ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಇಳಿದರೂ ನಿಂತಿಲ್ಲ ಕಣ್ಣೀರು...

ದಾಖಲೆಗಳೂ ಕಾವೇರಿ ಪ್ರವಾಹದ ಪಾಲು l ಸಾಂಕ್ರಾಮಿಕ ರೋಗದ ಭೀತಿ l 100ಕ್ಕೂ ಹೆಚ್ಚು ಮನೆಗಳು ನೆಲಸಮ
Last Updated 12 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಆಶ್ಲೇಷ ಮಳೆ ಸೃಷ್ಟಿಸಿದ್ದ ಪ್ರವಾಹವು ನಿಧಾನವಾಗಿ ತಗ್ಗುತ್ತಿದೆ. ಪ್ರವಾಹ ಪೀಡಿತ 79 ಗ್ರಾಮಗಳಲ್ಲಿ ಮನೆ ಉಳಿದವರು ಅತ್ತ ಹೆಜ್ಜೆಹಾಕಿ ಕೆಸರು, ಮನೆಯಲ್ಲಿ ನಿಂತ ನೀರು ಹೊರಹಾಕಿ ಶುಚಿ ಮಾಡಿಕೊಳ್ಳುತ್ತಿದ್ದಾರೆ. ‌ಮನೆ ಕಳೆದುಕೊಂಡ ಸಂತ್ರಸ್ತರು, ಅಳಿದುಳಿದ ಸಾಮಗ್ರಿ, ಪಾತ್ರೆ ಜೋಡಿಸಿಟ್ಟು ಮತ್ತೆ ನಿರಾಶ್ರಿತರ ಶಿಬಿರದತ್ತ ಮುಖ ಮಾಡುತ್ತಿದ್ದಾರೆ.

ಮನೆಯ ಸುತ್ತ ಸಾಕುಪ್ರಾಣಿಗಳ ಸುಳಿವಿಲ್ಲ. ಅವು ಮನೆಯೊಂದಿಗೆ ಕಾವೇರಿ ಪ್ರವಾಹದ ಪಾಲಾಗಿದ್ದು, ವಿಧಿಯಾಟ ಶಪಿಸುತ್ತಲೇ ನೂರಾರು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

2018ರ ಆಗಸ್ಟ್‌ನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಕೊಡಗು ತುತ್ತಾದಾಗಲೂ ಕಾವೇರಿ ನದಿಯು ಸಿದ್ದಾಪುರ ವ್ಯಾಪ್ತಿಯಲ್ಲಿ ಇಷ್ಟೊಂದು ರೌದ್ರತೆ ತೋರಿರಲಿಲ್ಲ. 1964ರ ಬಳಿಕ ಸಿದ್ದಾಪುರದ ಸುತ್ತಮುತ್ತ ಹಲವು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ.

‘ನೀರು ಏರುತ್ತಲೇ ಹೋಯಿತು. ಮನೆಯಲ್ಲಿದ್ದ ಯಾವ ವಸ್ತುಗಳನ್ನೂ ಹೊರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ’ ಎಂದು ಬೆಟ್ಟದಕಾಡು ನಿವಾಸಿ ಮುಜೀದ್‌ ಕಣ್ಣೀರಿನ ಜತೆಗೆ ಸನ್ನಿವೇಶ ವಿವರಿಸಿದರು. ನದಿ ಪಾತ್ರದ ಕರಡಿಗೋಡು, ಗುಹ್ಯ, ಕೂಡುಗದ್ದೆ, ಬೆಟ್ಟದಕಾಡು, ಬರಗಿ, ಕುಂಬಾರಗಡಿಗೆ ಸುತ್ತಮುತ್ತ ಪ್ರವಾಹಕ್ಕೆ 100ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ.

ಮಕ್ಕಳ ಪುಸ್ತಕ, ಬಟ್ಟೆ, ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಬ್ಯಾಂಕ್‌ ದಾಖಲೆಗಳು ಕೊಚ್ಚಿ ಹೋಗಿವೆ. ಭೇತ್ರಿಯಲ್ಲಿ ಕುಸಿದ ಮನೆಯೊಂದರಲ್ಲಿ ದಾಖಲಾತಿ ಕೊಂಡೊಯ್ಯಲು ಬಂದಿದ್ದ ಹಸನ್‌ ಕುಟುಂಬಕ್ಕೆ ಮಾತ್ರ ನಿರಾಸೆ. ಅಲ್ಲಿ ಮನೆಯ ಕುಸಿದ ಗೋಡೆ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಪದೇ ಪದೇ ಕೊಡಗಿನಲ್ಲಿ ವರುಣದೇವ ಈ ರೀತಿ ಅವಾಂತರ ಸೃಷ್ಟಿಸಿದರೆ ಬದುಕುವುದಾದರೂ ಹೇಗೆಂದು ಸಂತ್ರಸ್ತರು ಗೋಳಿಡುತ್ತಿದ್ದಾರೆ.

ವಿದೇಶಕ್ಕೆ ತೆರಳುವ ಆಸೆಯಲ್ಲಿದ್ದ ಕೊಂಡಂಗೇರಿಯ ಹಲವು ಯುವಕರ ಪಾಸ್‌ಪೋರ್ಟ್‌ಗಳು ನೀರುಪಾಲಾಗಿವೆ. ಪ್ರತಿ ಊರಿನಲ್ಲೂ ಒಂದೊಂದು ಕಣ್ಣೀರಿನ ಕಥೆಗಳು ಈಗ ಸೃಷ್ಟಿಯಾಗಿವೆ. ಕಳೆದ ವರ್ಷದ ಸಂತ್ರಸ್ತರ ಪಟ್ಟಿಗೆ ಮತ್ತಷ್ಟು ಹೊಸ ಹೆಸರು ಸೇರಿಕೊಂಡಿವೆ. ಪೊನ್ನಂಪೇಟೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.

ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಕೊಡಗು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ತೋರದ ಭೂಕುಸಿತದಲ್ಲಿ ಸಿಲುಕಿದ್ದ ಮಹಿಳೆ ಹಾಗೂ ಕಟ್ಟೆಮಾಡು ಪರಂಬು ಗ್ರಾಮದ ಮುಳುಗಡೆಯಾಗಿದ್ದ ಮನೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕಣ್ಮರೆಯಾದ ಇನ್ನೂ ಏಳು ಮಂದಿಗಾಗಿ ಎನ್‌ಡಿಆರ್‌ಎಫ್‌, ಪೊಲೀಸರು ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಮಣ್ಣು ಕುಸಿಯುತ್ತಿರುವ ಪರಿಣಾಮ ಶೋಧ ವಿಳಂಬವಾಗುತ್ತಿದೆ.

ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ ಕಡಿತವಾಗಿದ್ದು ಆ. 13 ಹಾಗೂ 14ರಂದೂ ಶಾಲಾ–ಕಾಲೇಜುಗಳಿಗೆ ರಜೆ ವಿಸ್ತರಿಸಲಾಗಿದೆ.

‘ಖರ್ಚಿಗೆ ಹಣ ಇಲ್ಲ’

‘ಕಳೆದ ವರ್ಷದ ಪ್ರಾಕೃತಿಕ ವಿಕೋಪದ ವೇಳೆ ಎಲ್ಲವನ್ನೂ ಕಳೆದುಕೊಂಡಿದ್ದ ಸಂತ್ರಸ್ತರ ಖರ್ಚಿಗೆ ₹ 3,800 ನೀಡಲಾಗಿತ್ತು. ಪೀಠೋಪ
ಕರಣ, ಎಲೆಕ್ಟ್ರಾನಿಕ್‌ ಉಪಕರಣಕ್ಕೆ ಹಾನಿಯಾಗಿದ್ದವರಿಗೆ ₹ 50 ಸಾವಿರ ಪರಿಹಾರ ನೀಡಲಾಗಿತ್ತು. ಅದೇ ಮಾದರಿಯಲ್ಲಿ ತಕ್ಷಣವೇ ಸಂತ್ರಸ್ತರಿಗೆ ನೆರವು ಒದಗಿಸಬೇಕು. ಕೆಲಸವೂ ಇಲ್ಲ. ನಿತ್ಯದ ಖರ್ಚಿಗೆ ಹಣ ಅಗತ್ಯವಿದೆ’ ಎಂದು ಕೊಂಡಂಗೇರಿಯ ಸಂತ್ರಸ್ತರು ಆಗ್ರಹಿಸುತ್ತಿದ್ದಾರೆ.

* ಕಳೆದ ವರ್ಷ ನಾನೂ ನಿಮ್ಮದೇ ಸ್ಥಿತಿಯಲ್ಲಿದ್ದೆ. ಕಾಲೂರಿನಲ್ಲಿ ಭೂಕುಸಿತದ ನಂತರ ಹಲವು ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ

- ನಾಗೇಶ್ ಕಾಲೂರು, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT