ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಬದ್ಧ: ರಾಜ್ಯಪಾಲ ವಾಲಾ

ವಿರೋಧ ಪಕ್ಷ ಬಿಜೆಪಿ ಸದಸ್ಯರ ಧಿಕ್ಕಾರ * ಧರಣಿ ಮಧ್ಯೆಯೇ ಸದನವನ್ನು ಉದ್ದೇಶಿಸಿ ಭಾಷಣ
Last Updated 6 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿಗಳು ಹಾಗೂ ಮೈತ್ರಿ ಸರ್ಕಾರದ ಪಾಲುದಾರರಾದ ಕಾಂಗ್ರೆಸ್‌ ನಾಯಕರ ವಿರೋಧದ ಮಧ್ಯೆಯೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಿಯೇ ತೀರುವುದಾಗಿ ರಾಜ್ಯ ಸರ್ಕಾರ ರಾಜ್ಯಪಾಲರ ಮೂಲಕ ಪ್ರತಿಪಾದಿಸಿದೆ.

ಬುಧವಾರ ಆರಂಭವಾದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ವಿರೋಧ ಪಕ್ಷ ಬಿಜೆಪಿ ಸದಸ್ಯರ ಧಿಕ್ಕಾರ, ಧರಣಿ ಮಧ್ಯೆಯೇ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು,‘ಸಮಾಜದ ಬಡವರ್ಗದ ಬುದ್ಧಿವಂತ ಮಕ್ಕಳು ಇಂಗ್ಲಿಷ್‌ ಜ್ಞಾನದ ಕೊರತೆಯಿಂದಾಗಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುವುದಕ್ಕೆ ನನ್ನ ಸರ್ಕಾರ ಬದ್ಧ’ ಎಂದರು.

‘ಆದರೂ, ಕನ್ನಡಕ್ಕೆ ಪ್ರಾಮುಖ್ಯತೆ ನೀಡುವ ವಿಷಯದಲ್ಲಿ ಯಾವುದೇ ರಾಜಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

2019–20ನೇ ಶೈಕ್ಷಣಿಕ ವರ್ಷದಿಂದ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

ಈ ನಿಲುವನ್ನು ರಾಜ್ಯಪಾಲರು ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದರು.ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವ್ಯಾಸಂಗದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು 3 ಲಕ್ಷ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಶುಲ್ಕ ವಿನಾಯಿತಿ ನೀಡಲು ₹95 ಕೋಟಿ ಖರ್ಚು ಮಾಡಲಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮೂಲಸೌಕರ್ಯ ಸೃಜಿಸಲು ಅಂದಾಜು ₹750 ಕೋಟಿ ಖರ್ಚು ಮಾಡಿದೆ ಎಂದೂ ಅವರು ಹೇಳಿದರು.

ಈ ಅಧಿವೇಶನವು, ರಾಜ್ಯವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಸವಾಲುಗಳ ಮೇಲಿನ ಅರ್ಥ‍ಪೂರ್ಣ ಚರ್ಚೆಗೆ ಸಾಕ್ಷಿಯಾಗುತ್ತದೆಂದು ಮತ್ತು ಯೋಜನೆಗಳ ಅನುಷ್ಠಾನ, ಸೇವಾ ಪೂರೈಕೆಯನ್ನು ಸುಧಾರಿಸುವುದಕ್ಕಾಗಿ ಉತ್ತಮ ಚಿಂತನೆಯುಳ್ಳ ಸೃಜನಾತ್ಮಕ ಸಲಹೆಗಳು ಮೂಡಿ ಬರುವುದಕ್ಕೆ ಕಾರಣವಾಗುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ರಾಜ್ಯವು ಎಲ್ಲ ಬಗೆಯ ತುರ್ತು ಹಾಗೂ ಅಪಾಯ ಕರೆಗಳಿಗಾಗಿ ಒಂದೇ ತುರ್ತು ಸಂಖ್ಯೆಯನ್ನು ಹೊಂದಿರುವ ‘ತುರ್ತು ಪ್ರತಿಸ್ಪಂದನಾ ನೆರವು ವ್ಯವಸ್ಥೆ’ ಜಾರಿಗೊಳಿಸುತ್ತಿದೆ ಎಂದು ವಜುಭಾಯಿ ವಾಲಾ ತಿಳಿಸಿದರು.

ವಿರೋಧ ಪಕ್ಷ ನಾಯಕರ ಪ್ರತಿಕ್ರಿಯೆಗಳು
ರಾಜ್ಯದಲ್ಲಿ ಅಧಿಕಾರ ನಡೆಸಲು ಸಮ್ಮಿಶ್ರ ಸರ್ಕಾರಕ್ಕೆ ನೈತಿಕ ಹಕ್ಕಿಲ್ಲ. ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದರು. ಅದಕ್ಕಾಗಿ ನಾವು ರಾಜ್ಯಪಾಲರ ಭಾಷಣ ಬಹಿಷ್ಕರಿಸಿದೆವು. ಅವರ ಶಾಸಕರಿಗೇ ಸರ್ಕಾರ ಬೇಕಾಗಿಲ್ಲ. ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ನಂಬಿಕೆ ಇಲ್ಲ. ಬೆಳಗಾದರೆ ಸಾಕು ಸಿದ್ದರಾಮಯ್ಯ ಬೆಂಬಲಿಗರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೆಲಸ ಮಾಡಲಾಗುತ್ತಿಲ್ಲ ಎಂದು ಸ್ವತಃ ಮುಖ್ಯಮಂತ್ರಿಯವರೇ ಹೇಳಿದ್ದಾರೆ.

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

**

ರಾಜ್ಯಪಾಲರ ಭಾಷಣ ಸತ್ಯಕ್ಕೆ ದೂರವಾಗಿದೆ. ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ. ಭಾಷಣದಲ್ಲಿ ಯೋಜನೆಗಳ ಕುರಿತು ತಪ್ಪು ಅಂಕಿ ಅಂಶಗಳಿವೆ. ರೈತರ ಸಾಲಮನ್ನಾ, ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ.‌ ಈ ಸರ್ಕಾರ ಬಹಳ ದಿನ ಇರುವುದಿಲ್ಲ. ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ.

- ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

**

ಶಾಸಕರ ವಿಶ್ವಾಸ ಕಳೆದುಕೊಂಡಿರುವ ಮೈತ್ರಿ ಸರ್ಕಾರಕ್ಕೆ ಅಧಿವೇಶನ ನಡೆಸುವ ಅಧಿಕಾರವೇ ಇಲ್ಲ. ಏನೂ ಕೆಲಸ ಆಗದೇ ಇದ್ದರೂ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ. ಬಜೆಟ್ ಮಂಡಿಸಿದರೂ ಅದಕ್ಕೆ ಯಾವುದೇ ಮಹತ್ವ ಇರುವುದಿಲ್ಲ.

- ಬಸವರಾಜ ಬೊಮ್ಮಾಯಿ, ಬಿಜೆಪಿ ಶಾಸಕ

**

ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ. ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ ಶಾಸಕರೇ ಒಳಸಂಚು ಮಾಡುತ್ತಿದ್ದಾರೆ. ಸುಳ್ಳು ಮಾಹಿತಿ ಇರುವ ಭಾಷಣವನ್ನು ರಾಜ್ಯಪಾಲರಿಂದ ಓದಿಸಲಾಗಿದೆ. ಹಾಗಾಗಿ, ಕಲಾಪಕ್ಕೆ ಅಡ್ಡಿಪಡಿಸಿದ್ದೇವೆ.

- ಆರ್. ಅಶೋಕ, ಬಿಜೆಪಿ ಶಾಸಕ

**
ರಾಜ್ಯಪಾಲರು ಹೇಳಿದ್ದೇನು?

*ಬೆಳೆ ಸಾಲ ಮನ್ನಾ ಯೋಜನೆಯಡಿ ಜನವರಿ ಅಂತ್ಯದ ವರೆಗೆ 3.28 ಲಕ್ಷ ಸಾಲ ಮನ್ನಾಕ್ಕಾಗಿ ₹1,611 ಕೋಟಿ ಬಿಡುಗಡೆ.

* ಮೀನು ಕೆಡದಂತೆ ಸಂರಕ್ಷಿಸಿಡಲು ಮತ್ಸ್ಯ ಜೋಪಾನ ಯೋಜನೆಯಡಿ 10 ಶೀತಲೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

* ಸಕ್ಕರೆ ಕಾರ್ಖಾನೆಗಳು 2018ನೇ ಸಾಲಿನ ಏಪ್ರಿಲ್‌ ತಿಂಗಳಲ್ಲಿ ರೈತರಿಗೆ ಕೊಡಬೇಕಿದ್ದ ₹2,135 ಕೋಟಿಗೂ ಅಧಿಕ ಬಾಕಿ ಮೊತ್ತವನ್ನು ಈ ವರ್ಷದ ಜನವರಿ ಅಂತ್ಯಕ್ಕೆ ₹5 ಕೋಟಿಗೆ ಇಳಿಕೆಯಾಗುವಂತೆ ನೋಡಿಕೊಂಡಿದೆ.

* ಹಾಲು ಉತ್ಪಾದಕರ ಖಾತೆಗಳಿಗೆ ಪ್ರೋತ್ಸಾಹಧನವನ್ನು ನೇರವಾಗಿ ವರ್ಗಾಯಿಸುವುದಕ್ಕಾಗಿ ‘ಕ್ಷೀರಸಿರಿ’ಯಂತಹ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಅನುದಾನವನ್ನು ನೇರವಾಗಿ ವರ್ಗಾಯಿಸುವುದಕ್ಕಾಗಿ ಆಧಾರ್‌ ಆಧಾರಿತ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT