ಭಾನುವಾರ, ನವೆಂಬರ್ 17, 2019
20 °C
10 ತಿಂಗಳು ಉಪನ್ಯಾಸ, 2 ತಿಂಗಳ ಕೂಲಿ

ಅತಿಥಿ ಉಪನ್ಯಾಸಕರಿಗೆ ಕನಿಷ್ಠ ಗೌರವಧನ

Published:
Updated:

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಿಗೆ ದೇಶದಲ್ಲೇ ಕನಿಷ್ಠ ಪ್ರಮಾಣದಲ್ಲಿ ಗೌರವಧನ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಇಂತಹ 13,500ರಷ್ಟು ಅತಿಥಿ ಉಪನ್ಯಾಸಕರಿದ್ದು, ಬಹುತೇಕ ಮಂದಿಗೆ ₹11ರಿಂದ ₹ 13 ಸಾವಿರ ಗೌರವಧನ ಮಾತ್ರ ಸಿಗುತ್ತಿದೆ.

ಅತಿಥಿ ಉಪನ್ಯಾಸಕರಿಗೆ ಕನಿಷ್ಠ ₹25 ಸಾವಿರ ಗೌರವಧನ ನೀಡಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸೂಚಿಸಿದ್ದರೂ ರಾಜ್ಯದಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ. ಬಹುತೇಕ ಕಾಲೇಜುಗಳು ತಿಂಗಳ ಮೊದಲ ವಾರ ಗೌರವಧನ ಕೊಡುವುದನ್ನೇ ಮರೆತುಬಿಟ್ಟಿವೆ ಎಂದು ಗೋಳು ತೋಡಿಕೊಂಡಿದ್ದಾರೆ.

‘ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲ. ಕುಟುಂಬಕ್ಕೆ ನೆರವಾಗುವ ಪ್ರಶ್ನೆಯೂ ಇಲ್ಲ. 10 ತಿಂಗಳು ಪಾಠ ಮಾಡಿದರೆ, ಉಳಿದ ಎರಡು ತಿಂಗಳು ಹೊಟ್ಟೆ ಹೊರೆಯಲು ಕೂಲಿ, ಗಾರೆ ಕೆಲಸ, ಬಾರ್‌ಗಳಲ್ಲಿ ಸಪ್ಲೈ ಕೆಲಸ ಅನಿವಾರ್ಯವಾಗಿದೆ, ಇಷ್ಟಾಗಿಯೂ ಅವರಿಗೆ ಮುಂದಿನ ವರ್ಷ ಅದೇ ಕಾಲೇಜಿನಲ್ಲಿ ಕೆಲಸ ಸಿಗುವ ಖಾತರಿ ಇಲ್ಲ, ಅವರೇ ಕಲಿಸಿದ ವಿದ್ಯಾರ್ಥಿಗಳ ಜತೆಗೇ ಮತ್ತೆ ಸಂದರ್ಶನ ಎದುರಿಸಬೇಕು’ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ತಿಳಿಸಿದರು.

‘ಉದ್ಯೋಗ ಭದ್ರತೆ ಕೊಡಿ, ಹಂತಹಂತವಾಗಿ ನಮ್ಮನ್ನು ಕಾಯಂಗೊಳಿಸಿ, ತಿಂಗಳ ಮೊದಲನೇ ವಾರದಲ್ಲಿ ಸಂಬಳ ಬಿಡುಗಡೆ ಮಾಡಿ, 12 ತಿಂಗಳ ಉದ್ಯೋಗ ನೀಡಿ ಎಂಬುದು ಅತಿಥಿ ಉಪನ್ಯಾಸಕರು ಮುಖ್ಯ ಬೇಡಿಕೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯೆ ನೀಡಲಿಲ್ಲ.

**

ಮುಖ್ಯಾಂಶಗಳು

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಕನಿಷ್ಠ ಗೌರವಧನ

ಸಮಯಕ್ಕೆ ಸರಿಯಾಗಿ ಗೌರವಧನ ನೀಡದೆ ಸಂಕಷ್ಟ

ಅತಿಥಿ ಉಪನ್ಯಾಸಕರಾಗಿಯೇ ನಿವೃತ್ತಿಯಂಚಿಗೆ ಬಂದವರೂ ಇದ್ದಾರೆ

 

ಪ್ರತಿಕ್ರಿಯಿಸಿ (+)