ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕ್ಕೂ ಬಸವತತ್ವ ಪಸರಿಸಿದ್ದರು

ಜಾಟವರಿಗೆ ಇಷ್ಟಲಿಂಗ ದೀಕ್ಷೆ, ಉಚಿತ ಶಿಕ್ಷಣ
Last Updated 20 ಅಕ್ಟೋಬರ್ 2018, 19:06 IST
ಅಕ್ಷರ ಗಾತ್ರ

ನವದೆಹಲಿ: ಪ್ರಗತಿಪರ ವಿಚಾರಧಾರೆಯೊಂದಿಗೆ ಸಮಾನತೆ ಮತ್ತು ಶಿಕ್ಷಣದ ಮಹತ್ವ ಸಾರುತ್ತ, ದೀನ–ದಲಿತರ ಏಳ್ಗೆಯನ್ನು ಬಯಸುತ್ತಿದ್ದ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ, ಉತ್ತರ ಭಾರತಕ್ಕೂ ಚಾಚಿಕೊಂಡಿತ್ತು.

ಅಸ್ಪೃಶ್ಯತೆಯಿಂದ ಕನಲಿದ್ದ ಉತ್ತರ ಭಾರತದ ಜಾಟವ (ಸಮಗಾರ) ಸಮುದಾಯದ ಸಾವಿರಾರು ಜನತೆಗೆ ಬಸವತತ್ವ ಮತ್ತು ‘ಕಾಯಕವೇ ಕೈಲಾಸ’ ಎಂಬ ವಚನದ ಮಹತ್ವ ಅರುಹಿದ್ದ ಶ್ರೀಗಳು, ಹೊಸ ಸಹಸ್ರಮಾನದ ಆರಂಭದಲ್ಲಿ ಅವರೆಲ್ಲರಿಗೂ ‘ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ’ ಎಂಬುದನ್ನು ಮನದಟ್ಟು ಮಾಡಿದ್ದರು.

ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ಮತ್ತಿತರ ರಾಜ್ಯಗಳಲ್ಲಿ ಜಾಟವ ಎಂದೇ ಹೆಸರಾಗಿರುವ ಈ ಜನಾಂಗಕ್ಕೆ ಕರ್ನಾಟಕದಲ್ಲಿ ಸಮಗಾರ ಸಮುದಾಯ ಎಂಬ ಹೆಸರಿದೆ. ಕೊಳೆಗೇರಿಗಳಲ್ಲಿ ವಾಸಿಸುತ್ತ, ಬೀಡಿ, ಸಿಗರೇಟು, ಗುಟ್ಕಾ ಮತ್ತು ಮದ್ಯದ ದಾಸರಾಗಿದ್ದ ಈ ಸಮುದಾಯದ ಅನಕ್ಷರಸ್ಥರಿಗೆ ಇಲಕಲ್ಲ ಮಹಾಂತ ಸ್ವಾಮೀಜಿ, ನಾಗನೂರು ಮಠದ ಸ್ವಾಮೀಜಿ, ನಂದವಾಡಗಿಯ ಶ್ರೀಗಳೊಂದಿಗೆ ಸೇರಿಕೊಂಡು ಇಷ್ಟಲಿಂಗದ ದೀಕ್ಷೆ ನೀಡಿದವರು ಅವರು.

‘ಕೋಮು ಸೌಹಾರ್ದಕ್ಕಾಗಿನ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು 2003ರಲ್ಲಿ ರಾಷ್ಟ್ರ ರಾಜಧಾನಿಗೆ ಬಂದಿದ್ದ ಶ್ರೀಗಳನ್ನು ಭೇಟಿಯಾಗುವಂತೆ ಸ್ನೇಹಿತರೊಬ್ಬರು ತಿಳಿಸಿದಾಗ, ಹತ್ತಿಪ್ಪತ್ತು ಜನರೊಂದಿಗೆ ಅವರನ್ನು ಕಾಣಲು ಎಸ್‌.ಆರ್‌. ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿದ್ದೆವು. ಶೂದ್ರರಾದ ನಮ್ಮನ್ನು ಆದರದಿಂದ ಬರಮಾಡಿಕೊಂಡ ಶ್ರೀಗಳು, ಮಾರನೇ ದಿನ ಕರೋಲ್‌ಬಾಗ್‌ ಬಳಿಯ ಪಾಪಾ ನಗರದಲ್ಲಿನ ನಮ್ಮ ಮನೆಗಳಿಗೆ ಬಂದು ಚಹ, ತಿಂಡಿ ಸ್ವೀಕರಿಸಿ ತಮ್ಮೊಳಗೆ ನಮ್ಮನ್ನೂ ಒಬ್ಬರು ಎಂಬಂತೆ ಕಂಡರು. ಆಗಿನಿಂದ ಗದುಗಿನ ಮಠದೊಂದಿಗಿನ ನಮ್ಮ ನಂಟು ಬೆಳೆಯಿತು’ಎಂದು ಈ ಸಮುದಾಯದ ಮುಖಂಡ ಮನೋಜ್‌ ಭಾರತಿ ಸ್ಮರಿಸಿಕೊಳ್ಳುತ್ತಾರೆ.

‘ತೋಂಟದಾರ್ಯ ಮಠದಲ್ಲಿ ನಡೆಯುವ ಜಾತ್ರೆಗೆ 2004ರಿಂದಲೇ ಪರಿವಾರ ಸಮೇತ ಹೋಗುವುದನ್ನು ರೂಢಿಸಿಕೊಂಡಿದ್ದೇವೆ. ವರ್ಷಕ್ಕೊಮ್ಮೆ ಶ್ರೀಗಳನ್ನು ಭೇಟಿಯಾಗದಿದ್ದರೆ ಏನನ್ನೋ ಕಳೆದುಕೊಂಡ ಭಾವ. ನಮ್ಮ ಸಮುದಾಯದ ಅಭ್ಯುದಯಕ್ಕಾಗಿ ಶ್ರೀಗಳು ಲಕ್ಷಾಂತರ ರೂಪಾಯಿ ವ್ಯಯಿಸಿ ಕರೋಲ್‌ಬಾಗ್‌ನಲ್ಲಿ ಉಚಿತ ಕಂಪ್ಯೂಟರ್‌ ಶಿಕ್ಷಣ ಕೇಂದ್ರ ತೆರೆದಿದ್ದರಿಂದ, ಸಾವಿರಾರು ಯುವಕರು ಹೊಸಜೀವನ ಕಂಡುಕೊಳ್ಳುವಂತಾಗಿದೆ’ ಎಂದು ಅಕ್ಷರ ದಾಸೋಹದ ಬಗ್ಗೆ ಹೊಂದಿದ್ದ ಒಲವನ್ನು ಕೊಂಡಾಡಿದರು.

‘ಅಸ್ಪೃಶ್ಯತೆ, ಅನಕ್ಷರತೆ ಮತ್ತು ಮೌಢ್ಯದಿಂದ ಬಳಲುತ್ತ, ಜಾತಿಯ ಹೆಸರಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಬಸವಣ್ಣನನ್ನು ಪರಿಚಯಿಸಿ, ಶಿಕ್ಷಣದ ಹಿರಿದಾಸೆಯನ್ನು ಮೂಡಿಸಿದ್ದೇ ಗದುಗಿನ ಶ್ರೀಗಳು. ದಾರಿದೀಪವಾಗಿದ್ದ ಶ್ರೀಗಳು ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ನಮ್ಮ ಏಳ್ಗೆ ಬಯಸುತ್ತಿದ್ದ ದೀಪವೊಂದು ನಂದಿದೆ. ಆದರೆ, ದೇವಸ್ವರೂಪಿಯಾದ ಶ್ರೀಗಳ ಆಶೀರ್ವಾದ, ಮಾರ್ಗದರ್ಶನ ಸದಾ ಮುಂದುವರಿಯಲಿದೆ’ ಎಂಬ ಆಶಾಭಾವ ಸಮುದಾಯದ ಅನೇಕ ಹಿರಿಯರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT