ಶನಿವಾರ, ಡಿಸೆಂಬರ್ 14, 2019
24 °C
ಜಂತಕಲ್‌ ಅಕ್ರಮ ಗಣಿಗಾರಿಕೆ ಪ್ರಕರಣ

ಬಡೇರಿಯಾ ವಿರುದ್ಧ ಕ್ರಮಕ್ಕೆ ಹಿಂದೇಟು?

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಂತಕಲ್‌ ಗಣಿ ಕಂಪನಿ ಅಕ್ರಮವಾಗಿ ತೆಗೆದಿದ್ದ ಅದಿರನ್ನು ಸಾಗಿಸಲು ‍‍ನಿಯಮಬಾಹಿರವಾಗಿ ಪರವಾನಗಿ ನೀಡಿದ ಆರೋಪಕ್ಕೆ ಒಳಗಾಗಿರುವ ಹಿರಿಯ ಐಎಎಸ್‌ ಅಧಿಕಾರಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಕೆಎಸ್‌ಎಸ್‌ಐಡಿಸಿ) ಗಂಗಾರಾಂ ಬಡೇರಿಯಾ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ಜಂತಕಲ್‌ ಪ್ರಕರಣದಲ್ಲಿ ಬಡೇರಿಯಾ ಅವರ ಪಾತ್ರ ಇರುವುದರಿಂದ ದೋಷಾರೋಪ ಪಟ್ಟಿ ಸಲ್ಲಿಸಲು ಒಪ್ಪಿಗೆ ನೀಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ಐದು ತಿಂಗಳ ಹಿಂದೆಯೇ ಪತ್ರ ಬರೆದಿದೆ. ಆದರೆ, ಪತ್ರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಎಸ್‌ಐಟಿ ಮೂಲಗಳು ಸ್ಪಷ್ಟಪಡಿಸಿವೆ.  

‘ಈ ಬಗ್ಗೆ ಮೇಲಿಂದ ಮೇಲೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ನಾವು ಅನುಮತಿ ಕೇಳಿ ಬರೆದಿರುವ ಪತ್ರ ಎಲ್ಲಿದೆ ಗೊತ್ತಿಲ್ಲ. ಪತ್ರ ಎಲ್ಲಿದೆ? ಅದರ ಸ್ಥಿತಿ ಏನಾಗಿದೆ? ಎಂದು ತಿಳಿಯುವ ಪ್ರಯತ್ನ ಮುಂದುವರಿದಿದೆ’ ಎಂದೂ ಮೂಲಗಳು ತಿಳಿಸಿವೆ.

ಎಂಎಂಟಿಸಿ ನಿಗದಿಪಡಿಸಿದ್ದಕ್ಕಿಂತಲೂ ಕಡಿಮೆ ದರಕ್ಕೆ ಅದಿರು ಮಾರಾಟ ಮಾಡಿ ಮೈಸೂರು ಮಿನರಲ್ಸ್‌ ಕಾರ್ಪೊರೇಷನ್‌ಗೆ (ಎಂಎಂಎಲ್‌) ಗೆ ₹632 ಕೋಟಿ ನಷ್ಟ ಮಾಡಿರುವ ಆರೋ‍‍ಪಕ್ಕೆ ಒಳಗಾಗಿರುವ ಕೆಲ ಐಎಎಸ್‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿರುವ ಬೆನ್ನಲ್ಲೇ, ಬಡೇರಿಯಾ ಪ್ರಕರಣದಲ್ಲೂ ಹಿಂದೇಟು ಹಾಕುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜಂತಕಲ್‌ ಗಣಿ ಕಂಪನಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಅಕ್ರಮವಾಗಿ ಹೊರತೆಗೆದಿದ್ದ 1.7 ಲಕ್ಷ ಟನ್‌ ಅದಿರು ಸಾಗಣೆಗೆ ಬಡೇರಿಯಾ ಗಣಿ ಇಲಾಖೆ ನಿರ್ದೇಶಕರಾಗಿದ್ದಾಗ ಪರವಾನಗಿ ನೀಡಿದ್ದರು. ಕಂಪನಿಯ ವಿನೋದ್‌ ಗೋಯಲ್‌ ಅವರು ಸಲ್ಲಿಸಿದ್ದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ (ಎಂಒಇಎಫ್‌) ಫೋರ್ಜರಿ ನಿರಾಕ್ಷೇಪಣಾ ಪತ್ರದ ಮೇಲೆ ಈ ಪರವಾನಗಿ ವಿತರಿಸಲಾಗಿತ್ತು.

‘ಮುಖ್ಯಮಂತ್ರಿ ಕಚೇರಿಯ ಒತ್ತಡ ಹಾಗೂ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಎರಡು ಗಂಟೆ ಗಡುವು ವಿಧಿಸಿದ್ದರಿಂದ ಪರವಾನಗಿ ನೀಡಲಾಯಿತು’ ಎಂಬುದಾಗಿ ಬಡೇರಿಯಾ ಕಡತದ ಮೇಲೆ ಟಿಪ್ಪಣಿ ಬರೆದಿದ್ದರು. ಅದನ್ನು ಬಿಟ್ಟು ಆರೋಪ ಸಾಬೀತು ಪಡಿಸುವ ಯಾವುದೇ ಸಾಕ್ಷ್ಯಾಧಾರಗಳೂ ಇರಲಿಲ್ಲ. ಈ ಕಾರಣಕ್ಕೆ ಕುಮಾರಸ್ವಾಮಿ ಅವರ ಮೇಲಿನ ಆರೋಪ ಕೈಬಿಡಲಾಯಿತು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ. 

‘ಬಡೇರಿಯಾ ಅವರ ಹಂತದಲ್ಲೇ ಸೃಷ್ಟಿಸಲಾಗಿದ್ದ ಕಡತ ಅಲ್ಲೇ ವಿಲೇವಾರಿ ಆಗಿದೆ. ಅಲ್ಲಿಂದ ಮುಂದಕ್ಕೆ ಹೋಗಿಲ್ಲ. ಅಲ್ಲದೆ, ಅಧಿಕಾರಿ ಪುತ್ರ ಗಗನ್‌ ಬಡೇರಿಯಾ ಅವರ ಬ್ಯಾಂಕ್‌ ಖಾತೆಗೆ ಎರಡು ಕಂತುಗಳಲ್ಲಿ ₹ 20 ಲಕ್ಷ ಜಮೆಯಾದ ಕೆಲ ದಿನಗಳಲ್ಲಿ ಅದಿರು ಸಾಗಣೆಗೆ ಪರವಾನಗಿ ಕೊಡಲಾಗಿದೆ. ಅಕ್ರಮದಲ್ಲಿ ಅಧಿಕಾರಿಯ ಪಾತ್ರ ಇರುವುದು ಮೇಲ್ನೋಟಕ್ಕೇ ಕಾಣುತ್ತಿದೆ’ ಎಂದು ಎಸ್ಐಟಿ ಕೇಳಿದೆ. ವಿನೋದ್‌ ಗೋಯಲ್‌ ಹಾಗೂ ಗಗನ್‌ ಬಡೇರಿಯಾ ಅವರ ವಿರುದ್ಧ ಕಳೆದ ಮಾರ್ಚ್‌ನಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಎಸ್‌ಐಟಿ ಬರೆದಿರುವ ಪತ್ರದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಗಣಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ಅಕ್ರಮಗಳಿಗೆ ಎಳ್ಳು ನೀರು?

‘ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಕ್ರಮೇಣ ಎಳ್ಳುನೀರು ಬಿಡಲಾಗುತ್ತಿದೆ’ ಎಂಬ ಆರೋಪ ಕೇಳಿಬರುತ್ತಿದೆ.

ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಕೆಲವನ್ನು ‘ಮೇಲ್ನೋಟಕ್ಕೆ ಆರೋಪಗಳಲ್ಲಿ ಸತ್ಯಾಂಶ ಇಲ್ಲ’ ಎಂಬ ಕಾರಣ ನೀಡಿ ಮುಕ್ತಾಯಗೊಳಿಸಲಾಗಿದೆ ಎಂದೂ ಟೀಕಿಸಲಾಗುತ್ತಿದೆ.

ಪ್ರತಿಕ್ರಿಯೆಗೆ ಸಿಗದ ಅಧಿಕಾರಿಗಳು

ಎಸ್‌ಐಟಿ ಬರೆದಿರುವ ಪತ್ರದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಗಣಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ಯಾವುದೇ ಸರ್ಕಾರ /ಸಿ.ಎಂ ಭ್ರಷ್ಟರನ್ನು ರಕ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಯಾರಿಗೂ ಸುಪ್ರೀಂ ಕೋರ್ಟ್‌ ಮತ್ತು ಲೋಕಾಯುಕ್ತದ ಬಗ್ಗೆ ಗೌರವ ಇಲ್ಲದಿರುವುದು ದುರದೃಷ್ಟಕರ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌. ಹಿರೇಮಠ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)