ಗ್ಯಾಸ್ ಗೀಸರ್‌ ದುರಂತ: ಉಸಿರುಗಟ್ಟಿ ದಂಪತಿ ದುರ್ಮರಣ

7

ಗ್ಯಾಸ್ ಗೀಸರ್‌ ದುರಂತ: ಉಸಿರುಗಟ್ಟಿ ದಂಪತಿ ದುರ್ಮರಣ

Published:
Updated:

ಬೆಂಗಳೂರು: ಗ್ಯಾಸ್ ಗೀಸರ್‌ ಆನ್ ಮಾಡಿಕೊಂಡು ಸ್ನಾನ ಮಾಡುತ್ತಿದ್ದಾಗ, ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮಹೇಶ್ (35) ಹಾಗೂ ಅವರ ಪತ್ನಿ ಶೀಲಾ (30) ಎಂಬುವರು ದುರ್ಮರಣಕ್ಕೀಡಾಗಿರುವ ಘಟನೆ ರಾಜರಾಜೇಶ್ವರಿ ನಗರ ಬಳಿಯ ಪಟ್ಟಣಗೆರೆಯಲ್ಲಿ ಮಂಗಳವಾರ ನಡೆದಿದೆ.

‘ಶಿವಗಂಗಾ’ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿದ್ದ ದಂಪತಿ, ಸ್ನಾನ ಮಾಡಲೆಂದು ಒಟ್ಟಿಗೇ ಸ್ನಾನದ ಕೋಣೆಗೆ ಹೋಗಿದ್ದಾಗಲೇ ಈ ದುರಂತ ಸಂಭವಿಸಿದೆ ಎಂದು ರಾಜರಾಜೇಶ್ವರಿ ನಗರ ಪೊಲೀಸರು ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಹೇಶ್, ವೈಟ್‌ಫೀಲ್ಡ್ ಬಳಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಏಳು ವರ್ಷಗಳ ಹಿಂದೆ ಶೀಲಾ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಿಬ್ಬರು ಮನೆ ಬಳಿಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಂತೆ ದಂಪತಿಯು ಸ್ನಾನದ ಕೋಣೆಗೆ ಹೋಗಿದ್ದರು ಎಂದು ಪೊಲೀಸರು ಹೇಳಿದರು.

ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲೇ ನೆಲೆಸಿರುವ ದಂಪತಿಯ ಸಂಬಂಧಿಯೊಬ್ಬರು, ಶಾಲೆ ಮುಗಿದ ನಂತರ ಮಕ್ಕಳನ್ನು ಕರೆದುಕೊಂಡು ಮನೆಗೆ ಹೋಗಿದ್ದರು. ಮಹೇಶ್ ಅವರಿಗೆ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಅನುಮಾನಗೊಂಡ ಅವರು, ಅರ್ಧ ಮುಚ್ಚಿದ ಬಾಗಿಲಿನ ಮೂಲಕ ಒಳಗೆ ಹೋಗಿ ನೋಡಿದಾಗಲೇ ವಿಷಯ ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.

‘ಮಹೇಶ್‌ ದಂಪತಿ, ಕೋಣೆಯಲ್ಲಿ ಬೆತ್ತಲೆಯಾಗಿ ಬಿದ್ದಿದ್ದರು. ಅದನ್ನು ಕಂಡು ಗಾಬರಿಯಾಗಿ ಕಿರುಚಾಡಿದೆ. ಸ್ಥಳೀಯರ ಮೂಲಕ ಠಾಣೆಗೆ ಮಾಹಿತಿ ನೀಡಿದೆ’ ಎಂದು ಸಂಬಂಧಿಯು ಹೇಳಿಕೆ ನೀಡಿದ್ದಾರೆ. ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದಲೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.

ಕಾರ್ಬನ್ ಮೋನಾಕ್ಸೈಡ್‌ ಕಾರಣ?: ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ರವಿ ಚನ್ನಣ್ಣನವರ, ‘ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿರುವ ಸಾಧ್ಯತೆ ಇದೆ. ಅದರಿಂದಲೇ ಉಸಿರಾಟಕ್ಕೆ ತೊಂದರೆಯಾಗಿ ದಂಪತಿ ಮೃತಪಟ್ಟಿರಬಹುದು. ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !