ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡ್‌ ನೋಡ್ತ್‌ ದಿನಮಾನ.. ನಡದ...ದ..

Last Updated 11 ಜೂನ್ 2019, 2:45 IST
ಅಕ್ಷರ ಗಾತ್ರ

ಧಾರವಾಡ:ಅಭಿಪ್ರಾಯ ಭೇದವಿದ್ದ ಮಾತ್ರಕ್ಕೆ ವ್ಯಕ್ತಿತ್ವ ಹರಣ ಮಾಡುವುದು ಒಳ್ಳೆಯದಲ್ಲ ಎಂಬುದು ನನ್ನ ಖಚಿತ ನಿಲುವು. ಗಿರೀಶ ಕಾರ್ನಾಡ ಒಬ್ಬ ಅದ್ಭುತ ಮಾನವತಾವಾದಿ ಕಲಾವಿದ, ಬರಹಗಾರ, ನಟ. ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಹೀಗೆ ಹೇಳಬಲ್ಲರು.

54 ವರ್ಷಗಳಿಂದ, ನನ್ನ 15ನೇ ವರ್ಷದಿಂದ ಮನೋಹರ ಗ್ರಂಥಮಾಲಾ, ಧಾರವಾಡದೊಂದಿಗೆ ನನಗೆ ಸಂಬಂಧವಿದೆ. ಅಂದಿನಿಂದ ಕಾರ್ನಾಡರನ್ನೂ ಹತ್ತಿರದಿಂದ ನೋಡಿದ್ದೆ. ನಾಟಕ, ನಿರ್ದೇಶನ, ನಟನೆ, ಬರಹಗಳಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದ ಕಾರ್ನಾಡರು ಮನೋಹರ ಗ್ರಂಥಮಾಲಾ, ಧಾರವಾಡದ ವಿಷಯ ಬಂತೆಂದರೆ, ಹುರುಪಿನಿಂದ, ಖುಷಿಯಿಂದ ಅಟ್ಟದ (ಮನೋಹರ ಗ್ರಂಥಮಾಲಾ) ವರ್ಣಿಸುತ್ತಿದ್ದರು. ಧಾರವಾಡಕ್ಕೆ ಯಾರೇ ಹೋಗುವವರಿದ್ದರೂ ಅವರಿಗೆ ಮನೋಹರ ಗ್ರಂಥ ಮಾಲಾಕ್ಕೆ ಹೋಗಿ ಬರಲು ಸಲಹೆ ಕೊಡುತ್ತಿದ್ದರು.

ತಮ್ಮ ಸಾಹಿತ್ಯ ಕೃಷಿ ಪ್ರಾರಂಭ ಮಾಡಿದ ದಿನಗಳಲ್ಲಿ ಧಾರವಾಡಕ್ಕೆ ಬಂದಾಗ ಹೆಚ್ಚಿನ ಸಮಯವನ್ನು ಅವರು ಅಟ್ಟದಲ್ಲಿ ಕಳೆಯು
ತ್ತಿದ್ದರು. ಕೀರ್ತಿನಾಥ ಕುರ್ತಕೋಟಿ, ಗಿರೀಶ ಕಾರ್ನಾಡ, ಜಿ.ಬಿ. ಜೋಶಿ ಮುಕ್ತವಾಗಿ ಹರಟೆ ಹೊಡೆಯುತ್ತ ಕಾಲ ಕಳೆಯುತ್ತಿದ್ದರು. ಅಟ್ಟಕ್ಕೆ ಯಾರೇ ಬರಲಿ, ಅವರ ಜತೆ ಅವರು ಮಾತನಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ.

ಮನೋಹರ ಗ್ರಂಥಮಾಲಾವನ್ನು ‘ಮುಕ್ತ ವಿಶ್ವವಿದ್ಯಾಲಯ’ ಎಂದೇ ಕರೆಯುತ್ತಿದ್ದರು. ಹಾಗೆಯೇ ಜಿ.ಬಿ. ಜೋಶಿಯವರನ್ನು (ಸ್ಥಾಪಕ) ‘ಅವ್ಯವಹಾರಿಕ’ ಜೀನಿಯಸ್‌ ಎಂದೇ ಕರೆದಿದ್ದರು. ಒಂದು ವೇಳೆ ಕೀರ್ತಿನಾಥ ಕುರ್ತಕೋಟಿ ಅವರು ‘ಯಯಾತಿ’ಯನ್ನು ಪರಿಶೀಲಿಸಿ, ಮನೋಹರ ಗ್ರಂಥಮಾಲೆಯಿಂದ ಪ್ರಕಟಿಸದೇ ಹೋಗಿದ್ದರೆ ತಾವು ಕನ್ನಡದಲ್ಲಿ ಲೇಖಕರೇ ಆಗುತ್ತಿರಲಿಲ್ಲ ಎಂದು ಅನೇಕ ಬಾರಿ ಕಾರ್ನಾಡರು ಹೇಳಿಕೊಂಡಿದ್ದರು. ನಂತರದ ತಮ್ಮೆಲ್ಲ ಕೃತಿಗಳೂ ಅಲ್ಲಿಂದಲೇ ಹೊರಬರಬೇಕು ಎಂದು ನಿರ್ಣಯಿಸಿದರು. ಅದು ಹಾಗೆಯೇ ಆಯಿತು.

ಸಾಮಾನ್ಯವಾಗಿ ಜಿ.ಬಿ. ಜೋಶಿಯವರು ತಮ್ಮ ಯಾವುದೇ ಪ್ರಕಟಣೆಗಳನ್ನು ಮರು ಮುದ್ರಿಸುತ್ತಿರಲಿಲ್ಲ. ಆದರೆ, ಕಾರ್ನಾಡರ ಹಟದಿಂದಾಗಿ ಗ್ರಂಥಮಾಲೆಯಿಂದ ಕೃತಿಗಳು ಮರು ಮುದ್ರಣಗೊಂಡವು. ಕೀರ್ತಿನಾಥ ಕುರ್ತಕೋಟಿ ನಂತರ ಗಿರೀಶ ಕಾರ್ನಾಡರೇ ಗ್ರಂಥಮಾಲೆಯ ಸಾಹಿತ್ಯ ಸಲಹೆಗಾರರಾಗಿದ್ದರು.

ಕಾರ್ನಾಡರು ಬೇಂದ್ರೆಯವರ ಕವಿತೆ, ಬರಹಗಳನ್ನು ತುಂಬ ಖುಷಿಯಿಂದ ಓದುತ್ತಿದ್ದರು. ಅವರೇ ನಿರ್ದೇಶಿಸಿ, ನಿರ್ಮಿಸಿದ ದ.ರಾ. ಬೇಂದ್ರೆ ಸಾಕ್ಷ್ಯಚಿತ್ರ ಅವರ ಅಭಿಮಾನಕ್ಕೆ ನಿದರ್ಶನ.

‘ನೋಡ್‌ ನೋಡ್ತ್‌ ದಿನಮಾನಾ ಆಡಾಡ್ತ... ಆಯುಷ್ಯ... ನಡದ...ದ ನಡದ...ದ ನಡದ...ದ’

ಈ ಮೇಲಿನ ಸಾಲುಗಳು ಕವಿ ಬೇಂದ್ರೆಯವರು ತಮ್ಮ ಕವಿತೆ ‘ನನ್ನ ಕಿನ್ನರಿ’ಯಲ್ಲಿ ಬರೆದವುಗಳು. ‘ಗರಿ’ ಸಂಕಲನದ ಕವನವಿದು. ಕಾರ್ನಾಡರು ತುಂಬ ಮೆಚ್ಚಿಕೊಂಡ ಕವಿತೆ ಇದು. ತಮ್ಮ ಆತ್ಮಕಥನದ ಪೂರ್ವಾರ್ಧ ಬರೆದು ಮುಗಿಸಿದಾಗ ಪುಸ್ತಕದ ಶೀರ್ಷಿಕೆಯಾಗಿ ಈ ಕವನದ ಸಾಲು ‘ಆಡಾಡ್ತ ಆಯುಷ್ಯ’ ಆರಿಸಿಕೊಂಡರು. ಇಷ್ಟರಲ್ಲಿಯೇ ಉತ್ತರಾರ್ಧವನ್ನು ಬರೆದುಕೊಡುವೆ ಎಂದು ಹೇಳಿದ್ದರು. ಅದು ‘ನೋಡ್‌ ನೋಡ್ತ್ ದಿನಮಾನ’ ಎಂದಾಗಲಿತ್ತು.

ನಾನು ಕಂಡ ಹಾಗೆ ಅವರೆಂದೂ ತಮ್ಮ ಅಭಿಪ್ರಾಯವನ್ನು, ಆಲೋಚನೆಯನ್ನು ಇನ್ನೊಬ್ಬರ ಮೇಲೆ ಹೇರಲಿಲ್ಲ. ಅಷ್ಟೇ ಅಲ್ಲ ಇತರರ ಅಭಿಪ್ರಾಯವನ್ನು ಗೌರವಿಸುವವರೂ ಆಗಿದ್ದರು. ಒಬ್ಬ ಅತ್ಯುತ್ತಮ ಮಾನವತಾವಾದಿಯನ್ನು ಕಳೆದುಕೊಂಡಂತಾಗಿದೆ.

(ಲೇಖಕರು ಗಿರೀಶ ಕಾರ್ನಾಡರ ಒಡನಾಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT