ಹಲವು ಮೊದಲುಗಳಿಗೆ ಕಾರ್ನಾಡ ಪ್ರೇರಣೆ

ಸೋಮವಾರ, ಜೂನ್ 24, 2019
26 °C

ಹಲವು ಮೊದಲುಗಳಿಗೆ ಕಾರ್ನಾಡ ಪ್ರೇರಣೆ

Published:
Updated:

ಧಾರವಾಡ: ‘ಧಾರವಾಡದವರು ಅವರದ್ದೇ ಪ್ರಪಂಚದೊಳಗಿರುತ್ತಾರೆ. ಹೊರಜಗತ್ತಿಗೆ ತೆರೆದುಕೊಳ್ಳಲು ತೀರಾ ಸಂಕೋಚ ಪಡುತ್ತಾರೆ’ ಎನ್ನುತ್ತಿದ್ದ ಕಾರ್ನಾಡರು ಧಾರವಾಡಕ್ಕೇ ಪ್ರಪಂಚವನ್ನು ತಂದಿರಿಸಲು ಯತ್ನಿಸಿದ್ದರು’ ಎಂದು ಲೇಖಕ ಲೋಹಿತ ನಾಯ್ಕರ್‌ ನೆನಪಿಸಿಕೊಂಡರು.

70ರ ದಶಕದಲ್ಲಿ ಫಿಲ್ಮ್‌ ಸೊಸೈಟಿ ಆರಂಭಿಸುವುದರಿಂದ ಹಿಡಿದು, 2013ರ ಧಾರವಾಡ ಸಾಹಿತ್ಯ ಸಂಭ್ರಮದವರೆಗೂ ಅನೇಕ ಹೊಸತುಗಳಿಗೆ ಕಾರ್ನಾಡರು ಪ್ರೇರಣೆಯಾಗಿದ್ದರು.

‘ಧಾರವಾಡಕ್ಕೆ ಬಂದಾಗಲೆಲ್ಲ ಹೆಚ್ಚಿನ ಸಮಯ ಕಳೆಯುತ್ತಿದ್ದ ಮನೋಹರ ಗ್ರಂಥಮಾಲಾದ ಒಡನಾಡಿಗಳಿಗೆ 2012ರಲ್ಲಿ ಜೈಪುರ ಸಾಹಿತ್ಯೋತ್ಸವಕ್ಕೆ ಪಾಸ್‌ ತೆಗೆಸಿ ಕರೆದುಕೊಂಡು ಹೋಗಿದ್ದರು. ಆ ಪ್ರವಾಸದ ಫಲವಾಗಿ 2013ರಲ್ಲಿ ಧಾರವಾಡ ಸಾಹಿತ್ಯ ಸಂಭ್ರಮವು ‘ಪ್ರಜಾವಾಣಿ’ ಸಹಯೋಗದಲ್ಲಿ ಮೊದಲ ಬಾರಿಗೆ ಆಯೋಜಿಸಲಾಯಿತು. ಅತ್ಯಂತ ಜನ
ಮನ್ನಣೆಯನ್ನೂ ಪಡೆಯಿತು’ ಎಂದು ಸಾಹಿತ್ಯ ಸಂಭ್ರಮ ಆರಂಭವಾದ ಬಗೆಯನ್ನು ನಾಯ್ಕರ್ ನೆನಪಿಸಿಕೊಂಡರು.

ಮೊದಲ ನಾಲ್ಕು ವರ್ಷ ನಿರಂತರವಾಗಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ನಾಡರು, ನಂತರ ಅನಾರೋಗ್ಯದಿಂದ ಬಂದಿರಲಿಲ್ಲ. ಆದರೆ 2018ರ ಸಂಭ್ರಮದಲ್ಲಿ ಆಮ್ಲಜನಕ ಉತ್ಪಾದಿಸುವ ಯಂತ್ರವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಿದ್ದರು. 

1971ರ ಕಾಲ,  ‘ಸಂಸ್ಕಾರ’ ಚಲನಚಿತ್ರದಲ್ಲಿ ನಟಿಸಿದ್ದರು. ಹೊಸ ಅಲೆಯ ಚಿತ್ರಗಳು ಜನಪ್ರಿಯಗೊಳ್ಳುತ್ತಿದ್ದವು. ಇಂಥ ಸಂದರ್ಭದಲ್ಲಿ ಹೊಸ ಬಗೆಯ ಚಿತ್ರಗಳನ್ನು ತೋರಿಸಿ ಚರ್ಚಿಸಲು  ‘ಚಿತ್ರ ಫಿಲ್ಮ್‌ ಸೊಸೈಟಿ’ ಆರಂಭಿಸಿದರು. ಈ ಯೋಜನೆಗೆ ಸಹಕರಿಸಿದವರು ವಿಜಯ ನಿಲೇಕಣಿ (ನಂದನ್ ನಿಲೇಕಣಿ ಹಿರಿಯ ಸಹೋದರ), ಪ್ರೊ. ಷಫಿ ಖಾನ್‌. 

ದೇಶ ವಿದೇಶಗಳ ಹೊಸ ಅಲೆಯ ಚಿತ್ರಗಳನ್ನು ಪ್ರದರ್ಶಿಸಿ, ಅದರ ಕುರಿತು ಚರ್ಚಿಸುವ ವೇದಿಕೆ ಧಾರವಾಡಕ್ಕೆ ಹೊಸತಾದರೂ, ಬಹುಬೇಗ ಹಲವರು ಇದರ ಸದಸ್ಯರಾದರು. 86 ಜನರಿಂದ ಆರಂಭವಾದ ಈ ಸೊಸೈಟಿ, ಸುಮಾರು 300 ಸದಸ್ಯರನ್ನು ಬಹುಬೇಗ ಹೊಂದಿತು. 

‘ಕರ್ನಾಟಕ ಕಾಲೇಜಿನ ಜೀವವಿಜ್ಞಾನವಿಭಾಗದ ಸಭಾಂಗಣ, ವಿಜಯ ಚಿತ್ರಮಂದಿರ, ಮಾಡರ್ನ್ ಹಾಲ್‌, ಲಕ್ಷ್ಮೀ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಯೋಜಿಸುತ್ತಿದ್ದರು. ಸದಸ್ಯತ್ವದಿಂದ ಬಂದ ಹಣ ಮಾತ್ರವಲ್ಲ, ಸ್ವತಃ ತಮ್ಮ ಕಿಸೆಯಿಂದಲೂ ಹಲವು ಬಾರಿ ಹಣ ಹಾಕಿ ಉತ್ತಮ ಚಿತ್ರಗಳನ್ನು ತೋರಿಸುತ್ತಿದ್ದರು' ಎಂದು ಸೊಸೈಟಿಯ ಸಂಚಾಲಕ ಅಬ್ದುಲ್ ಖಾನ್‌ ನೆನಪಿಸಿಕೊಂಡರು.

‘ಎಲ್ಲ ರೀತಿಯ ಸಿನಿಮಾಗಳಿಗೂ ಅವಕಾಶ ಕಲ್ಪಿಸುವುದು ಕಾರ್ನಾಡರ ಉದ್ದೇಶವಾಗಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳಿಗೆ ಮನ್ನಣೆ ನೀಡದೆ ತಂತ್ರಜ್ಞಾನವನ್ನು ಗಮನಿಸಲು ಸಲಹೆ ನೀಡುತ್ತಿದ್ದರು. 2020ಕ್ಕೆ ಸೊಸೈಟಿ ಸುವರ್ಣ ಮಹೋತ್ಸವ ವರ್ಷಕ್ಕೆ ಕಾಲಿಡುತ್ತಿದೆ. ಆದರೆ ಅವರೇ ಈಗ ಇಲ್ಲವಾಗಿದ್ದಾರೆ’ ಎಂದು ನೆನಪಿಸಿಕೊಂಡರು.

ಧಾರವಾಡದಲ್ಲೊಂದು ಸುಸಜ್ಜಿತ ರಂಗಮಂದಿರದ ಅಗತ್ಯವಿದೆ ಎಂದು ಹಲವು ಬಾರಿ ಹೇಳುತ್ತಿದ್ದ ಕಾರ್ನಾಡರು ನಂದನ್ ನಿಲೇಕಣಿ ಅವರಿಗೆ ಹೇಳಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೃಜನಾ ರಂಗಮಂದಿರ ನಿರ್ಮಾಣಕ್ಕೂ ಕಾರಣರಾದರು. ಇಲ್ಲಿನ ಸಾರಸ್ವತಪುರದಲ್ಲಿದ್ದ ತಮ್ಮ ಪಾರಂಪರಿಕ ಮನೆ ಮಾರಿದ್ದರೂ, ಧಾರವಾಡದ ಸಂಬಂಧವನ್ನು ಅವರು ಕಳೆದುಕೊಂಡಿರಲಿಲ್ಲ ಎಂದು ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !