ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ರಚನೆಗೆ ಸರ್ಕಾರದ ನಿರ್ಲಕ್ಷ್ಯ

ವಿಧಾನ ಸಭಾಧ್ಯಕ್ಷ ರಮೇಶ್‌ ಕುಮಾರ್‌ ವಿರುದ್ಧ ಕೇಳಿ ಬಂದ ಆರೋಪ
Last Updated 23 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಆಪರೇಷನ್‌ ಕಮಲ’ಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರ ಹೆಸರು ಪ್ರಸ್ತಾಪವಾದ ಕಾರಣ ಅದರ ಸತ್ಯಾಸತ್ಯತೆಯ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವುದಾಗಿ ಸರ್ಕಾರ ವಿಧಾನಸಭೆಯಲ್ಲಿ ಪ್ರಕಟಿಸಿತ್ತು. ಆದರೆ, ಈವರೆಗೂ ಎಸ್‌ಐಟಿ ರಚನೆ ಆಗಿಲ್ಲ.

‘ಆಪರೇಷನ್‌ ಕಮಲ’ದ ಮೂಲಕಬಿಜೆಪಿ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಬಜೆಟ್‌ ಮಂಡನೆಗೆ ಮೊದಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತುರ್ತು ಮಾಧ್ಯಮಗೋಷ್ಠಿ ಕರೆದು ಆಡಿಯೋ ಬಾಂಬ್‌ ಸಿಡಿಸಿದ್ದರು.

ಜೆಡಿಎಸ್‌ ಶಾಸಕ ನಾಗನಗೌಡ ಅವರ ಪುತ್ರ ಶರಣುಗೌಡ ಅವರನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನುಭೇಟಿ ಮಾಡಿಸಲಾಗಿತ್ತು. ಆ ಸಂದರ್ಭದಲ್ಲಿ ನಾಗನಗೌಡ ಅವರನ್ನು ಬಿಜೆಪಿಯತ್ತ ಸೆಳೆಯಲು ಆಮಿಷ ಒಡ್ಡಲಾಗಿತ್ತು. ರಮೇಶ್‌ ಕುಮಾರ್‌ ಅವರಿಗೂ ಹಣ ಸಂದಾಯ ಮಾಡಿರುವುದಾಗಿ ಸಂಭಾಷಣೆಯಲ್ಲಿ ದಾಖಲಾಗಿತ್ತು. ಇದು ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.

ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ರಮೇಶ್‌ ಕುಮಾರ್‌ ಅವರು, ‘ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಹಾದಿ–ಬೀದಿಯಲ್ಲಿ ಹೋಗುವವರು ನನ್ನ ಹೆಸರು ಬಳಸಲು ಬಿಡುವುದಿಲ್ಲ. ಧ್ವನಿಮುದ್ರಿಕೆಯಲ್ಲಿರುವ ಸಂಭಾಷಣೆ ಯಾರದು ಎಂಬುದು ಗೊತ್ತಿಲ್ಲ. ಈ ಬಗ್ಗೆ ವಿಶೇಷ ತನಿಖೆ ನಡೆಸಿ, 15 ದಿನಗಳಲ್ಲಿ ವರದಿ ನೀಡಬೇಕು. ಇದರಿಂದ ಜನರ ಮನಸ್ಸಿನಲ್ಲಿ ಮೂಡಿರುವ ಸಂಶಯ ಬಗೆಹರಿಯಬೇಕು. ಆಗ ಮಾತ್ರ ನನಗೆ ಸಮಾಧಾನ ಆಗುತ್ತದೆ’ ಎಂದು ಹೇಳಿದ್ದರು.

ಈ ವಿಷಯದ ಕುರಿತು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿತ್ತು. ಅಂತಿಮವಾಗಿ ವಿಶೇಷ ತನಿಖಾ ದಳದಿಂದ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದರು. ಆದರೆ, ಈವರೆಗೂ ಎಸ್‌ಐಟಿ ತನಿಖೆ ಆಗಿಲ್ಲ. ವಿಧಾನಮಂಡಲ ಅಧಿವೇಶನ ಮುಗಿದ ತಕ್ಷಣ ಎಸ್‌ಐಟಿ ರಚಿಸುವ ಯಾವುದೇ ಪ್ರಯತ್ನಗಳೂ ನಡೆಯಲಿಲ್ಲ. ಆರಂಭದಲ್ಲಿ ಪೊಲೀಸರಿಂದ ನಡೆಸಬೇಕೊ ಅಥವಾ ಬೇರೆ ಅಧಿಕಾರಿಗಳಿಂದ ತನಿಖೆ ನಡೆಸಬೇಕೊ ಎಂಬ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ಆಗಿತ್ತು. ಆ ನಂತರ ಎಲ್ಲರೂ ಸುಮ್ಮನಾದರು ಎಂದು ಮೂಲಗಳು ತಿಳಿಸಿವೆ.

ಆ ಬಳಿಕ ಕಾಂಗ್ರೆಸ್‌– ಜೆಡಿಎಸ್‌ ನಡುವಿನ ಸಂಬಂಧ ಹಳಸಿತು. ಕಾಂಗ್ರೆಸ್‌ನಲ್ಲಿ ಕೆಲವು ಶಾಸಕರ ಬಂಡಾಯ ಆ ಪಕ್ಷಕ್ಕೆ ದೊಡ್ಡ ತಲೆ
ನೋವಾಗಿ ಪರಿಣಮಿಸಿತು. ಲೋಕಸಭಾಚುನಾವಣೆಯೂ ಬಂದಿದ್ದರಿಂದ ಎಸ್‌ಐಟಿ ರಚನೆಯ ವಿಚಾರ ನನೆಗುದಿಗೆ ಬಿದ್ದಿತು.ಆಡಿಯೋದಲ್ಲಿ ಕೇಳಿ ಬಂದ ಆರೋಪಗಳ ಸತ್ಯಾಸತ್ಯತೆಯ ತನಿಖೆಗೆ ಆಗ್ರಹಿಸಿದ್ದ ರಮೇಶ್‌ ಕುಮಾರ್‌ ಅವರೂ ಈಗ ಏಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಆಮಿಷ ಒಡ್ಡಿದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಸರ್ಕಾರಏಕೆ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT