ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ

ಹುಣಸೂರಿನಲ್ಲಿ ಜೆಡಿಎಸ್‌ ಗೆಲ್ಲದು: ಜಿ.ಟಿ.ದೇವೇಗೌಡ

Published:
Updated:

ಮೈಸೂರು: ‘ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲುವುದಿಲ್ಲ; ಗೆಲ್ಲುವುದು ಕಾಂಗ್ರೆಸ್‌ ಅಭ್ಯರ್ಥಿ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಗುರುವಾರ ಇಲ್ಲಿ ಹೇಳಿದರು.

‘ಮುಖ್ಯಮಂತ್ರಿ ಸ್ಥಾನಕ್ಕೆ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಈ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮನೆಯಲ್ಲಿ ಚರ್ಚೆಯಾಯಿತು. ಅವರೆಲ್ಲ ಹುಣಸೂರನ್ನು ಗೆಲ್ಲಲೇಬೇಕು ಎಂದು ಹೇಳಿ, ನನ್ನ ಮಗನನ್ನು ಕಣಕ್ಕಿಳಿಸುವಂತೆ ಸೂಚಿಸಿದರು. ಈ ಕ್ಷೇತ್ರವನ್ನು ಜೆಡಿಎಸ್‌ ಗೆಲ್ಲಲಾಗುವುದಿಲ್ಲ; ಅಲ್ಲಿ ಶೆಟ್ರು (ಕಾಂಗ್ರೆಸ್‌ನ ಎಚ್.ಪಿ. ಮಂಜುನಾಥ’) ಗೆಲ್ಲುವುದು ಎಂದು ಆವಾಗಲೇ ನಾನು ಹೇಳಿದೆ’ ಎಂದರು.

‘ಯಾವುದೇ ಕಾರಣಕ್ಕೂ ಹುಣಸೂರಿನಿಂದ ತಮ್ಮ ಮಗ ಸ್ಪರ್ಧಿಸುವುದಿಲ್ಲ. ಬೇಕಿದ್ದರೆ, ಅವನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದಲೇ ಕಣಕ್ಕಿಳಿಯಲಿ ಎಂದೂ ಸ್ಪಷ್ಟಪಡಿಸಿದ್ದಾಗಿ’ ದೇವೇಗೌಡ ಹೇಳಿದರು.

ನಾನೀಗ ನಿರಾಳ: ‘ಸಚಿವನಾಗಿದ್ದಾಗ ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವಂತಹ ರಾಜಕಾರಣಿಗಳಿಂದ, ನಿತ್ಯವೂ ಅನುಭವಿ
ಸುತ್ತಿದ್ದ ನೋವು–ಅವಮಾನ ಈಗಿಲ್ಲ. ಪಕ್ಷದ ಸಂಘಟನೆ ಜವಾಬ್ದಾರಿ ಕೊಡದೇ ಇದ್ದುದು ತಲೆ ಮೇಲಿನ ಬಂಡೆಯಂತಹ ಭಾರವನ್ನು ಇಳಿಸಿದಂತಾಗಿದೆ. ಅಪಮಾನವಾಗುವುದು ತಪ್ಪಿದೆ’ ಎಂದರು.

‘ಶಾಸಕ ಸಾ.ರಾ.ಮಹೇಶ್‌ ಆ್ಯಕ್ಟಿಂಗ್‌ ಮುಖ್ಯಮಂತ್ರಿ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ ಸಂಘಟನೆಗಾಗಿಯೇ ಅವರನ್ನು ಕಾರ್ಯಕಾರಿಣಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅಭಿನಂದನೆಗಳು’ ಎಂದು ಕುಟುಕಿ ಅಸಮಾಧಾನ ಹೊರಹಾಕಿರು.

‘ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿ, ನನ್ನನ್ನು ಗೆಲ್ಲಿಸಿದರು. ತಾವು ಮುಖ್ಯಮಂತ್ರಿಯಾದರೆ ತಮ್ಮಷ್ಟೇ ಅಧಿಕಾರವನ್ನು ನನಗೂ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಸಚಿವ ಸ್ಥಾನವನ್ನೇ ಬಿಟ್ಟುಹೋಗಲಿ ಎಂದು ಒಲ್ಲದ ಖಾತೆಯನ್ನು ಕೊಟ್ಟರು’ ಎಂದು ಕಿಡಿಕಾರಿದರು.

Post Comments (+)