ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಣವಿಲ್ಲದ ಅಗಲಿಕೆ: ವಿಚ್ಛೇದನಕ್ಕೆ ಸೈ

Last Updated 2 ಜನವರಿ 2020, 5:19 IST
ಅಕ್ಷರ ಗಾತ್ರ

ಬೆಂಗಳೂರು: ‘ಮದುವೆಯಾದ ನಂತರ ದಶಕಕ್ಕೂ ಹೆಚ್ಚು ಕಾಲದಿಂದ ಪತ್ನಿ ನನ್ನಿಂದ ದೂರಾಗಿ ತವರು ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ನನ್ನ ವಿಚ್ಛೇದನ ಅರ್ಜಿ ಸಕಾರಣವಾಗಿದೆ ಎಂದು ಪರಿಗಣಿಸಬೇಕು’ ಎಂದು ಕೋರಿದ್ದ ಪತಿಯ ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ. ಈ ಕುರಿತಂತೆ ಪತಿಯ ಪರವಾಗಿ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ 33 ವರ್ಷದ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಹಾಗೂ ನ್ಯಾಯಮೂರ್ತಿ ನಟರಾಜ ರಂಗಸ್ವಾಮಿ ಅವರಿದ್ದ ವಿಭಾಗೀಯ ನ್ಯಾಯ‍ಪೀಠ ವಜಾ ಮಾಡಿದೆ.

‘ಪರಸ್ಪರ ವೈವಾಹಿಕ ಹಕ್ಕುಗಳನ್ನು ಪೂರೈಸಿಕೊಳ್ಳದೆ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಉದ್ದೇಶ ಹೊಂದಿ, ಪತಿಯಿಂದ ದೂರಾಗಿದ್ದರೆ ಇದನ್ನು ಪರಿತ್ಯಕ್ತ ಪತಿಗೆ ಅನ್ವಯಿಸಬಹುದು. ಹೀಗಾಗಿ ಕೌಟುಂಬಿಕ ನ್ಯಾಯಾಲಯ 2013ರ ನವೆಂಬರ್‌ 30ರಂದು ಪತಿಯ ಪರವಾಗಿ ನೀಡಿರುವ ಆದೇಶ ಸರಿಯಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಬಾಗಲಕೋಟೆ ಜಿಲ್ಲೆಯ ನಿವಾಸಿಗಳಾದ ಪತಿ ಮತ್ತು ಪತ್ನಿ 2002ರಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ವಿಧ್ಯುಕ್ತವಾಗಿ ಮದುವೆಯಾಗಿ, ಅನ್ಯೋನ್ಯ ಸಂಸಾರ ನಡೆಸಿದ್ದರು. ಈ ಅವಧಿಯಲ್ಲಿ ದಂಪತಿಗೆ ಒಬ್ಬ ಮಗನೂ ಜನಿಸಿದ್ದ.

ಆರು ವರ್ಷಗಳ ನಂತರ ಪತ್ನಿ ಪದೇ ಪದೇ ತವರು ಮನೆಗೆ ಹೋಗುವ ಅಭ್ಯಾಸ ರೂಢಿಸಿಕೊಂಡರು. ಇದನ್ನು ಪತಿ ಆಕ್ಷೇಪಿಸಿ, ಹಿರಿಯರ ಜೊತೆ ರಾಜಿ ಸಂಧಾನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಪತಿಯ ಜೊತೆ ವಾಸ ಮಾಡುತ್ತೇನೆ ಎಂಬ ಪತ್ನಿಯ ಭರವಸೆ ಈಡೇರದೇ ಹೋದಾಗ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದರು.

ಏತನ್ಮಧ್ಯೆ, ಪತ್ನಿ ಜೀವನಾಂಶ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. ಅಂತೆಯೇ, ಪತಿಯ ಸ್ಥಿರಾಸ್ತಿಯಲ್ಲಿ ಪಾಲುದಾರಿಕೆ ದಾವೆ ಹೂಡಿ ಅದರಲ್ಲೂ ಯಶಸ್ವಿಯಾಗಿ ತಮ್ಮ ಪರ ಡಿಕ್ರಿ (ಸಿವಿಲ್‌ ಕೋರ್ಟ್‌ ತೀರ್ಪು)ಪಡೆದಿದ್ದರು.

ಈ ಹಂತದಲ್ಲಿ ವಿಚ್ಛೇದನ ಕೋರಿದ್ದ ಪತಿಯ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು. ಈ ಆದೇಶವನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದೀಗ ಮೇಲ್ಮನವಿ ವಜಾ ಮಾಡಿರುವ ನ್ಯಾಯಪೀಠ, ಪತ್ನಿಯ ಕ್ರೌರ್ಯದ ಆಪಾದನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ’ವೈವಾಹಿಕ ಜೀವನದಲ್ಲಿ ಪತಿ–ಪತ್ನಿ ನಡುವೆ ಪರಸ್ಪರ ಹೊಂದಾಣಿಕೆ ಸಾಧ್ಯವಾಗದೇ ಒಬ್ಬರೊನ್ನೊಬ್ಬರು ಅಗಲಿರುವುದು ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯಲು ಸೂಕ್ತ ಅಂಶ. ಆದರೆ, ಕೇವಲ ಭೌತಿಕವಾಗಿ ಪರಸ್ಪರ ಅಗಲಿಕೆಯ ಕಾರಣಕ್ಕೆ ಮಾತ್ರವೇ ವಿಚ್ಛೇದನ ಲಭಿಸುವುದಿಲ್ಲ’ ಎಂದು ಹೇಳಿದೆ.

‘ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಮತ್ತೊಬ್ಬರನ್ನು ಬಿಟ್ಟು ಜೀವಿಸುವಂತಹ ಮಾನಸಿಕ ಸ್ಥಿತಿ ಹೊಂದಿರಬೇಕು. ಯಾವುದೇ ನಿರ್ದಿಷ್ಟ ಪ್ರಕರಣದಲ್ಲಿ ಒಬ್ಬರನ್ನೊಬ್ಬರು ಉದ್ದೇಶಪೂರ್ವಕವಾಗಿ ಅಗಲಿದ್ದಾರೆಯೇ ಎಂದು ಕಂಡುಕೊಂಡು ವಿಚ್ಛೇದನ ತೀರ್ಮಾನ ನೀಡಬಹುದು’ ಎಂದು ವಿವರಿಸಿದೆ.

36 ವರ್ಷದ ಪತಿಯ ಪರ ಹಿರಿಯ ವಕೀಲ ಬಿ.ಎಂ.ಅಂಗಡಿ ಹಾಗೂ ಜಿ.ಎಚ್‌.ರತ್ನಮಾಲಾ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT