ಸರ್ಕಾರ ಪತನ: ವದಂತಿಗಳದ್ದೇ ದರ್ಬಾರು

7
ಬಿಜೆಪಿಯತ್ತ ವಾಲುತ್ತಿದ್ದಾರಾ ಆನಂದಸಿಂಗ್, ನಾಗೇಂದ್ರ?

ಸರ್ಕಾರ ಪತನ: ವದಂತಿಗಳದ್ದೇ ದರ್ಬಾರು

Published:
Updated:

ಬೆಂಗಳೂರು/ಹೊಸಪೇಟೆ: ಸಚಿವ ಸ್ಥಾನ ಕೈತಪ್ಪಿರುವ ಅತೃಪ್ತ ಕಾಂಗ್ರೆಸ್ ಶಾಸಕರ ಗುಂಪು ಪಕ್ಷ ತೊರೆಯಲು ಸದ್ದಿಲ್ಲದೇ ಸಿದ್ಧತೆ ನಡೆಸಿದ್ದು, ಸರ್ಕಾರ ಪತನವಾಗಲಿದೆ ಎಂಬ ವದಂತಿಗಳು ದಟ್ಟವಾಗಿ ಹಬ್ಬುತ್ತಿವೆ.

‘ಆಪರೇಷನ್ ಕಮಲ’ದ ಯತ್ನ ಮಾಡುತ್ತಿಲ್ಲ ಎಂದು ಬಿಜೆಪಿಯ ರಾಜ್ಯ ನಾಯಕರು ಬಲವಾಗಿ ಪ್ರತಿಪಾದಿಸುತ್ತಿದ್ದರೂ ಪಕ್ಷದ ವರಿಷ್ಠರು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟದ ಸರ್ಕಾರಕ್ಕೆ ಅನಿರೀಕ್ಷಿತ ಆಘಾತ ನೀಡಲು ಅಣಿಯಾಗಿದ್ದಾರೆ ಎಂದು ಆ ಪಕ್ಷದ ಮೂಲಗಳು ಹೇಳುತ್ತಿವೆ.

‘ಬಿಜೆಪಿಯವರು ಎಷ್ಟೇ ಪ್ರಯತ್ನ ಪಟ್ಟರೂ ರಮೇಶ ಜಾರಕಿಹೊಳಿ ಸೇರಿದಂತೆ ಯಾವ ಶಾಸಕರು ಪಕ್ಷ ತೊರೆಯುವುದಿಲ್ಲ. ಅದೆಲ್ಲ ಬರೀ ಊಹಾಪೋಹ ಅಷ್ಟೇ’ ಎಂದು ಕಾಂಗ್ರೆಸ್‌ ನಾಯಕರು ಬಲವಾಗಿ ನಂಬಿದ್ದಾರೆ. 

ವರಿಷ್ಠರ ಸೂಚನೆ: ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲಿನಿಂದ ಹಾಗೂ ಬಂದ ಮೇಲೆ ರಾಜ್ಯದಲ್ಲಿ ಸರ್ಕಾರ ರಚಿಸುವ ಯತ್ನವನ್ನು  ಬಿಜೆಪಿ ನಿರಂತರವಾಗಿ ಮಾಡುತ್ತಲೇ ಇದೆ.

‘ಅನೇಕ ವೇಳೆ ಬಹಿರಂಗ ಹೇಳಿಕೆ, ಕಾರ್ಯಾಚರಣೆ ನಡೆಸಿದ್ದರಿಂದಾಗಿ ಪಕ್ಷ ಮುಜುಗರ ಅನುಭವಿಸುವಂತಾಗಿದೆ. ಈ ಬಾರಿ ಗುಟ್ಟು ಬಹಿರಂಗವಾಗದಂತೆ ರಹಸ್ಯ ಕಾರ್ಯಾಚರಣೆ ನಡೆಸಿ ಸರ್ಕಾರ ಕೆಡವಬೇಕು. ಅಲ್ಲಿಯವರೆಗೂ ಯಾರೊಬ್ಬರೂ ತುಟಿಪಿಟಕ್ ಅನ್ನಬಾರದು ಎಂಬ ಕಟ್ಟಪ್ಪಣೆ ವರಿಷ್ಠರಿಂದ ಬಂದಿದೆ. ಹೀಗಾಗಿ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಟ್ಟರೆ ಯಾರೊಬ್ಬರೂ ಮಾತನಾಡುತ್ತಿಲ್ಲ. ರಹಸ್ಯ ಕಾರ್ಯತಂತ್ರ ಹೆಣೆದಿದ್ದು, ಸಂಕ್ರಾಂತಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

ಕೈ ಕೊಡಲಿದ್ದಾರಾ ಆನಂದ ಸಿಂಗ್, ನಾಗೇಂದ್ರ? : ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌, ಗ್ರಾಮೀಣ ಕ್ಷೇತ್ರದ ಬಿ. ನಾಗೇಂದ್ರ ಕಾಂಗ್ರೆಸ್‌ ತೊರೆಯುತ್ತಾರೆ ಎಂಬ ವದಂತಿ ಹಬ್ಬಿದೆ. ಇತ್ತೀಚೆಗೆ ಹಂಪಿಗೆ ಭೇಟಿ ನೀಡಿದ್ದ, ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಜತೆ ಆನಂದ್‌ ಸಿಂಗ್‌ ಕಾಲ ಕಳೆದಿದ್ದರು. ರಹಸ್ಯ ಮಾತುಕತೆಯನ್ನೂ ನಡೆಸಿದ್ದರು. 

ಹೊಸಪೇಟೆ ಪಕ್ಷದ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ನೂತನ ಸಚಿವರಾದ ಸತೀಶ ಜಾರಕಿಹೊಳಿ, ಈ. ತುಕಾರಾಂ ಪಾಲ್ಗೊಂಡಿದ್ದರು. ಆದರೆ, ಆ ಸಭೆಯಿಂದ ಆನಂದ್‌ ಸಿಂಗ್‌ ದೂರ ಉಳಿದಿದ್ದರು. ಇದಕ್ಕೂ ಕೆಲ ದಿನಗಳ ಹಿಂದೆ ಕರಾವಳಿಗೆ ಹೋಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಭೇಟಿ ಮಾಡಿ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರತಿಯೊಂದು ಹಬ್ಬ– ಹರಿದಿನ, ಜಯಂತಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುವಾಗ ಅದರಲ್ಲಿ ಸಿಂಗ್‌ ಅವರ ಭಾವಚಿತ್ರ ಹಾಗೂ ಅವರು ಪ್ರತಿನಿಧಿಸುವ ಪಕ್ಷದ ಚಿಹ್ನೆ ಇರುತ್ತಿತ್ತು. ಆದರೆ, ಮಂಗಳವಾರದಂದು ಹೊಸ ವರ್ಷಕ್ಕೆ ಶುಭ ಕೋರಿರುವ ಸಂದೇಶದಲ್ಲಿ ಪಕ್ಷದ ಹೆಸರಿಲ್ಲ. ಅವರ ಭಾವಚಿತ್ರ ಮತ್ತು ‘ನಿಮ್ಮ ಸೇವಕ’ ಎಂಬ ಬರಹವಷ್ಟೇ ಇದೆ. ನಗರದ ಪ್ರಮುಖ ವೃತ್ತಗಳಲ್ಲಿರುವ ಫ್ಲೆಕ್ಸ್‌ಗಳಲ್ಲೂ ಪಕ್ಷದ ಚಿಹ್ನೆ ಮಾಯವಾಗಿದೆ. ಇದು ಪಕ್ಷ ತೊರೆಯುವ ಸೂಚನೆ ಎನ್ನಲಾಗಿದೆ.

‘ನಾಗೇಂದ್ರ ಅವರು ರಮೇಶ ಜಾರಕಿಹೊಳಿ ಅವರಿಗೆ ಬಹಳ ಆಪ್ತರು. ಅವರೊಂದಿಗೆ ಬಿಜೆಪಿ ಸೇರುತ್ತಾರೆ ಎಂಬ ಖಚಿತ ಮಾಹಿತಿ ಸಿಕ್ಕಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಸಂಪರ್ಕಕ್ಕೆ ಸಿಗದ ರಮೇಶ: ಜಾರಕಿಹೊಳಿ

ಬೆಳಗಾವಿ: ‘ಸಹೋದರ ರಮೇಶ ಜಾರಕಿಹೊಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವುದು ಊಹಾಪೋಹ ಅಷ್ಟೇ. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ನನ್ನ ಸಂಪರ್ಕದಲ್ಲಿಯೂ ಇಲ್ಲ. ಅವರು ಬಂದ ನಂತರ ಚರ್ಚಿಸುತ್ತೇನೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಮೇಶ ದೆಹಲಿಯಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರು ಅಲ್ಲಿ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾರೋ ಗೊತ್ತಿಲ್ಲ. ಬಿಜೆಪಿಯವರನ್ನು ಭೇಟಿಯಾಗಿರುವ ಸಾಧ್ಯತೆ ಕಡಿಮೆ. ಅವರು ಬಂದ ನಂತರ ವಿಚಾರಿಸುವೆ’ ಎಂದು ನುಡಿದರು.

ಕುಮಾರಸ್ವಾಮಿ ಮೋಜು: ಬಿಎಸ್‌ವೈ ಆಕ್ರೋಶ 

‘ರಾಜ್ಯದಲ್ಲಿ ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಧಿಕಾರಿಗಳು ಮೋಜಿನಲ್ಲಿ ನಿರತರಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆಯ ಯೋಜನಾ ನಿರ್ದೇಶಕರಾಗಿದ್ದ ಡಾ. ಎಂ.ವಿ.ರಮೇಶ್‌ ಬಾಬು ಅವರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರು ಮಗನ ಸಿನಿಮಾ ಶೂಟಿಂಗ್‌ ವೀಕ್ಷಿಸಲು ವಿದೇಶಕ್ಕೆ ಹೋಗಿದ್ದಾರೆ. ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ’ ಎಂದು ಅವರು ಎಚ್ಚರಿಸಿದರು.

ಕೃಷಿ ಹೊಂಡ, ಕೃಷಿ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

131 ತಾಲ್ಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಯಾಗಬೇಕಿತ್ತು. 2.5 ಲಕ್ಷ ರೈತರು ಇದರ ಫಲಾನುಭವಿಗಳಾಗಬೇಕಿತ್ತು. ರಾಜ್ಯ ಸರ್ಕಾರದ ಉದಾಸೀನದಿಂದ ನಿರೀಕ್ಷಿತ ರೀತಿಯಲ್ಲಿ ಜಾರಿಗೊಂಡಿಲ್ಲ ಎಂದು ದೂರಿದರು.

ಸಾಲ ಮನ್ನಾ ಸುಳ್ಳು: ಮೈತ್ರಿ ಸರ್ಕಾರ ಬಂದು ಏಳು ತಿಂಗಳು ಕಳೆದರೂ ರೈತರ ಸಾಲ ಮನ್ನಾ ಆಗಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.

ಎಚ್‌.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘800 ರೈತರ ಸಾಲ ಮನ್ನಾ ಆಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅದನ್ನೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 800 ರೈತರಿಗೆ ರಾಜ್ಯ ಸರ್ಕಾರ ಋಣಮುಕ್ತ ಪ್ರಮಾಣಪತ್ರ ನೀಡಿದೆ. ಆದರೆ, ಬ್ಯಾಂಕ್‌ಗಳು ನೀಡಿಲ್ಲ. ಸರ್ಕಾರವೇ ಪತ್ರ ನೀಡಿರುವುದು ಎಷ್ಟು ಸಮಂಜಸ’ ಎಂದು ಪ್ರಶ್ನಿಸಿದ್ದಾರೆ.

‘24 ಲಕ್ಷ ಜನರು ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. 60 ಸಾವಿರ ರೈತರ ಸಾಲ ಮನ್ನಾ ಆಗಿದೆ ಎಂದು ಎಚ್‌.ಡಿ.ದೇವೇಗೌಡರು ಹೇಳುತ್ತಿದ್ದಾರೆ. 60 ಸಾವಿರ ರೈತರು 24 ಲಕ್ಷ ರೈತರಿಗೆ ಸಮವೇ’ ಎಂದು ಅವರು ಕೇಳಿದ್ದಾರೆ.

***

ಮುಂಬೈ, ದೆಹಲಿಯಲ್ಲಿ ಯಾರು ಯಾವ ಸಭೆ ನಡೆಸಿದ್ದಾರೆ, ಯಾರ ಜತೆ ಮಾತುಕತೆ ನಡೆಸಿದ್ದಾರೆ ಎಂಬುದೆಲ್ಲ ಗೊತ್ತಿದೆ. ರಮೇಶ ಜಾರಕಿಹೊಳಿ ಎಲ್ಲಿದ್ದಾರೆ ಎಂಬ ಬಗ್ಗೆ ಯಡಿಯೂರಪ್ಪ ಅವರನ್ನೇ ಕೇಳಿ

-ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ

ಕುದುರೆ ವ್ಯಾಪಾರ ನಡೆಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಹಿಂದೆ ಒಂದು ಬಾರಿ ಅಂತಹ ಯತ್ನ ನಡೆಸಿದ್ದರು. ಈಗ ಮತ್ತೊಮ್ಮೆ ಅಂತಹ ಯತ್ನಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅದರಲ್ಲಿ ಯಶಸ್ವಿಯಾಗುವುದಿಲ್ಲ

-ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 11

  Happy
 • 4

  Amused
 • 0

  Sad
 • 3

  Frustrated
 • 2

  Angry

Comments:

0 comments

Write the first review for this !