ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಐಎ ತನಿಖೆ ಅಂದ್ರೆ ಹೈಕೋರ್ಟ್‌ ಹೆದರಬೇಕಾ’

ಆರ್‌ಎಸ್‌ಎಸ್‌ ಸ್ವಯಂಸೇವಕ ರುದ್ರೇಶ್‌ ಹತ್ಯೆ ಪ್ರಕರಣ
Last Updated 28 ಮೇ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಕರಣವನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ತನಿಖೆ ಮಾಡಿದೆ ಎಂದಾಕ್ಷಣ ನಾವು ಹೆದರಿಬಿಡಬೇಕಾ’ ಎಂದು ಹೈಕೋರ್ಟ್‌ ಎನ್‌ಐಎ ಅನ್ನು ಪ್ರಶ್ನಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಅಸೀಂ ಶರೀಫ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ರುದ್ರೇಶ್‌ ಅವರನ್ನು ಆರ್‌ಎಸ್ಎಸ್‌ ಸ್ವಯಂ ಸೇವಕ ಎಂಬ ಒಂದೇ ಕಾರಣಕ್ಕೆ ಕೊಲೆ ಮಾಡಲಾಗಿದೆ. ಇದೊಂದು ಹೇಯ ಮತ್ತು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹವಾದ ಕೃತ್ಯ. ಯಾವುದೇ ಕಾರಣಕ್ಕೂ ಅರ್ಜಿದಾರರಿಗೆ ಜಾಮೀನು ನೀಡಬಾರದು. ಈ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಿದ್ದು ಎನ್‌ಐಎ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರವಿ ಮಳಿಮಠ ಅವರು, ‘ಏನ್ರೀ ಎನ್‌ಐಎ ತನಿಖೆ ಮಾಡಿದೆ ಎಂದಾಕ್ಷಣ ಹೈಕೋರ್ಟ್‌ ಹೆದರಿಕೊಳ್ಳಬೇಕಾ. ಪ್ರಕರಣ ಏನೆಂಬುದನ್ನು ನ್ಯಾಯಸಮ್ಮತವಾಗಿ ಪರಿಶೀಲಿಸಲಾಗುವುದು’ ಎಂದರು.

ಪ್ರಸನ್ನಕುಮಾರ್, ‘ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸಿಬಿಐ ಮತ್ತು ಎನ್‌ಐಎ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಆದರೆ, ರಾಜ್ಯ ಪೊಲೀಸರು ತನಿಖೆ ನಡೆಸುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ’ ಎಂದು ಸಮಜಾಯಿಷಿ ನೀಡಿದರು.

ಅರ್ಜಿದಾರರ ಪರ ವಕೀಲ ಎಸ್‌.ಬಾಲಕೃಷ್ಣನ್‌, ‘ಅರ್ಜಿದಾರರು ಸಮಾಜ ಸೇವಕ. ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ. ಅವರ ವಿರುದ್ಧ ಯಾವುದೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಇಲ್ಲ. ಮುಸ್ಲಿಂ ಎನ್ನುವ ಒಂದೇ ಕಾರಣಕ್ಕೆ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಆಕ್ಷೇಪಿಸಿದರು.

ಇದನ್ನು ಅಲ್ಲಗಳೆದ ಪ್ರಸನ್ನ ಕುಮಾರ್, ‘ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಅಸೀಂ ಶರೀಫ್‌ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ. ಇದನ್ನು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿದೆ. ಈ ಆದೇಶವನ್ನು ಅಸೀಂ ಶರೀಫ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್‌ ಈ ಸಂಬಂಧ ಯಾವುದೇ ಮಧ್ಯಂತರ ಆದೇಶ ಮಾಡಿಲ್ಲ. ವಿಚಾರಣೆ ಮುಕ್ತಾಯವಾಗಿದ್ದು ಆದೇಶ ಕಾಯ್ದಿರಿಸಲಾಗಿದೆ. ಆದ್ದರಿಂದ ಸುಪ್ರಿಂ ಕೋರ್ಟ್‌ ಆದೇಶ ಬರುವತನಕ ಈ ಜಾಮೀನು ಅರ್ಜಿ ವಿಚಾರಣೆ ಮುಂದೂಡಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ಗಣವೇಷಧಾರಿಯಾಗಿ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ನಡೆದಿತ್ತು. ಪ್ರಕರಣದ ಆರೋಪಿಯಾಗಿರುವ ಅಸೀಂ ಶರೀಫ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT