ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನನ್ನು ನೋಡುವ ಭಾಗ್ಯ ಕರುಣಿಸಿ: ಸಚಿವೆ ಬಳಿ ನಾಪತ್ತೆಯಾದ ಮೀನುಗಾರ ಕುಟುಂಬದ ರೋದನ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಮನವಿ
Last Updated 26 ಮಾರ್ಚ್ 2019, 11:24 IST
ಅಕ್ಷರ ಗಾತ್ರ

ಉಡುಪಿ: ‘ಮಗ ಸುರಕ್ಷಿತವಾಗಿ ಹಿಂದಿರುಗಿದರೆ ಸಾಕು, ನಿಮ್ಮಲ್ಲಿ ಬೇರೇನೂ ಕೇಳುವುದಿಲ್ಲ. ಮಗನನ್ನು ನೋಡುವ ಭಾಗ್ಯ ಕರುಣಿಸಿ’ ಎಂದು ನಾಪತ್ತೆಯಾಗಿರುವ ಮೀನುಗಾರ ದಾಮೋದರ್ ಸಾಲ್ಯಾನ್‌ ಅವರ ತಂದೆ ಸುವರ್ಣ ತಿಂಗಳಾಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಅಂಗಲಾಚಿದರು.

ಮಲ್ಪೆಯಿಂದ 3 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಚಂದ್ರಶೇಖರ ಕೋಟ್ಯಾನ್ ಹಾಗೂ ದಾಮೋದರ ಸಾಲ್ಯಾನ್ ಅವರ ಪಾವಂಜಿಗುಡ್ಡೆ ಗ್ರಾಮಕ್ಕೆ ಮಂಗಳವಾರ ರಕ್ಷಣಾ ಸಚಿವರು ಭೇಟಿನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಚಂದ್ರಶೇಖರ ಸಾಲ್ಯಾನ್ ಅವರ ಮನೆಗೆ ಭೇಟಿ ನೀಡುತ್ತಿದ್ದಂತೆ ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದ ದುಃಖದ ಕೋಡಿ ಒಡೆಯಿತು. ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ಶ್ಯಾಮಲಾ ಕಣ್ಣೀರಾಗುತ್ತಿದ್ದಂತೆ, ಸಚಿವೆ ಮೈದಡವಿ ಸಂತೈಸಿದರು.

ಪತಿ ಮನೆಗೆ ಆಧಾರವಾಗಿದ್ದರು. ಅವರನ್ನೇ ನಂಬಿಕೊಂಡು ಕುಟುಂಬ ಬದುಕುತ್ತಿದೆ. ಅವರಿಲ್ಲದೆ ಬದುಕು ನಡೆಸುವುದು ಹೇಗೆ ಎಂದು ಪತ್ನಿ ಗೋಳಾಡಿದರು.

ಬಳಿಕ ದಾಮೋದರ ಸಾಲ್ಯಾನ್ ಕುಟುಂಬಕ್ಕೆ ತೆರಳುತ್ತಿದ್ದಂತೆ ವೃದ್ಧ ತಂದೆ ಸುವರ್ಣ ತಿಂಗಳಾಯ, ತಾಯಿ ಸೀತಾ ಸಾಲ್ಯಾನ್ ಕಣ್ಣೀರು ಹಾಕಿದರು. ‘ಮಗನನ್ನು ಹುಡುಕಲು ನಮ್ಮಿಂದಂತೂ ಸಾಧ್ಯವಿಲ್ಲ. ನೀವೇ ಹುಡುಕಿಕೊಡಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕುಟುಂಬದವರ ನೋವನ್ನು ಸಮಾಧಾನದಿಂದ ಆಲಿಸಿದ ನಿರ್ಮಲಾ ಸೀತಾರಾಮನ್‌ ದುಃಖಿಸದಂತೆ ಸಾಂತ್ವನ ಹೇಳಿದರು.‌

ಈ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಲಭ್ಯವಿರುವ ಎಲ್ಲ ತಂತ್ರಜ್ಞಾನಗಳನ್ನು ಬಳಸಿ ಮೀನುಗಾರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೂ ಯಾವ ಸುಳಿವು ಸಿಕ್ಕಿಲ್ಲ. ಅಗತ್ಯಬಿದ್ದರೆ ಮೀನುಗಾರರನ್ನು ಜತೆಗೇ ಕರೆದುಕೊಂಡು ಹೋಗಿ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸುತ್ತೇವೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ’ ಎಂದರು

‘ಮೀನುಗಾರರ ಎಲ್ಲ ಸಲಹೆಗಳನ್ನೂ ರಕ್ಷಣಾ ಸಚಿವರು ಪರಿಗಣಿಸಲಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚು ಮಾತನಾಡುವಂತಿಲ್ಲ. ಮೀನುಗಾರರ ಕುಟುಂಬ ಸದಸ್ಯರ ಜತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಕುಟುಂಬ ಸದಸ್ಯರಿಗೆ ಭರವಸೆ ನೀಡಿದರು.

ಈ ಸಂದರ್ಭ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್‌, ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT