ಶುಕ್ರವಾರ, ಜುಲೈ 30, 2021
22 °C

ಮಂಡ್ಯ: ಮುಸ್ಲಿಂ ಶಿಕ್ಷಕನಿಂದ ಪುರಾತನ ದೇಗುಲಗಳ ರಕ್ಷಣೆ, ನವೀಕರಣ

ಶ್ರುತಿ ಎಚ್.ಎಂ.ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ಜಿಲ್ಲೆಯ ಐತಿಹಾಸಿಕ ಮಹತ್ವವುಳ್ಳ ನಾಲ್ಕು ಪುರಾತನ ಹಿಂದು ದೇಗುಲಗಳನ್ನು ನಿವೃತ್ತ ಮುಸ್ಲಿಂ ಶಿಕ್ಷಕರೊಬ್ಬರು ನವೀಕರಣಗೊಳಿಸಿದ್ದಾರೆ! ಇಷ್ಟೇ ಅಲ್ಲದೆ, ಶಿಥಿಲಗೊಂಡಿರುವ ದೇಗುಲಗಳ ರಕ್ಷಣೆಯ ಕೈಂಕರ್ಯದಲ್ಲಿ ಸದಾ ತೊಡಗಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಮೊಹಮ್ಮದ್ ಕಲೀಮುಲ್ಲಾ ಎಂಬುವವರೇ ದೇಗುಲಗಳ ರಕ್ಷಣೆ, ನವೀಕರಣದ ಕಾಯಕದಲ್ಲಿ ತೊಡಗಿಕೊಂಡಿರುವವರು. ಇವರು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ. ಶಿಥಿಲಗೊಂಡಿರುವ ದೇಗುಲಗಳನ್ನು ಗುರುತಿಸುವುದು, ನವೀಕರಣಗೊಳಿಸುವುದು ಅಲ್ಲಿ ಕಂಡುಕೊಂಡ ಅಂಶಗಳ ದಾಖಲೀಕರಣವೇ (ಇವು ಅಕಾಡೆಮಿಯ ವೆಬ್‌ಸೈಟ್‌ನಲ್ಲೂ ಲಭ್ಯವಿವೆ) ಇವರ ಸದ್ಯದ ಕಾಯಕ.

ಕಳೆದ ಆರು ವರ್ಷಗಳಲ್ಲಿ ಕಲೀಮುಲ್ಲಾ ಅವರು ಮಚಲಘಟ್ಟ ಈಶ್ವರ ದೇಗುಲ, ಕೃಷ್ಣದೇವರಾಯರ ಆಡಳಿತ ಕಾಲದ ಎರಡು ಚೆನ್ನಕೇಶವ ದೇವಸ್ಥಾನ ಮತ್ತು ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿರುವ ಬಸವ ದೇಗುಲದ ನವೀಕರಣಕ್ಕೆ ಮುಂಚೂಣಿಯಲ್ಲಿ ಸಹಾಯ ಮಾಡಿದ್ದಾರೆ.

ಇತಿಹಾಸದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಕಲೀಮುಲ್ಲಾ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಆ ವಿಷಯದಲ್ಲಿ ಸ್ನಾತಕೋತ್ತರ ಪ‍ದವಿ ಅಧ್ಯಯನ ನಡೆಸಿದ್ದಾರೆ!

‘ಮಂಡ್ಯದ ಬಸರಾಳುವಿನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಹೊಯ್ಸಳರ ಕಾಲದ ಮಲ್ಲಿಕಾರ್ಜುನ ದೇಗುಲವಿದೆ. ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದಾಗ ಆ ದೇಗುಲವನ್ನು ನೋಡುತ್ತಿದ್ದೆ. ಆ ದೇಗುಲದ ಬಗ್ಗೆ ಲೇಖನವನ್ನೂ ಬರೆದಿದ್ದೆ. ಅದು ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದರಿಂದ ಸ್ಫೂರ್ತಿ ದೊರೆತು ಆ ಪ್ರದೇಶದ ಪ್ರಾಚೀನ ದೇಗುಲಗಳ ಬಗ್ಗೆ ಶೋಧ ನಡೆಸಲಾರಂಭಿಸಿದೆ. ಈ ವೇಳೆ, ಅನೇಕ ದೇಗುಲಗಳು ನಿರ್ವಹಣೆಯಿಲ್ಲದೆ ಶಿಥಿಲವಾಗಿರುವುದು ತಿಳಿಯಿತು’ ಎಂದು ಕಲೀಮುಲ್ಲಾ ಹೇಳಿದ್ದಾರೆ.

ಇಂತಹ ದೇಗುಲಗಳ ಐತಿಹಾಸಿಕ ಮಹತ್ವದ ಬಗ್ಗೆ ಜನರಿಗೆ ಅರಿವಿಲ್ಲದಿರುವುದೇ ಅವು ಪಾಳುಬೀಳಲು ಕಾರಣ ಎಂದು ಕಲೀಮುಲ್ಲಾ ವಿಷಾದಿಸುತ್ತಾರೆ. ಅಲ್ಲದೆ, ಅವುಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಬಿಎಂಟಿಸಿಯ ಬೆಂಗಳೂರು ದರ್ಶಿನಿ ಟ್ರಿಪ್‌ಗಳಲ್ಲಿ ಕರ್ತವ್ಯನಿರ್ವಹಿಸುವ ಚಾಲಕ ಧನಪಾಲ್ ಎಂಬುವವರೂ ಇತಿಹಾಸ ಅಕಾಡೆಮಿ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದಾರೆ. ವಾರದ ರಜಾ ದಿನಗಳಲ್ಲಿ ಶಾಸನಗಳು ಮತ್ತು ಸ್ಮಾರಕಗಳ ದಾಖಲೀಕರಣದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಜತೆಗೆ, ತಮ್ಮ ಬಸ್‌ನಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ನೆರವಾಗುವ ನಿಟ್ಟಿನಲ್ಲಿ ನಗರದ ಮಾಹಿತಿಯುಳ್ಳ ಕಿರುಪುಸ್ತಕವೊಂದನ್ನೂ ಸಿದ್ಧಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು