ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಬಲದಿಂದ ಜೆಡಿಎಸ್‌ ಅಧಿಕಾರದ ಗದ್ದುಗೆ

ಕಾರ್ಯಕರ್ತರ ಸಮಾವೇಶದಲ್ಲಿ ದೇವೇಗೌಡ ವಿಶ್ವಾಸ
Last Updated 11 ಏಪ್ರಿಲ್ 2018, 10:49 IST
ಅಕ್ಷರ ಗಾತ್ರ

ಆಲೂರು: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಿಂದ ರಾಜ್ಯದಲ್ಲಿ ಅಧಿಕಾರದ ಗದ್ದುಗೇರಲಿದೆ ಎಂದು ಸಂಸದ ಎಚ್. ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಒಕ್ಕಲಿಗರ ಸಮುದಾಯಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ರಾಜ್ಯದ ಬೊಕ್ಕಸ ಲೂಟಿ ಮಾಡುತ್ತಿದ್ದಾರೆ. ನಮಗೆ ಹಣಬಲ ಬೇಕಾಗಿಲ್ಲ. ಮತಬಲವಿದೆ ಎಂಬುದನ್ನು ಜನರು ಮುಂಬರುವ ಚುನಾವಣೆಯಲ್ಲಿ ತೋರಿಸುತ್ತಾರೆ’ ಎಂದು ತಿರುಗೇಟು ನೀಡಿದರು.

‘ಉತ್ತರ ಕರ್ನಾಟಕದಲ್ಲಿ ಎಚ್. ಡಿ. ಕುಮಾರಸ್ವಾಮಿಗೆ ಅಭೂತಪೂರ್ವ ಬೆಂಬಲವಿದೆ. ಯಾರು ಏನು ಬೇಕಾದರೂ ಹೇಳಿಕೊಂಡು ತಿರುಗಿದರೂ ಜೆಡಿಎಸ್ ಅಧಿಕ ಸ್ಥಾನ ಗೆಲ್ಲುವುದರೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಈ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್. ಕೆ. ಕುಮಾರಸ್ವಾಮಿ ಅವರು ಬೇಲೂರಿನಲ್ಲಿ ಮೂರು ಬಾರಿ, ಇಲ್ಲಿ ಎರಡು ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಭೂ ಮಾಫಿಯಾ ಮತ್ತು ಗಣಿ ಧಣಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ಎ. ಟಿ. ರಾಮಸ್ವಾಮಿ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಎಚ್. ಕೆ. ಕುಮಾಸ್ವಾಮಿ ಮಾತನಾಡಿ, ಕಾಂಗ್ರೆಸ್ ಆಡಳಿತಕ್ಕೆ ಜನರು ಬೇಸತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಜೆಡಿಎಸ್‌ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಎಸ್. ಮಂಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲೋಕೇಶ್, ಚಂಚಲ ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಉಮೇಶ್, ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ತೊ. ಚ. ಅನಂತಸುಬ್ಬರಾವ್, ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡದೀಣೆ ಸ್ವಾಮಿಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಟರಾಜ್ ನಾಕಲಗೂಡು, ಸಿ. ವಿ. ಲಿಂಗರಾಜು, ರಮ್ಯಗೋಪಿನಾಥ್, ಪಟ್ಟಣ ಪಂಚಾಯಿತಿ ಪ್ರಭಾರಿ ಅಧ್ಯಕ್ಷ ಮಂಜುನಾಥ್, ಕದಾಳು ರಾಜಪ್ಪಗೌಡ, ಅಜ್ಜೇಗೌಡ ಹಾಜರಿದ್ದರು. ಇದೇ ವೇಳೆ ಹಲವು ಮಂದಿ ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರ್ಪಡೆಯಾದರು.

ಸಿದ್ದರಾಮಯ್ಯಗೆ ನಾಚಿಕೆಯಾಗವುದಿಲ್ಲವೇ..?

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠಕ್ಕೆ ಬಿದ್ದು, ಬಾಗೂರು ಮಂಜೇಗೌಡ ಅವರ ರಾಜೀನಾಮೆ ಅಂಗೀಕರಿಸಲು ಒತ್ತಡ ಹಾಕಿದ್ದಾರೆ’ ಎಂದು ಎಚ್.ಡಿ.ದೇವೇಗೌಡ ಕಿಡಿ ಕಾರಿದರು.‘ಈ ರೀತಿ ನಡೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗುವುದಿಲ್ಲವೇ ? ಮಂಜೇಗೌಡನ ಬಳಿ ಹಣ ಇದೆ ಎಂಬ ಕಾರಣಕ್ಕೆ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಾರೆ. ಇವರಿಗೆ ಮಾನ, ಮರ್ಯಾದೆ ಇದೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇವರು ದೇಶದ ಸತ್ಯವಂತ ಮುಖ್ಯಮಂತ್ರಿ’ ಎಂದು ವ್ಯಂಗ್ಯವಾಡಿದ ಗೌಡರು, ‘ಸಿ.ಎಂ ಭಾಷಣ ಮಾಡಿದ ತಕ್ಷಣ ಹೊಳೆನರಸೀಪುರದಲ್ಲಿ ರೇವಣ್ಣನನ್ನು ಸೋಲಿಸಲಾಗುತ್ತದೆಯೇ? ಸೋಲು, ಗೆಲುವು ನಿರ್ಧರಿಸುವುದು ಜನತೆ. ಮಂಜೇಗೌಡನಿಗೆ ಕೆಲಸ ಕೊಡಿಸಿದ್ದು ನಾನೇ. ಅವನ ದಿನಚರಿ ಏನು ಎನ್ನುವುದು ನನಗೆ ಗೊತ್ತಿದೆ. ಆ ಬಗ್ಗೆ ಮಾತನಾಡಿ ನನ್ನ ನಾಲಗೆ ಏಕೆ ಹೊಲಸು ಮಾಡಿಕೊಳ್ಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT