ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಉಳಿವಿಗಾಗಿ ‘ಸಸ್ಯಯಾಗ’

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಈಗಾಗಲೇ ಸಾಕಷ್ಟು ಅರಣ್ಯ ಪ್ರದೇಶ ನಗರವಾಗಿ ಮಾರ್ಪಟ್ಟಿದೆ. ಅರಣ್ಯದ ಉಪಯೋಗವೇನು ಎಂದರಿಯದ ಮನುಷ್ಯ ಗಿಡ-ಮರಗಳನ್ನು ಕತ್ತರಿಸುತ್ತಲೇ ಸಾಗುತ್ತಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧ ಎನ್ನುವಂತೆ ಇಲ್ಲಿಯ ಬಳಗವೊಂದು ‘ಸಸ್ಯಯಾಗ’ ಮಾಡುತ್ತಿದೆ.

ನಿಸರ್ಗ ಉಚಿತವಾಗಿ ನೀಡಿರುವ ಮಣ್ಣು, ಗೊಬ್ಬರ, ಬೀಜಗಳನ್ನು ಬಳಸಿಕೊಂಡು ಸಸಿ ತಯಾರಿಸಿ ಮರಳಿ ನಿಸರ್ಗ ಬೆಳೆಸಿದರೆ ಮುಂದಿನ ಪೀಳಿಗೆ ನಿಶ್ಚಿಂತೆಯಿಂದ ಬದುಕಬಹುದು ಎಂಬ ಒಂದೇ ಒಂದು ಆಶಯದಿಂದ ತಪೋವನದ ವೃಕ್ಷಸೇವಾ ಕೇಂದ್ರ ‘ಸಸ್ಯಯಾಗ’ ಹಮ್ಮಿಕೊಂಡಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸಸ್ಯಗಳನ್ನು ಬೆಳೆಸಲಾಗಿದೆ.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಕಲ್ಪನೆಯಂತೆ ಸಸ್ಯಯಾಗ ಹಮ್ಮಿಕೊಳ್ಳಲಾಗಿದ್ದು, ‘ಕಾಡು ಬೆಳೆಸಿ ನಾಡು ಉಳಿಸಿ’ ಎಂಬ ಉದ್ದೇಶದಿಂದ ಸಸಿಗಳನ್ನು ಬೆಳಸಲಾಗುತ್ತಿದೆ.  ಬರುವ ದಿನಗಳಲ್ಲಿ ಇವುಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಬೆಳೆಸುವ ಮೂಲಕ ಉತ್ತಮ ಆಮ್ಲಜನಕ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎನ್ನುವುದು ವೃಕ್ಷಸೇವಾ ಸಂಸ್ಥೆಯ ಮಾತು.

ಏನಿದು ಸಸ್ಯಯಾಗ...
ಕಾಮಗಾರಿ ಹೆಸರಿನಲ್ಲಿ ನೂರಾರು ಮರಗಳ ಮಾರಣಹೋಮ ನಡೆಯುತ್ತಿದ್ದು, ಎಷ್ಟೋ ಅರಣ್ಯ ಪ್ರದೇಶದಲ್ಲಿ ಮಳೆ ತರಿಸುವ ಮರಗಳಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳ ಸಹಕಾರದಿಂದ ಯಾವ ಅರಣ್ಯ ಪ್ರದೇಶಗಳಲ್ಲಿ ಮರಗಳು ಹೆಚ್ಚು ಇಲ್ಲವೋ ಅಂತಹ ಅರಣ್ಯ ಪ್ರದೇಶಗಳಿಗೆ ಹೋಗಿ ತಪೋವನದಲ್ಲಿ ತಯಾರಿಸಿರುವ ಸಸಿಗಳನ್ನು ಬರುವ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನೆಡುವುದೇ ಸಸ್ಯಯಾಗ.

ತಪೋವನದಲ್ಲಿ ಕಳೆದ ಒಂದೆರಡು ತಿಂಗಳಿನಿಂದಲೇ ನೂರಾರು ವೃಕ್ಷ ಸೇವಕರು ಬೇವು, ಆಲ, ಹೊಂಗೆ, ಚೇರಿ ಜಾತಿಯ ಬೀಜಗಳನ್ನು ಆರಿಸಿ ತಂದು ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸ್ವಯಂ ವೃಕ್ಷ ಸಸಿಗಳನ್ನು ತಯಾರಿಸಿದ್ದಾರೆ. ಪಕ್ಷಿಗಳ ಆಹಾರಕ್ಕಾಗಿ ಬೇರೆ ಬೇರೆ ರೀತಿಯ ಸಸಿಗಳನ್ನು ತಯಾರಿಸಬೇಕೆಂದು ಇನ್ನೂ ಹೆಚ್ಚಿನ ಸಸಿಗಳನ್ನು ತಯಾರಿಸುವ ಕಾರ್ಯದಲ್ಲಿ ಸದಸ್ಯರು ಮಗ್ನರಾಗಿದ್ದಾರೆ.

ಬಿಸಿಎಂ ಇಲಾಖೆ ಮಕ್ಕಳು ಸಾಥ್...
ಸಿದ್ಧೇಶ್ವರ ಸ್ವಾಮೀಜಿ ಹುಟ್ಟು ಹಾಕಿರುವ ಸಸ್ಯಯಾಗದಲ್ಲಿ ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸಲು ಬಿಸಿಎಂ ಇಲಾಖೆಯ ನಿಲಯದ ಮಕ್ಕಳು ಸಹಿತ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಬಗೆಯ ಬೀಜಗಳನ್ನು ಆರಿಸಿ ತಂದು ಹಿರಿಯರ ಸಹಾಯದಿಂದ ಸುಮಾರು ಸಸಿಗಳನ್ನು ಬೆಳೆಸಿದ್ದಾರೆ.

ಸಸಿ ಬೆಳೆಸುವುದರ ಜೊತೆಗೆ ಮಣ್ಣು, ಗೊಬ್ಬರ, ಗೋಮೂತ್ರ ಬಳಸಿ ಗಿಡಗಳ ಕೆಳಗೆ ವಿವಿಧ ಬಗೆಯ ಬೀಜಗಳನ್ನು ಆರಿಸುವ ಪದ್ಧತಿಯನ್ನು ಈ ಮಕ್ಕಳಿಗೆ ತಪೋವನದ ಹಿರಿಯರು ತಿಳಿಸಿದ್ದಾರೆ. ವಿವಿಧ ಬಗೆಯ ಗಿಡಮರಗಳನ್ನು ಬೆಳೆಸಲು ತರಬೇತಿ ನೀಡಿ ಅಲ್ಲಿ ಬೆಳೆಸಿದ ಸಸಿಗಳನ್ನು ದಾನ ರೂಪದಲ್ಲಿ ಆಸಕ್ತಿಯಿಂದ ಬೆಳೆಸುವವರಿಗೆ ವಿತರಿಸಿದ್ದಾರೆ.

ಈ ಬಾರಿ ಇಲ್ಲಿ ಸಸ್ಯಯಾಗ...
ಪರಿಸರ ಜಾಗೃತಿ ಜೊತೆಗೆ ಮಕ್ಕಳು, ಯುವಕರಿಂದ ಸಸ್ಯಯಾಗ ಪ್ರಾರಂಭಿಸಲಾಗುತ್ತಿದೆ. ಅರಣ್ಯಾಧಿಕಾರಿಗಳ ಸಹಾಯದಿಂದ ಹಳಿಯಾಳ, ಮುಗದ, ಕ್ಯಾರಕೊಪ್ಪ, ಕಂಬಾರಗಣಿ, ಕೋಗಿಲೆಗೇರೆ ಅರಣ್ಯ ಪ್ರದೇಶಗಳಲ್ಲಿ ಈ ಬಾರಿ ಸಸಿಗಳನ್ನು ನೆಡಬೇಕೆಂದು ನಿರ್ಧರಿಸಲಾಗಿದೆ.

ಪ್ರತಿಯೊಬ್ಬರಿಗೆ ಐದಾರು ಗಿಡಗಳಂತೆ ಮಕ್ಕಳು ಯುವಕರಿಗೆ ನೀಡಿ ಅವುಗಳನ್ನು ನೆಡಲಾಗುತ್ತದೆ. ಕಳೆದ ವರ್ಷ ನಿಗದಿ ಹತ್ತಿರ ಸುಮಾರು ಐದು ಸಾವಿರ ಬೀಜ ದುಂಡೆಗಳನ್ನು ಬಿತ್ತಿ ಬರಲಾಗಿದೆ. ಬಿತ್ತಿ ಬರುವುದಲ್ಲ, ಆಗಾಗ ಹೋಗಿ ಅವುಗಳತ್ತ ಗಮನಹರಿಸಲಾಗುತ್ತದೆ ಎನ್ನುವುದು ಪರಿಸರ ಪ್ರೇಮಿಗಳ ಮಾತು.

– ಶಿವಕುಮಾರ ಹಳ್ಯಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT