಠ ಒಂದು ತಿಂಗಳು ಬೇಕು. ‘ಪ್ರವಾಹ ತಲೆದೋರಿ ಎರಡು ತಿಂಗಳು ಕಳೆದಿದೆ, ಆಗಲೇ ಸೂಚನೆ ಕೊಟ್ಟಿದ್ದರೆ ಈಗ ಮುದ್ರಿಸಿ ಕೊಡಬಹುದಿತ್ತು. ಆದರೆ ಸರ್ಕಾರ ಸೂಚನೆ ನೀಡಿದ್ದು ಈ ವಾರವಷ್ಟೇ. ಹೀಗಾಗಿ ನವೆಂಬರ್‌ 15ರ ಮೇಲಷ್ಟೇ ಪುಸ್ತಕಗಳ ಪೂರೈಕೆ ಆಗಬಹುದಷ್ಟೇ’ ಎಂದು ಇನ್ನೊಬ್ಬ ಮುದ್ರಕರು ತಿಳಿಸಿದರು.

ವಾಪಸ್‌ ಬಾರದ ದಂಡ ಶುಲ್ಕ
2017ರಲ್ಲಿ ದೇಶದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದಾಗ ಮುದ್ರಣ ಕಾಗದ ಪೂರೈಕೆಗೆ ಬಹಳ ಸಂಕಷ್ಟ ಎದುರಾಗಿತ್ತು. ತಮಿಳುನಾಡಿನಲ್ಲಿ ಮಾತ್ರ ಒಂದು ಕಾಗದ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು. ಕಾಗದದ ಅಲಭ್ಯದಿಂದಾಗಿ ಪಠ್ಯಪುಸ್ತಕ ಮುದ್ರಿಸುವುದು ವಿಳಂಬವಾಗಿದ್ದರೂ, ಗುತ್ತಿಗೆ ನಿಯಮದಂತೆ ಮುದ್ರಕರಿಗೆ ವಿಳಂಬವಾಗಿ ಮುದ್ರಿಸಿಕೊಟ್ಟದ್ದಕ್ಕೆ ಸುಮಾರು ₹ 3 ಕೋಟಿಯಷ್ಟು ದಂಡ ವಿಧಿಸಲಾಗಿತ್ತು. ಮುದ್ರಕರ ತಪ್ಪಿಲ್ಲದಿದ್ದರೂ ದಂಡ ವಿಧಿಸಿದ್ದನ್ನು ಶಿಕ್ಷಣ ಸಚಿವರಾದ ತನ್ವೀರ್ ಸೇಠ್‌ ಮತ್ತು ಎನ್‌. ಮಹೇಶ್‌ ವಿರೋಧಿಸಿದ್ದರು. ದಂಡದ ಮೊತ್ತವನ್ನು ವಾಪಸ್‌ ಕೊಡುವ ವಾಗ್ದಾನವನ್ನು ಸರ್ಕಾರ ಮಾಡಿತ್ತು. ಆದರೆ ಇದುವರೆಗೂ ಆ ದುಡ್ಡನ್ನು ಕೊಟ್ಟಿಲ್ಲ.

ಪ್ರತಿಕ್ರಿಯಿಸಿ (+)