ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲ, ಶಾಂತಳ್ಳಿಯಲ್ಲಿ ಮಳೆ ಅಬ್ಬರ

ದಕ್ಷಿಣ ಕೊಡಗಿನಲ್ಲಿ ಮತ್ತೆ ವರುಣನ ಮುನಿಸು
Last Updated 9 ಸೆಪ್ಟೆಂಬರ್ 2019, 13:58 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ಭಾಗಮಂಡಲ, ನಾಪೋಕ್ಲು, ಬಾಳೆಲೆ ಭಾಗದಲ್ಲಿ ಕಳೆದ ನಾಲ್ಕು ದಿನದಿಂದ ಧಾರಾಕಾರ ಮಳೆಯಾಗುತ್ತಿದೆ. ಮತ್ತೆ ನದಿಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಭಾನುವಾರ ರಾತ್ರಿಯಿಂದಲೂ ಮಡಿಕೇರಿ ನಗರ ಸೇರಿದಂತೆ ದಕ್ಷಿಣ ಕೊಡಗಿನ ಹಲವೆಡೆ ವ್ಯಾಪಕ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದ ನಂತರ ಸ್ವಲ್ಪ ಮಳೆ ಬಿಡುವು ನೀಡಿದ್ದರೂ ಆತಂಕ ಮಾತ್ರ ನಿಂತಿಲ್ಲ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿರುವ ತಣ್ಣಿಮಾನಿ, ಚೇರಂಬಾಣೆ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮತ್ತೊಮ್ಮೆ ಭಾಗಮಂಡಲ–ನಾಪೋಕ್ಲು ಸಂಪರ್ಕ ಕಡಿತಗೊಂಡಿತ್ತು.

ಇನ್ನು ಉತ್ತರ ಕೊಡಗು ಭಾಗದ ಪುಷ್ಪಗಿರಿ ಬೆಟ್ಟದ ತಪ್ಪಲಿನ ಶಾಂತಳ್ಳಿಯಲ್ಲಿಯೂ ಕಳೆದ ನಾಲ್ಕು ದಿನಗಳಿಂದ ಮಳೆ ಪ್ರಮಾಣ 4 ಇಂಚುಗೂ ಹೆಚ್ಚು ದಾಖಲಾಗಿದೆ.

ನೀರಿನ ಮಟ್ಟ ಹೆಚ್ಚಳ: ಧಾರಾಕಾರ ಮಳೆಯಿಂದ ಕಾವೇರಿ ನದಿ, ಹಳ್ಳ ಕೊಳ್ಳಗಳು ಮೈದುಂಬಿಕೊಂಡಿವೆ. ಭಾಗಮಂಡಲದ ತ್ರಿವೇಣಿ ಸಂಗಮವು ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಇದೇ ರೀತಿ ವರುಣನ ಅಬ್ಬರ ಮುಂದುವರಿದರೆ ನೀರಿನಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕೊಡಗಿನ ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನ ಹರಿವು ಕೊಂಚ ಹೆಚ್ಚಳವಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿದೆ.

ಮೈತುಂಬಿ ಹರಿಯುತ್ತಿರುವ ಜಲಪಾತ:ನೀರಿನಮಟ್ಟ ಹೆಚ್ಚಾಗುತ್ತಿದ್ದು ಬೆಟ್ಟ ತಪ್ಪಲಿನಲ್ಲಿರುವ ಸಣ್ಣ ಜರಿಗಳಲ್ಲಿ ನೀರಿನ ಹರಿವು ರಭಸವಾಗಿದೆ. ಜಿಲ್ಲೆಯ ಅಬ್ಬಿ–ಮಲ್ಲಳ್ಳಿ–ಇರ್ಫು ಜಲಪಾತಗಳು ತುಂಬಿ ಹರಿಯುತ್ತಿವೆ. ಕೆಲವು ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 48.22 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇದುವರೆಗೆ 2,562.14 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,788.51 ಮಿ.ಮೀ ಮಳೆ ಸುರಿದಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 66.05 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇದುವರಗೆ 3,412.67 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,483.54 ಮಿ.ಮೀ ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ 2,531.52 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,862.98 ಮಿ.ಮೀ ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ 1,742.24 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,019.01 ಮಿ.ಮೀ ಸುರಿದಿತ್ತು.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 28, ನಾಪೋಕ್ಲು 92.60, ಸಂಪಾಜೆ 95, ಭಾಗಮಂಡಲ 48.60, ವಿರಾಜಪೇಟೆ ಕಸಬಾ 33, ಹುದಿಕೇರಿ 35, ಶ್ರೀಮಂಗಲ 71.20, ಪೊನ್ನಂಪೇಟೆ 54, ಅಮ್ಮತ್ತಿ 34.50, ಬಾಳೆಲೆ 50, ಸೋಮವಾರಪೇಟೆ ಕಸಬಾ 30.60, ಶನಿವಾರಸಂತೆ 25.40, ಶಾಂತಳ್ಳಿ 98.20, ಕೊಡ್ಲಿಪೇಟೆ 17, ಕುಶಾಲನಗರ 7.60, ಸುಂಟಿಕೊಪ್ಪ 15.20 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT