ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಸ್ವಾವಲಂಬಿಯಾದ ಕಾರಾಗೃಹ

ಪರಿವರ್ತನೆಯ ಹಾದಿಯಲ್ಲಿದೆ ಹಾವೇರಿ ಕೇಂದ್ರ ಕಾರಾಗೃಹ: ಕೈದಿಗಳೇ ಕೃಷಿಕರು
Last Updated 19 ಮಾರ್ಚ್ 2019, 19:02 IST
ಅಕ್ಷರ ಗಾತ್ರ

ಹಾವೇರಿ:ದಶಕದಿಂದ ಖಾಲಿ ಬಿದ್ದಿದ್ದ ತನ್ನ ಜಾಗದಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ ಹಾವೇರಿ ಜಿಲ್ಲಾ ಕಾರಾಗೃಹವು, ಇದೀಗ ‘ತರಕಾರಿ ಸ್ವಾವಲಂಬಿ’ಯಾಗಿದೆ.

ಇಲ್ಲಿ 16 ಮಹಿಳೆಯರು ಸೇರಿದಂತೆ ಒಟ್ಟು 184 ಕೈದಿಗಳು ಇದ್ದಾರೆ. ಇವರ ಊಟ– ಉಪಾಹಾರಕ್ಕೆ ಬೇಕಾದ ತರಕಾರಿಗಾಗಿ ಪ್ರತಿ ತಿಂಗಳು ಅಂದಾಜು ₹45 ಸಾವಿರ ಖರ್ಚಾಗುತ್ತಿತ್ತು. ಈಗ ಅದನ್ನೆಲ್ಲ ಜೈಲಿನ ಆವರಣದಲ್ಲಿ ಕೈದಿಗಳೇ ಬೆಳೆಯುತ್ತಿದ್ದಾರೆ. ಉಳುಮೆಗಾಗಿ ಇಲ್ಲಿ ಎರಡು ಎತ್ತುಗಳೂ ಇದ್ದು, ಸಾವಯವ ಕೃಷಿಗೆ ಒತ್ತು ನೀಡಲಾಗುತ್ತದೆ.

ಇಲ್ಲಿನ ಕೆರಿಮತ್ತಿಹಳ್ಳಿ ಬಳಿ 2008ರಲ್ಲಿ ಕಾರಾಗೃಹ ಆರಂಭಗೊಂಡಿದ್ದರೂ, ಪೂರ್ಣ ಪ್ರಮಾಣದ ಮೂಲಸೌಕರ್ಯ ಇರಲಿಲ್ಲ. 2017ರ ಆಗಸ್ಟ್ 8ರಂದು ಅಂದಿನ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅಧ್ಯಕ್ಷತೆಯಲ್ಲಿ ಜೈಲು ಸಂದರ್ಶಕರ ಮಂಡಳಿ ಸಭೆ ನಡೆದಿತ್ತು. ಜೈಲನ್ನು ಪರಿವರ್ತನಾ ಕೇಂದ್ರವಾಗಿ ರೂಪಿಸಲು ಜೈಲರ್ ತಿಮ್ಮಣ್ಣ ಭಜಂತ್ರಿ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮ ಜಾರಿಗೊಳಿಸಲು ಸಭೆ ನಿರ್ಧರಿಸಿತ್ತು.

ಈ ಪೈಕಿ ಪಾಳುಬಿದ್ದಿದ್ದ 15 ಎಕರೆ ಜಾಗೆಯ ಸದ್ಬಳಕೆಗೆ ನಿರ್ಣಯಿಸಲಾಯಿತು. ಜಿಲ್ಲಾ ಪಂಚಾಯ್ತಿ ಮೂಲಕ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಆವರಣ ಗೋಡೆ ನಿರ್ಮಿಸುವುದು, ತೋಟಗಾರಿಕಾ ಇಲಾಖೆಯ ಮೂಲಕ ತರಕಾರಿ– ಹಣ್ಣುಗಳನ್ನು ಬೆಳೆಯುವ ಯೋಜನೆ ರೂಪಿಸಲಾಯಿತು.

ಹಣ್ಣಿನ ಗಿಡ, ಉದ್ಯಾನ ಹಾಗೂ ಆಟೋಟಕ್ಕೆ ಏಳು ಎಕರೆಯನ್ನು ಮೀಸಲಿಟ್ಟರೆ; ಮತ್ತೆ ಏಳು ಎಕರೆಯನ್ನು ತರಕಾರಿ ಬೆಳೆಗೆ ಬಳಸಿಕೊಳ್ಳಲಾಯಿತು. ಇಲ್ಲಿ 2 ಕೊಳವೆ ಬಾವಿಗಳನ್ನು ಬಳಸಿಕೊಂಡು, ಬದನೆ, ಹೀರೇಕಾಯಿ, ತೊಂಡೆಕಾಯಿ ಇತ್ಯಾದಿ ತರಕಾರಿಗಳು ಮತ್ತು ಮೆಂತೆ, ಪಾಲಕ್, ಕೊತ್ತಂಬರಿ ಮತ್ತಿತರ ಸೊಪ್ಪುಗಳನ್ನು ಬೆಳೆಯಲಾಯಿತು. ಇನ್ನುಳಿದ ಒಂದು ಎಕರೆಯಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ.

‘ಈ ಹಿಂದೆ ತರಕಾರಿಗೆ ತಿಂಗಳೊಂದಕ್ಕೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗುತ್ತಿದೆ. ತಾಜಾ ಹಾಗೂ ಪರಿಶುದ್ಧವಾದ ತರಕಾರಿ ಅಡುಗೆಗೆ ಲಭ್ಯವಿದೆ. ಕೈದಿಗಳು ಆಸಕ್ತಿಯಿಂದ ಕೃಷಿ ಮಾಡುತ್ತಿದ್ದಾರೆ. ಅವರ ಕೂಲಿಯನ್ನು ಲೆಕ್ಕ ಹಾಕಿ, ಖಾತೆ ತೆರೆದು ಜಮಾ ಮಾಡಲಾಗುತ್ತಿದೆ. ಸೂರ್ಯಕಾಂತಿಯಿಂದ ₹43 ಸಾವಿರ ಆದಾಯ ಬಂದಿದೆ. ಚಿಕ್ಕು, ಪೇರಲ, ಮಾವು ಮತ್ತಿತರ ಸಸಿಗಳನ್ನೂ ನಾಟಿ ಮಾಡಿಸಿದ್ದೇವೆ’ ಎಂದು ಜೈಲರ್ ತಿಮ್ಮಣ್ಣ ಭಜಂತ್ರಿ ವಿವರಿಸಿದರು.

**

ಸೆಲ್‌ನೊಳಗೆ ಕೆಟ್ಟ ಆಲೋಚನೆಗಳು ಬರುತ್ತಿದ್ದವು. ಜೀವನ ಬೇಸರ ಅನಿಸಿತ್ತು. ಆದರೆ, ಕೃಷಿಯಲ್ಲಿ ತೊಡಗಿಸಿಕೊಂಡ ಬಳಿಕ ನೆಮ್ಮದಿ ಇದೆ
- ವಿಚಾರಣಾಧೀನ ಕೈದಿ

**

ಜೈಲು ಅಕ್ಷರಶಃ ಮನಪರಿವರ್ತನೆಯ ಕೇಂದ್ರವಾಗುತ್ತಿದೆ. ಕೃಷಿ, ಕಿನ್ನಾಳ ಕಲೆ, ಕೌಶಲ ತರಬೇತಿ, ಸ್ವಯಂ ಉದ್ಯೋಗಗಳನ್ನು ಕೈದಿಗಳು ಮಾಡುತ್ತಿದ್ದಾರೆ. ಹಲವರು ಅಕ್ಷರಾಭ್ಯಾಸಕ್ಕೂ ಮುಂದಾಗಿದ್ದಾರೆ.
– ತಿಮ್ಮಣ್ಣ ಭಜಂತ್ರಿ , ಜೈಲರ್, ಹಾವೇರಿ ಕಾರಾಗೃಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT