ಸೋಮವಾರ, ನವೆಂಬರ್ 18, 2019
25 °C
ಸೋಮದೇವರಹಟ್ಟಿ ತಾಂಡಾ ದುರ್ಗಾದೇವಿ ದರ್ಶನಕ್ಕೆ ಬಂದ ಎಚ್.ವಿಶ್ವನಾಥ

'ನನ್ನ ಕುಟುಂಬ, ಸಿದ್ದರಾಮಯ್ಯ ಕುಟುಂಬದವರಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ’

Published:
Updated:

ವಿಜಯಪುರ: ತಿಕೋಟಾ ತಾಲ್ಲೂಕು ಸೋಮದೇವರಹಟ್ಟಿ ತಾಂಡಾದಲ್ಲಿರುವ ದುರ್ಗಾದೇವಿ ದರ್ಶನಕ್ಕೆ ಅನರ್ಹ ಶಾಸಕ ಎಚ್.ವಿಶ್ವನಾಥ ಇಲ್ಲಿಗೆ ಬಂದಿದ್ದಾರೆ.

ಸೋಮದೇವರಹಟ್ಟಿ ತಾಂಡಾಕ್ಕೆ ತೆರಳುವ ಮುನ್ನ, ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ನಾಳೆ ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರ ತೀರ್ಪು ಬರುವ ನಂಬಿಕೆ ಇದೆ. ಅಂದಿನ ಸ್ಪೀಕರ್ ರಮೇಶಕುಮಾರ‌ ಅವರ ಕಾನೂನು ಬಾಹಿರ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಗೆ ಹೋಗಿದ್ದೇವೆ.

ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಎತ್ತಿ ಹಿಡಿಯುವ ವಿಶ್ವಾಸವಿದೆ' ಎಂದರು. ಸೋಮದೇವರ ಹಟ್ಟಿ ತಾಂಡಾದಲ್ಲಿ ವಿಶೇಷ ಪೂಜೆಗೆ ಪ್ರತಿಕ್ರಿಯಿಸಿ, 'ಪ್ರಗತಿಪರನಾಗಿರುವ ನಾನು ದೇವರಿಗೆ ಕೈ ಮುಗಿಯಬಾರದೇ?, ದೇವರಿಗೆ ಕೈ ಮುಗಿಯುವುದು, ಹೋಮ ಹವನ ಮಾಡುವುದು ಬೇಡ ಅಂತ ಎಲ್ಲಿದೆ?, ಶ್ರದ್ಧಾ ಭಕ್ತಿಯಿಂದ ದೇವರಿಗೆ ನಡೆದುಕೊಳ್ಳುವುದು ನಮ್ಮಲ್ಲಿ ಬಂದಿರುವ ಪದ್ಧತಿ. ತಿಕೋಟಾದಲ್ಲಿ ಸ್ನೇಹಿತರೊಬ್ಬರ‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ.

ತಿಕೋಟಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತೇನೆ' ಎಂದು ಹೇಳಿದರು. ವೀರ್ ಸಾವರ್ಕರ್ ಕುರಿತು ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ವೀರ್ ಸಾವರ್ಕರ್ ಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾದಕರ. ಸಾವರ್ಕರ್ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ, ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ.

ನಾನು, ನನ್ನ ಕುಟುಂಬ, ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ, ನಮ್ಮ ಆಸ್ತಿಯೂ ಹೋಗಿಲ್ಲ. ವೀರ್ ಸಾವರ್ಕರ್ ಅವರಂಥ ನಾಯಕರು ಹೋರಾಟ ನಡೆಸಿದ್ದರಿಂದ ಅದರ ಫಲವನ್ನು ನಾವು ಉಣ್ಣುತ್ತಿದ್ದೇವೆ' ಎಂದರು.

'ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು, ದೊಡ್ಡವರು, ಸತ್ಯವಂತರು, ರಾಷ್ಟ್ರ ನಾಯಕರು, ಸ್ವಾತಂತ್ರ್ಯ ಪ್ರೇಮಿಗಳು, ಅವರ ಬಗ್ಗೆ ಮೈಸೂರಿನಲ್ಲಿ ಉತ್ತರ ಕೊಡುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)