ಮಂಗಳವಾರ, ಸೆಪ್ಟೆಂಬರ್ 28, 2021
20 °C

ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯ: ಬೀದಿಗಿಳಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಹೊತ್ತೊಯ್ದರು – ಪ್ರಜಾವಾಣಿ ಚಿತ್ರಗಳು

ಬೆಂಗಳೂರು: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ವಿಫಲರಾಗಿದ್ದಾರೆ’ ಎಂದು ಆರೋಪಿಸಿ ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಆನಂದರಾವ್‌ ವೃತ್ತದ ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಮೆರವಣಿಗೆ ನಡೆಸಿದ ರೈತರು, ‘ಪೂರ್ಣ ಪ್ರಮಾಣದಲ್ಲಿ ರೈತರ ಸಾಲಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು. 

ಸ್ವಾತಂತ್ರ್ಯ ಉದ್ಯಾನದಲ್ಲಿ ಮೆರವಣಿಗೆ ಅಂತ್ಯಗೊಳಿಸಿದ ಪ್ರತಿಭಟನಾಕಾರರು, ಬಹಿರಂಗ ಸಭೆ ನಡೆಸಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿ, ಅಲ್ಲಿಂದ ಹೊರಟರು. ಪೊಲೀಸರು, ಅವರೆಲ್ಲರನ್ನು ತಡೆದರು. ಅದೇ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು.

ಪೊಲೀಸರ ವರ್ತನೆಯನ್ನು ಖಂಡಿಸಿದ ರೈತರು, ಶೇಷಾದ್ರಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ‘ಅನ್ನ ಕೊಡುವ ರೈತರ ಮೇಲೆ ಪೊಲೀಸರನ್ನು ಬಿಟ್ಟು ಸರ್ಕಾರ ದಬ್ಬಾಳಿಕೆ ಮಾಡಿಸುತ್ತಿದೆ’ ಎಂದು ಘೋಷಣೆ ಕೂಗಿದರು.

ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಮುಖಂಡರು ಸೇರಿದಂತೆ 40ಕ್ಕೂ ಹೆಚ್ಚು ರೈತರನ್ನು  ಪೊಲೀಸರು ವಶಕ್ಕೆ ಪಡೆದರು. ಹಲವರನ್ನು ಎತ್ತಿಕೊಂಡೇ ಪೊಲೀಸರು ಜೀಪು ಹತ್ತಿಸಿದರು. ಅದೇ ಸಂದರ್ಭದಲ್ಲಿ ಕೆಲವು ರೈತರು, ರಸ್ತೆಯಲ್ಲೇ ಉರುಳಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಹಾವೇರಿಯಲ್ಲಿ ಬೃಹತ್‌ ಸಮಾವೇಶ: ಬಹಿರಂಗ ಸಭೆಯಲ್ಲಿ ಮಾತನಾಡಿದ ರೈತ ಸಂಘಟನೆ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ ಜುಲೈ 21ರಂದು ಹಾವೇರಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ’ ಎಂದರು.

‘ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಅವರೇ ಹೇಳಿದ್ದರು. ಈಗ ಮಾತು ತಪ್ಪಿದ್ದಾರೆ. ಸಂಪೂರ್ಣ ಸಾಲಮನ್ನಾ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

ಪ್ರತಿಭಟನೆ ವಾಪಸ್‌ ಪಡೆದ ರೈತರು: ಪ್ರತಿಭಟನಾ ಸ್ಥಳಕ್ಕೆ ಸಂಜೆ ಭೇಟಿ ನೀಡಿದ್ದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ರೈತರ ಜತೆ ಮಾತುಕತೆ ನಡೆಸಿದರು.

‘ಮುಖ್ಯಮಂತ್ರಿಯವರು ರೈತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರ ಜತೆ ಮಾತುಕತೆ ನಡೆಸಲು ಸಭೆ ನಿಗದಿ ಮಾಡಿಸುತ್ತೇನೆ. ಸದ್ಯಕ್ಕೆ ಪ್ರತಿಭಟನೆ ಕೈಬಿಡಿ’ ಎಂದು ಬಂಡೆಪ್ಪ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ರೈತರು, ಪ್ರತಿಭಟನೆಯನ್ನು ಹಿಂಪಡೆದರು.

***

₹53 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ, ₹ 36 ಸಾವಿರ ಕೋಟಿ ಸಾಲವನ್ನು ಮಾತ್ರ ಮನ್ನಾ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ
– ಕೋಡಿಹಳ್ಳಿ ಚಂದ್ರಶೇಖರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.