ಸೋಮವಾರ, ಮಾರ್ಚ್ 8, 2021
19 °C
ಮತ್ತೆ ಮೈದುಂಬಿದ ಕಾವೇರಿ, ಲಕ್ಷ್ಮಣತೀರ್ಥ; ಮಳೆ ನೀರಿನಲ್ಲಿ ಮುಳುಗಿದ ಗದ್ದೆಗಳು

ಮಲೆನಾಡಿನಲ್ಲಿ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾನುವಾರ ಮಳೆ ಬಿರುಸು ಪಡೆದುಕೊಂಡಿದೆ. ಕರಾವಳಿಯಲ್ಲಿ ಬೆಳಿಗ್ಗೆ ಬಿಡುವು ಕೊಟ್ಟಿದ್ದ ಮಳೆ ಸಂಜೆ ನಂತರ ರಭಸದ ಗಾಳಿಯೊಂದಿಗೆ ಜೋರಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಭಾನುವಾರ ದಿನವಿಡೀ ಮಳೆ ಸುರಿಯಿತು. ಜಿಲ್ಲೆಯಲ್ಲಿ ನದಿ ಹಾಗೂ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ತಲಕಾವೇರಿ, ಭಾಗಮಂಡಲ ಹಾಗೂ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸತತ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ಕಾವೇರಿ ನದಿ ಮತ್ತೆ ಮೈದುಂಬಿಕೊಂಡಿದೆ. ಇದೇ ರೀತಿ ನಿರಂತರ ಮಳೆ ಮುಂದುವರಿದರೆ ಭಾಗಮಂಡಲ ಜಲಾವೃತವಾಗುವ ಸಾಧ್ಯತೆಯಿದೆ.

ಕೊಡಗಿನ ದಕ್ಷಿಣ ಭಾಗವಾದ ಬಿರುನಾಣಿ, ಶ್ರೀಮಂಗಲ, ಕುಟ್ಟ, ಮಾಕುಟ್ಟ, ಹುದಿಕೇರಿ, ಪೊನ್ನಂಪೇಟೆ, ಬಾಳೆಲೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಬಾಳೆಲೆ ಸಮೀಪ, ನೂರಾರು ಎಕರೆ ಭತ್ತದ ಗದ್ದೆ ಮಳೆ ನೀರಿನಲ್ಲಿ ಮುಳುಗಡೆಯಾಗಿವೆ.

ವಿರಾಜಪೇಟೆಯ ಕದನೂರು ಹೊಳೆ ಹಾಗೂ ಭೇತ್ರಿ ಸಮೀಪದ ಕಾವೇರಿ ನದಿಯಲ್ಲಿ ನೀರಿನಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಬೇಟೋಳಿ, ಆರ್ಜಿ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಅಮ್ಮತ್ತಿ, ಬಿಳುಗುಂದ, ಒಂಟಿಯಂಗಡಿ, ಚಂಬೆಬೆಳ್ಳೂರು, ಕದನೂರು, ಕಾಕೋಟುಪರಂಬು, ಕೆದಮುಳ್ಳೂರು ಸುತ್ತಮುತ್ತ ಉತ್ತಮ ಮಳೆಯಾಗುತ್ತಿದೆ. 

24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 150 ಮಿ.ಮೀ, ಪೊನ್ನಂಪೇಟೆ 109, ವಿರಾಜಪೇಟೆ 68, ಹುದಿಕೇರಿ 48, ಮಡಿಕೇರಿ 34, ನಾಪೋಕ್ಲು 31 ಮಿ.ಮೀ ಮಳೆಯಾಗಿದೆ. 

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಾದ್ಯಂತ ಶನಿವಾರ ಸಂಜೆಯಿಂದ ಭಾನುವಾರ ಸಂಜೆಯ ವರೆಗೂ ಉತ್ತಮ ಮಳೆಯಾಗಿದೆ. ಹೇಮಾವತಿ ನದಿ ನೀರಿನ ಹರಿವು ಹೆಚ್ಚಾಗಿದೆ.

ಮೂಡಿಗೆರೆ ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ಭಾನುವಾರವೂ ಮುಂದುವರಿದಿದೆ. ತಾಲ್ಲೂಕಿನ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.

ಬಿಳ್ಳೂರು– ಮೂಲರಹಳ್ಳಿ ಸಂಪರ್ಕಿಸುವ ರಸ್ತೆಯ ಪಟದೂರು ಗ್ರಾಮದ ರಾಮಕ್ಕನ ಹಳ್ಳದಲ್ಲಿ ನೀರು ಸೇತುವೆಯ ಮೇಲೆ ಹರಿದು ಸಂಪರ್ಕ ಕಡಿತವಾಗಿತ್ತು. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಜನರು ಮನೆಯಿಂದ ಹೊರಗೆ ಹೋಗಲಾಗದ ಸ್ಥಿತಿ ಉಂಟಾಗಿದೆ. ಕೊಟ್ಟಿಗೆಗಾರ ಮತ್ತು ಬಣಕಲ್‌ ಪರಿಸರದಲ್ಲೂ ಧಾರಾಕಾರ ಮಳೆಯಾಗುತ್ತಿದೆ.

ಕೊಪ್ಪ, ಕಳಸ, ಬಾಳೆಹೊನ್ನೂರು, ಶೃಂಗೇರಿ, ಅಜ್ಜಂಪುರ ಸುತ್ತಮುತ್ತ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿ, ಆಗುಂಬೆ, ಹೊಸನಗರ, ಮಾಸ್ತಿಕಟ್ಟೆ, ರಿಪ್ಪನ್‌ಪೇಟೆ, ಹುಲಿಕಲ್, ಜೋಗ, ಸಾಗರ ಭಾಗದಲ್ಲಿ ಬೆಳಿಗ್ಗೆಯಿಂದಲೇ ಒಳ್ಳೆಯ ಮಳೆಯಾಗಿದೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ, ಆನವಟ್ಟಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಲಿಂಗನಮಕ್ಕಿ, ಚಕ್ರಾ, ಮಾಣಿ, ಸಾವೇಹಕ್ಲು ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ ಭಾನುವಾರ ಅತಿ ಹೆಚ್ಚು 198 ಮಿ.ಮೀ. ಮಳೆಬಿದ್ದಿರುವುದು ದಾಖಲಾಗಿದೆ.

ದಾವಣಗೆರೆ ಜಿಲ್ಲೆ ನ್ಯಾಮತಿಯಲ್ಲಿ ಸಾಧಾರಣ ಮಳೆಯಾಗಿದ್ದು, ದಾವಣಗೆರೆ ನಗರ ಹಾಗೂ ಮಲೇಬೆನ್ನೂರಿನಲ್ಲಿ ತುಂತುರು ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ದಿನವಿಡೀ ಬಿರುಸಾದ ಮಳೆ ಸುರಿಯಿತು. ಕದ್ರಾ ಅಣೆಕಟ್ಟೆ ಭರ್ತಿಯಾಗಿದ್ದು, ಭಾನುವಾರ ಸಂಜೆ ಒಟ್ಟು 31 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಧಾರವಾಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಕಲಬುರ್ಗಿಯಲ್ಲಿ ನಾಲ್ಕನೇ ದಿನವೂ ಮಳೆ ಮುಂದುವರಿದಿದೆ. ಆಳಂದ, ಕಾಳಗಿ ಮತ್ತು ಕಮಲಾಪುರದಲ್ಲಿ ಮಳೆಯಾಗಿದೆ. ಗದಗ, ಹಾವೇರಿ, ಯಾದಗಿರಿಯಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ.

ಮಳೆ: ಮುನ್ನೆಚ್ಚರಿಕೆ

ಕೊಡಗಿನಲ್ಲಿ ಇನ್ನೂ ಐದು ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ. ತುರ್ತು ಸೇವೆಗೆ ಸಹಾಯವಾಣಿ ಆರಂಭಿಸಿದ್ದು ದೂರವಾಣಿ: 08272 221077, ಮೊಬೈಲ್‌: 85500 01077.

ಭಾರಿ ಮಳೆ: ಕುಸಿದ ಮನೆ

ಬೇಲೂರು ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅರೇಹಳ್ಳಿ ಹೋಬಳಿಯ ಸುಳಗಳಲೆಯಲ್ಲಿ ಭೈರಮ್ಮ ಎಂಬುವರಿಗೆ ಸೇರಿದ ಮನೆ ಭಾನುವಾರ ಮುಂಜಾನೆ ಕುಸಿದಿದೆ. ಮಲಗಿದ್ದ ವೇಳೆ ಶಬ್ದ ಉಂಟಾಗಿದ್ದು, ಮನೆಯಿಂದ ಆಚೆ ಬಂದಿದ್ದಾರೆ. ಈ ವೇಳೆ ಮನೆಯ ಒಂದು ಭಾಗ ಕುಸಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು