ವಾಲ್ಮಿಗೆ ಶೀಘ್ರದಲ್ಲೇ ಪುನಶ್ಚೇತನ

7
ನೆಲ ಮತ್ತು ನೀರು ನಿರ್ವಹಣಾ ಸಂಸ್ಥೆಗೆ ಭೇಟಿ ನೀಡಿದ ಸಚಿವ ಡಿ.ಕೆ.ಶಿವಕುಮಾರ್

ವಾಲ್ಮಿಗೆ ಶೀಘ್ರದಲ್ಲೇ ಪುನಶ್ಚೇತನ

Published:
Updated:

ಧಾರವಾಡ: ‘ಈವರೆಗೂ ಹಲವಾರು ಕಾರಣಗಳಿಂದ ನೀರು ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ಲಕ್ಷ್ಯಕ್ಕೊಳಗಾಗಿದ್ದು, ಬರುವ ದಿನಗಳಲ್ಲಿ ಅಗತ್ಯ ಆರ್ಥಿಕ ಹಾಗೂ ಮಾನವ ಸಂಪನ್ಮೂಲ ನೀಡುವ ಮೂಲಕ ಅದನ್ನು ಇನ್ನಷ್ಟು ಬಲಗೊಳಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ವಾಲ್ಮಿಗೆ ಶನಿವಾರ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಿವಕುಮಾರ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೆಲ ಮತ್ತು ನೀರು ನಿರ್ವಹಣೆಗೆ ಸಂಬಂಧಿಸಿದಂತೆ ತಜ್ಞರ ಅತ್ಯಂತ ದೂರಾಲೋಚನೆಯಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ ವಾಲ್ಮಿ. ಆದರೆ ಇದು ನಿರ್ಲಕ್ಷಕ್ಕೊಳಗಾಗಿರುವ ಕುರಿತು ತಿಳಿದುಬಂದಿದೆ. ಸಂಸ್ಥೆಯ ಅಗತ್ಯಗಳನ್ನು ಈಡೇರಿಸುವ ಮೂಲಕ ನಾವೀನ್ಯತೆ ತರಲಾಗುವುದು’ ಎಂದರು.

‘ಸಂಸ್ಥೆಗೆ 47 ಹುದ್ದೆಗಳು ಮಂಜೂರಾಗಿದ್ದರೂ, 37 ಹುದ್ದೆಗಳು ಈಗಲೂ ಖಾಲಿ ಇವೆ. ಕೂಡಲೇ ಈ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕೃಷಿಕರಿಗೆ ಮತ್ತು ನೀರು ನಿರ್ವಹಣೆದಾರರಿಗೆ ಅಗತ್ಯ ಮಾರ್ಗದರ್ಶನ ನೀಡಲು ಪ್ರಾಧ್ಯಾಪಕರನ್ನೂ ನೇಮಿಸಿಕೊಳ್ಳಲಾಗುವುದು’ ಎಂದರು.

‘ವಾಲ್ಮಿಗೆ ಆರ್ಥಿಕ ಪುನಶ್ಚೇತನ ನೀಡುವ ಸಲುವಾಗಿ, ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹಲವು ನಿಗಮಗಳ ಮೂಲಕ ಹಣ ಬರುವಂತೆ ಯೋಜನೆ ರೂಪಿಸಬೇಕಿದೆ. ಇದಕ್ಕೆ ಪ್ರತಿರೂಪವಾಗಿ ನಿಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಸೂಕ್ತ ತರಬೇತಿಯನ್ನು ವಾಲ್ಮಿಯೂ ನೀಡಬೇಕಿದೆ’ ಎಂದು ಶಿವಕುಮಾರ್ ಹೇಳಿದರು.

‘ಆಧುನಿಕ ಕೃಷಿ ಚಟುವಟಿಕೆಗೆ ಮತ್ತು ಯುವ ಕೃಷಿಕರಿಗೆ ಸದೃಢ ಅಡಿಪಾಯ ಹಾಕುವ ಕೆಲಸವನ್ನು ವಾಲ್ಮಿ ಮಾಡಲಿದೆ. ನೆಲ ಮತ್ತು ನೀರಿನ ಕುರಿತ ಅಗತ್ಯ ಮಾಹಿತಿಯನ್ನು ಕೃಷಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಸರ್ಕಾರದ ಕೃಷಿ ಚಟುವಟಿಕೆ ಕಾರ್ಯಕ್ರಮಗಳಲ್ಲಿ ವಾಲ್ಮಿಯನ್ನೂ ಸೇರಿಸಿಕೊಳ್ಳಲಾಗುವುದು. ಇದರಿಂದ ನೀರು, ಗಾಳಿ ಹಾಗೂ ನೆಲ ಕುರಿತ ಜಾಗೃತಿಯನ್ನು ಜನರಲ್ಲಿ ಮೂಡಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವಷ್ಟು ನೀರು ಸಿಗುತ್ತಿದೆ. ಆದರೆ ಮಳೆ ನೀರು ಮತ್ತು ನಾಲೆಯ ನೀರಿನ ಸಮರ್ಪಕ ನಿರ್ವಹಣೆಯಲ್ಲಿ ಕೃಷಿಕರು ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರಿಗೆ ಹೊಸ ಮಾದರಿಗಳ ಮೂಲಕ ಮಳೆಗೆ ಕಾಯದೆ, ವರ್ಷಪೂರ್ತಿ ಬೆಳೆ ಬೆಳೆಯುವಂತ ನೀರಾವರಿ ಪದ್ಧತಿಯನ್ನು ಅನುಸರಿಸಲು ಸಂಸ್ಥೆ ಸೂಕ್ತ ಮಾರ್ಗದರ್ಶನ ಮಾಡಲಿದೆ’ ಎಂದು ಶಿವಕುಮಾರ್ ಹೇಳಿದರು.

‘ಕೃಷಿ ಲಾಭದಾಯಕ ಹುದ್ದೆಯೇ ಆದರೂ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಪಟ್ಟಣದ ಜನಸಂಖ್ಯೆ ಶೇ 40ರಷ್ಟು ಹೆಚ್ಚಾಗಿದೆ. ಹೀಗಾಗಿ ಪಟ್ಟಣದಿಂದ ಗ್ರಾಮೀಣ ಪ್ರದೇಶದತ್ತ ಜನರನ್ನು ಸೆಳೆದು, ಕೃಷಿ ಚಟುವಟಿಕೆ ನಿರಂತರವಾಗಿ ನಡೆಯುವಂತೆ ಮಾಡಬೇಕಿದೆ. ಕೃಷಿಯನ್ನು ಇನ್ನಷ್ಟು ಲಾಭದಾಯಕವನ್ನಾಗಿಸಲು, ಸೂಕ್ಷ್ಮ ನೀರಾವರಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಿಂದ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ತೆಗೆಯಲು ಸಾಧ್ಯವಾಗಲಿದೆ. ಜತೆಗೆ ಮಣ್ಣಿನ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದಾಗಿದೆ’ ಎಂದರು.

‘ನೀರಿನ ಮಹತ್ವ ಸಾರಲು ಪ್ರೌಢಶಾಲೆ ಮಕ್ಕಳಿಗೆ ನೆಲ ಮತ್ತು ನೀರು ಕುರಿತು ಚರ್ಚಾಸ್ಪರ್ಧೆ, ಗುಂಪು ಚರ್ಚೆ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಅದಕ್ಕೆ ಅಗತ್ಯವಿರುವ ಹಣವನ್ನು ಇಲಾಖೆಯಿಂದ ನೀಡಲಾಗುವುದು. ವರ್ಷಕ್ಕೆ ಕನಿಷ್ಠ 300 ಶಾಲೆಗಳಲ್ಲಿ ಇಂಥ ಕಾರ್ಯಕ್ರಮ ನಡೆಸಬೇಕು’ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ್ ಅವರಿಗೆ ಶಿವಕುಮಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !