ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

Last Updated 9 ನವೆಂಬರ್ 2018, 10:04 IST
ಅಕ್ಷರ ಗಾತ್ರ

ಬೆಂಗಳೂರು:‘ಸರ್ಕಾರದ ವತಿಯಿಂದ ನಡೆಸಲಾಗುವ ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಬೇಕು’ ಎಂದು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

ಈ ಸಂಬಂಧ ಕೊಡಗು ಜಿಲ್ಲೆಯ ಹೈಸೊಡ್ಲೂರು ಗ್ರಾಮದ ಕೆ.ಪಿ.ಮಂಜುನಾಥ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪವನಚಂದ್ರ ಶೆಟ್ಟಿ ‘ಸರ್ಕಾರ 2015 ರಿಂದ ಟಿಪ್ಪು ಜಯಂತಿ ಆಚರಿಸುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಬೊಕ್ಕಸದಿಂದ ₹ 60 ಲಕ್ಷ ಖರ್ಚು ಮಾಡುತ್ತಿದೆ. ಈ ಹಿಂದೆ ಆಚರಣೆ ವೇಳೆ ಕೊಡಗಿನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆದ್ದರಿಂದ, ಆಚರಣೆಗೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ನ್ಯಾಯಮೂರ್ತಿಗಳು, ‘ಟಿಪ್ಪು ಜಯಂತಿಗೆ ಎರಡು ದಿನ ಇದೆ ಎನ್ನುವಾಗ ಅರ್ಜಿ ಸಲ್ಲಿಸುತ್ತೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಸರ್ಕಾರ ರ ಈಗಾಗಲೇ ನಿಮ್ಮ ಮನವಿಯನ್ನು ತಿರಸ್ಕರಿಸಿದೆ. ಅದರೆ, ನೀವು ಸರ್ಕಾರದ ಈ ನಿರ್ಧಾರವನ್ನೇ ಈತನಕ ಪ್ರಶ್ನಿಸಿಲ್ಲ" ಎಂದು ಕಿಡಿ ಕಾರಿದರು.

‘ಈ ಹಿಂದೆಯೂ ಹೈಕೋರ್ಟ್ ನಿಮ್ಮ ಮನವಿ ಪರಿಗಣಿಸಿಲ್ಲ. ಮಧ್ಯಂತರ ತಡೆಯನ್ನೂ ನೀಡಿರಲಿಲ್ಲ. ಈಗಲೂ ಅದನ್ನು ಪ್ರಶ್ನಿಸದೇ ಮತ್ತೆ ತಡೆ ಕೇಳುವುದು ಸರಿಯಲ್ಲ. ನೀವು ನಿಮ್ಮ ಮಿತಿ ಮೀರುತ್ತಿದ್ದೀರಿ’ ಎಂದು ಎಚ್ಚರಿಸಿದರು.

‘ಇದು ಸರ್ಕಾರದ ಆಚರಣೆ. ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

‘ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲು ನಿರ್ದೇಶಿಸಿರುವ ಸರ್ಕಾರದ ಸುತ್ತೋಲೆ ರದ್ದುಗೊಳಿಸಬೇಕು’ಎಂಬುದು ಅರ್ಜಿದಾರರ ಕೋರಿಕೆ.

’2017ರ ಅಕ್ಟೋಬರ್ 24ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ 30 ಜಿಲ್ಲಾ ಕೇಂದ್ರಗಳಿಗೆ ತಲಾ ₹ 50 ಸಾವಿರ ಮತ್ತು ತಾಲ್ಲೂಕು ಕೇಂದ್ರಗಳಿಗೆ ತಲಾ ₹ 25 ಸಾವಿರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT