ಮಂಗಳವಾರ, ಜುಲೈ 14, 2020
28 °C

ಸಲಹೆಯಲ್ಲಿ ರಾಜಕೀಯ: ಸಚಿವರಿಗೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೋನಾ ವೈರಸ್‌ ತಡೆಗೆ ಸಂಬಂಧಿಸಿದಂತೆ ತಾವು ಸರ್ಕಾರಕ್ಕೆ ನೀಡಿದ್ದ ಸಲಹೆಯನ್ನು ಟೀಕಿಸಿದ್ದ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ಏನು ಸಲಹೆ ನೀಡಿದ್ದರು ಕುಮಾರಸ್ವಾಮಿ...? ಈ ಸುದ್ದಿ ಓದಿ: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ: ಎಚ್.ಡಿ. ಕುಮಾರಸ್ವಾಮಿ ನೀಡಿದ ಸಲಹೆಗಳಿವು

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಯಡಿಯೂರಪ್ಪ ಅವರ ನಡೆಯನ್ನೂ ಟೀಕಿಸಿದ್ದಾರೆ.

ಕುಮಾರಸ್ವಾಮಿ ತಿರುಗೇಟು 

ಕೊರೋನಾ ವೈರಸ್ ಕುರಿತು ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದೆ. ಇದರಲ್ಲಿ ರಾಜಕೀಯ ಹುಡುಕಿರುವ ಸಚಿವರೊಬ್ಬರು ಸರ್ಕಾರ ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ವಹಿಸಿರುವುದಾಗಿ ಹೇಳಿದ್ದಾರೆ. ಸರಿ, ಸಿಎಂ ಬಿಎಸ್ವೈ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗದೇ ನಿಯಮ ಉಲ್ಲಂಘಿಸಿದ್ದು ಯಾವ ಕ್ರಮ? ಕೊರೋನಾ ವೈರಸ್ ತಡೆಗೆ ಮುಂಜಾಗ್ರತೆಯೇ ಮದ್ದು. ಇದಕ್ಕಾಗಿಯೇ ಎಲ್ಲ ವಿಮಾನ ನಿಲ್ದಾಣಗಳಲ್ಲಿ, ಪ್ರತಿಯೊಬ್ಬರ ತಪಾಸಣೆ ನಡೆಯುತ್ತಿದೆ. ಈ ತಪಾಸಣೆಯನ್ನು ಮುಖ್ಯಮಂತ್ರಿಯೇ ನಿರ್ಲಕ್ಷಿಸುವುದು ಎಂಥ ಕಟ್ಟುನಿಟ್ಟಿನ ಕ್ರಮ? ಇದರಿಂದ ಜನರಿಗೆ ಹೋಗುವ ಸಂದೇಶವೇನು? ಈ ಬಗ್ಗೆ 'ರಾಜಕೀಯ' ಹುಡುಕಿದ ಸಚಿವರು ಏನು ಹೇಳುತ್ತಾರೆ? ವಿರೋಧ ಪಕ್ಷದ ನಾಯಕನಾದ ನಾನು ಸರ್ಕಾರಕ್ಕೆ ಸಲಹೆ ನೀಡುವುದು ನನ್ನ ಕರ್ತವ್ಯ, ನನ್ನ ಹಕ್ಕು. ಮತ್ತು, ಅದೇ ವೃತ್ತಿ ಧರ್ಮ‌. ರಾಜಕೀಯ ಮಾಡಲು ಬೇರೆ ಅವಕಾಶಗಳಿವೆ. ಅಲ್ಲಿ ಮಾಡೋಣ.  ಈಗಲೂ ಹೇಳುತ್ತಿದ್ದೇನೆ ಇದು ನನ್ನ ಸಲಹೆ. ಇದರಲ್ಲಿಯೂ ರಾಜಕೀಯ ಹುಡುಕುವವರನ್ನು 'ಪ್ರಚಾರ ಪ್ರಿಯ'ರಷ್ಟೇ‌.

ಟೀಕೆ ಮಾಡಿದ್ದ ಸುಧಾಕರ್‌ 

ಕೊರೋನಾ ನಿರ್ವಹಣೆ ವಿಚಾರದಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ರವರ ಬಾಲಿಶ ಹೇಳಿಕೆ ಗಮನಿಸಿದ್ದೇನೆ. ವಿಪತ್ತನ್ನು ಎದುರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು  ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸುವುದು, ಸೊಂಕಿತರ ಪತ್ತೆಗೆ ಸರ್ವ ಪ್ರಯತ್ನ, ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯ, ಪ್ರತ್ಯೇಕ ನಿಗಾ ಘಟಕಗಳು, ತಜ್ಞ ವೈದ್ಯರ ಮತ್ತು ಇತರ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜ್ಯಸರ್ಕಾರ ತೆಗೆದುಕೊಂಡಿದೆ. ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ. ಕುಮಾರಸ್ವಾಮಿ ಅವರಲ್ಲಿ ನನ್ನ ವಿನಂತಿಯೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ. ತಾವು ಕೂಡ ಎಚ್ಚರಿಕೆಯಿಂದ ಇದ್ದು ಸುರಕ್ಷಿತವಾಗಿರಿ, ಇಂತಹ ಸಂದರ್ಭಗಳಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ಯಾವುದೇ ಪ್ರಯತ್ನ ಅಪೇಕ್ಷಣೀಯವಲ್ಲ ಎಂದಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು