ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್ ಹತ್ಯೆ ಪ್ರಕರಣ: 18ನೇ ಆರೋಪಿ ರಿಷಿಕೇಶ್ ಎಸ್‌ಐಟಿ ಕಸ್ಟಡಿಗೆ

‘ದುರ್ಜನರ’ ಹತ್ಯೆಗೆ ಹೊಸ ತಂಡ ಕಟ್ಟುತ್ತಿದ್ದ!
Last Updated 13 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ 18ನೇ ಆರೋಪಿಯಾಗಿ ಬಂಧಿಸಿರುವರಿಷಿಕೇಶ್ ದೇವಾಡಿಕರ್ಅಲಿಯಾಸ್ ಮುರಳಿ ಶಿವ ಮತ್ತಷ್ಟು ಜನರ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ, ಕರ್ನಾಟಕದಲ್ಲಿರುವ ‘ದುರ್ಜನ’ರನ್ನು (ಹಿಂದೂ ಧರ್ಮದ ವಿರುದ್ಧ ಮಾತನಾಡುವವರಿಗೆ ಆರೋಪಿಗಳು ನೀಡಿದ್ದ ಕೋಡ್‌) ಹತ್ಯೆ ಮಾಡಲು ತೆರೆಮರೆಯಲ್ಲೇ ಹೊಸ ತಂಡ ಕಟ್ಟುತ್ತಿದ್ದ ಎಂಬ ಆತಂಕಕಾರಿ ಸಂಗತಿ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಯಿಂದ ಹೊರಬಿದ್ದಿದೆ.

ಜಾರ್ಖಂಡ್ ರಾಜ್ಯದ ಧನಾಬಾದ್‌ ಜಿಲ್ಲೆಯ ಕತ್ರಾಸ್‌ನಲ್ಲಿ ಜ. 9ರಂದು ಬಂಧಿಸಲಾದ ರಿಷಿಕೇಶ್‌ನನ್ನು ಎಸ್‌ಐಟಿ ಅಧಿಕಾರಿಗಳು, ನಗರದ ಒಂದನೇ ಸಿಸಿಎಚ್‌ ನ್ಯಾಯಾಲಯದ ಎದುರು ಸೋಮವಾರ ಹಾಜರುಪಡಿಸಿದರು.

‘ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿ ಮಹತ್ವದ ಪಾತ್ರ ವಹಿಸಿದ್ದಾನೆ. ಮತ್ತಷ್ಟು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ. ಕರ್ನಾಟಕ, ಮಹಾರಾಷ್ಟ್ರದ ಹಲವೆಡೆ ಆತನನ್ನು ಕರೆದೊಯ್ದು ವಿಚಾರಣೆ ನಡೆಸಬೇಕಿದೆ. ಹೀಗಾಗಿ, 30 ದಿನಗಳವರೆಗೆ ಕಸ್ಟಡಿಗೆ ನೀಡಬೇಕು’ ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯ ಕೋರಿದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು 15 ದಿನಗಳವರೆಗೆ (ಜ. 27ರ ವರೆಗೆ) ಕಸ್ಟಡಿಗೆ ನೀಡಿದರು.

ವಕೀಲನ ಅಣತಿಯಂತೆ ಕೆಲಸ: ‘ಬಂಧಿತ ಅಮೋಲ್‌ ಕಾಳೆ,ಗೌರಿ ಹತ್ಯೆ ಪ್ರಕರಣದ ಪ್ರಮುಖ ರೂವಾರಿ. ಕರ್ನಾಟಕದ ಆರೋಪಿಗಳ ತಂಡದ ಮುಖ್ಯಸ್ಥನೂ ಹೌದು. ಅದೇ ರೀತಿಯಲ್ಲೇ ಆರೋಪಿ ರಿಷಿಕೇಶ್, ಮಹಾರಾಷ್ಟ್ರದ ಆರೋಪಿಗಳ ತಂಡದ ಮುಖ್ಯಸ್ಥನೆಂಬ ಅನುಮಾನ ವ್ಯಕ್ತವಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಗೌರಿ ಲಂಕೇಶ್‌ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ರಿಷಿಕೇಶ್ ತಲೆಮರೆಸಿಕೊಂಡಿದ್ದ. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿರುವ ವಕೀಲನ ಜೊತೆ ಈತ ಒಡನಾಟವಿಟ್ಟುಕೊಂಡಿದ್ದ. ವಕೀಲನ ಅಣತಿಯಂತೆ ಆತ ಕೆಲಸ ಮಾಡುತ್ತಿದ್ದ. ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರ ವಿಲೇವಾರಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದನೆಂಬುದಕ್ಕೆ ಕೆಲ ಪುರಾವೆಗಳು ಸಿಕ್ಕಿವೆ’ ಎಂದು ಮೂಲಗಳು ಖಚಿತಪಡಿಸಿವೆ.

ಕೆಲಸ ಮುಂದುವರಿಸುವ ವಿಶ್ವಾಸ: ‘ತಾವು ಪಟ್ಟಿ ಮಾಡಿದ್ದ ದುರ್ಜನರನ್ನು ಮುಗಿಸಲು ಆರೋಪಿಗಳು ಮೊದಲೇ ಸಂಚು ರೂಪಿಸಿದ್ದರು. ಅಷ್ಟರಲ್ಲೇ ಬಹುತೇಕ ಆರೋಪಿಗಳು, ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದರು. ರಿಷಿಕೇಶ್ ಮಾತ್ರ ತಲೆಮರೆಸಿಕೊಂಡಿದ್ದ. ಆತನೇ ಮತ್ತೊಂದು ತಂಡ ಕಟ್ಟಿ ಕೆಲಸ ಮುಂದುವರಿಸುತ್ತಾನೆ ಎಂಬ ವಿಶ್ವಾಸ ಅಮೋಲ್‌ ಕಾಳೆ ಹಾಗೂ ಇತರ ಆರೋಪಿಗಳಿಗೆ ಇತ್ತು’ ಎನ್ನಲಾಗಿದೆ.

‘ಮಹಾರಾಷ್ಟ್ರದ ಎಸ್‌ಐಟಿ, ಸಿಬಿಐ ಅಧಿಕಾರಿಗಳು ರಿಷಿಕೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಈತ ಆಗಾಗ ಮಹಾರಾಷ್ಟ್ರಕ್ಕೂ ಬಂದು ಹೋಗುತ್ತಿದ್ದ. ಅಷ್ಟಾದರೂ ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಆತನ ಮೇಲೆ ಎಸ್‌ಐಟಿ ತಂಡ ಸಹ ನಿಗಾ ಇರಿಸಿತ್ತು. ಆತನೇ ರಿಷಿಕೇಶ್ ಎಂಬುದನ್ನು ಖಾತ್ರಿಯಾಗುತ್ತಿದ್ದಂತೆ ಬಂಧಿಸಲಾಯಿತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT