ಅಪರೂಪದ ಒಳನೋಟ ದಕ್ಕಿಸಿದ ಕರ್ನಾಟಕ ಇತಿಹಾಸ ಗೋಷ್ಠಿ

7

ಅಪರೂಪದ ಒಳನೋಟ ದಕ್ಕಿಸಿದ ಕರ್ನಾಟಕ ಇತಿಹಾಸ ಗೋಷ್ಠಿ

Published:
Updated:
Prajavani

ಧಾರವಾಡ: ಇತಿಹಾಸ ಒಂದರ್ಥದಲ್ಲಿ ನಿಗೂಢ, ಒಂದು ರೀತಿ ಕುತೂಹಲದ ಕಣಜ. ಸಾಮ್ರಾಜ್ಯಗಳು ಸ್ಥಾಪನೆಗೊಂಡಿದ್ದು, ಪತನಗೊಂಡಿದ್ದು, ಅದಕ್ಕೆ ಪೂರಕವಾದ ದಾಖಲೆಗಳು, ಆಯಾ ಸಂದರ್ಭದ ವೈಶಿಷ್ಟ್ಯಗಳು, ಅವು ಶಾಸನಗಳ ಮೂಲಕ ದಕ್ಕಿದ್ದು... ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವಲ್ಲಿ ‘ಕರ್ನಾಟಕ ಇತಿಹಾಸ: ನೂತನ ಒಳನೋಟಗಳು’ ಗೋಷ್ಠಿ ಯಶಸ್ವಿಯಾಯಿತು.

2ನೇ ಸಮಾನಾಂತರ ವೇದಿಕೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಮೂವರು ಇತಿಹಾಸ ತಜ್ಞರು, ದಕ್ಕಿದ ಸೀಮಿತ ಅವಧಿಯಲ್ಲಿಯೇ ಅತ್ಯಂತ ಪರಿಣಾಮಕಾರಿಯಾಗಿ ವಿಷಯ ಮಂಡಿಸಿದರು.

ಯಾವುದೇ ಇತಿಹಾಸ ರಚನೆಗೆ ಪೂರಕವಾಗಿ ಹಲವು ಆಕರಗಳು ಇದ್ದೇ ಇರುತ್ತವೆ. ಅವುಗಳ ಆಧಾರದಲ್ಲಿಯೇ ಒಂದು ಕಾಲಘಟ್ಟದ ಇತಿಹಾಸ ರೂಪುಗೊಳ್ಳುತ್ತದೆ. ಅಂಥದೇ ಒಂದು ಆಕರ ‘ಬಖೈರು’. ಇತಿಹಾಸ ರಚನೆಗೆ ಅತ್ಯಂತ ಪ್ರಮುಖವಾದದ್ದು. ಆದರೆ ಇತಿಹಾಸ, ಸಾಹಿತ್ಯ ಸಂಶೋಧಕರು ಅದನ್ನು ಬಳಸಿಕೊಂಡಿದ್ದು ಕಡಿಮೆ ಎಂದು ಡಾ.ಲಕ್ಷ್ಮಣ ತೆಲಗಾವಿ ಅಭಿಪ್ರಾಯಪಟ್ಟರು.

ವಿಜಯನಗರ ಸಂಸ್ಕೃತಿಯ ಸ್ವರೂಪ ಕುರಿತು ಮಾತನಾಡಿದ ಡಾ.ಎಸ್.ಚಂದ್ರಶೇಖರ, ‘ವಿಜಯನಗರ ಸಾಮ್ರಾಜ್ಯ 14ನೇ ಶತಮಾನದಿಂದ ಆರಂಭಗೊಂಡು 18ನೇ ಶತಮಾನದ ಕೊನೆಯವರೆಗೆ ಅಂದರೆ ಸುಮಾರು 400 ವರ್ಷಗಳ ಚರಿತ್ರೆ ಹೊಂದಿದೆ. 19ನೇ ಶತಮಾನದಲ್ಲಿ ಶಿಸ್ತುಬದ್ಧವಾಗಿ ಚರಿತ್ರೆ ದಾಖಲಿಸುವ ಪ್ರಕ್ರಿಯೆ ಆರಂಭಗೊಂಡ ಹೊತ್ತಿನಲ್ಲಿ ವಿಜಯನಗರ ಚರಿತ್ರೆ ಬರವಣಿಗೆ ಕೂಡ ಆರಂಭವಾಯಿತು. ಪ್ರಾಚೀನ ಭಾರತದ ಭವ್ಯ ಪರಂಪರೆಯನ್ನು ಪುನರುಜ್ಜೀವನಗೊಳಿಸಬೇಕು ಎನ್ನುವ ನಿಲುವನ್ನು ಅಂದಿನ ಇತಿಹಾಸಕಾರರು ತಳೆದರು’ ಎನ್ನುವ ಮಾಹಿತಿ ನೀಡಿದರು.

ಬಾದಾಮಿ ಚಾಲುಕ್ಯರ ಶಾಸನಗಳು ಕುರಿತು ಮಾತನಾಡಿದ ಡಾ.ಶೀಲಾಕಾಂತ ಪತ್ತಾರ, ‘ನಮ್ಮ ಇತಿಹಾಸದ ಭಾಗವಾಗಿರುವ ಬಹುತೇಕ ಶಾಸನಗಳು ಊರಿನ ಹೆಸರು ಅಥವಾ ರಾಜವಂಶದ ಹೆಸರಿನಿಂದ ಆರಂಭವಾಗುತ್ತವೆ. ಇದಕ್ಕೆ ಚಾಲುಕ್ಯರ ಕಾಲದ ಶಾಸನಗಳೂ ಹೊರತಲ್ಲ. 4ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಂಸ್ಕೃತ ಶಾಸನಗಳಿದ್ದವು. ಆದರೆ ಚಾಲುಕ್ಯರ ಕಾಲದಲ್ಲಿ ಕನ್ನಡ ಲಿಪಿ ಇರುವ ಶಾಸನಗಳು ಹೆಚ್ಚಿದ್ದವು’ ಎನ್ನುವ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ‘ಇತಿಹಾಸ ನಿಂತ ನೀರಲ್ಲ. ನಿರಂತರ ಸಂಶೋಧನೆಗಳಿಂದ ಇತಿಹಾಸದ ಪುಟಗಳು ಬದಲಾಗುತ್ತವೆ. ಎರಡು ಸಾವಿರ ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ಅನೇಕ ಚಾರಿತ್ರಿಕ ಘಟನೆಗಳು ಹಲವು ತಿರುವುಗಳನ್ನು ಪಡೆದಿವೆ. ಹೊಸದಾಗಿ ದೊರೆತ ಆಕರಗಳಿಂದ ಚರಿತ್ರೆಯ ಪುಟಗಳು ಬದಲಾಗುತ್ತ ಹೋಗುತ್ತವೆ.’ ಎನ್ನುವ ಮೂಲಕ ಗೋಷ್ಠಿಗೆ ತೆರೆ ಎಳೆದರು.

ಬಖೈರ್ ಆದ ಖಬರ್

‘ಕನ್ನಡ ಇತಿಹಾಸವನ್ನು ದಾಖಲಿಸುವಲ್ಲಿ ಸಂಶೋಧಕರು ಬಹುತೇಕವಾಗಿ ಕೈಫಿಯತ್ತುಗಳನ್ನೇ ಅವಲಂಬಿಸಿದ ಉದಾಹರಣೆಗಳಿವೆ. ‘ಖಬರ್’ ಶಬ್ದ ವರ್ಣಪಲ್ಲಟವಾಗಿ ಬಖೈರ್ ಆಗಿದ್ದು, ಕನ್ನಡದಲ್ಲಿ ರಾಮರಾಜನ ಬಖೈರು, ಚಿತ್ರದುರ್ಗದ ಬಖೈರು ಮತ್ತು ಹೈದರನಾಮೆ ಬಖೈರು ಇವೆ. ಈ ಪೈಕಿ ರಾಮರಾಜನ ಬಖೈರು, ವಿಜಯನಗರ ಸಾಮ್ರಾಜ್ಯದ ಕೊನೆಯ ದಿನಗಳು ಮತ್ತು ದುರಂತ ತಿಳಿಸುವ ಅಧಿಕೃತ ದಾಖಲೆ. ಕರ್ನಾಟಕದ ಸಂಸ್ಕೃತಿ ಶೋಧಿಸುವ ನಿಟ್ಟಿನಲ್ಲಿ ಬಖೈರುಗಳ ಪಾತ್ರ ಅತ್ಯಂತ ಹಿರಿದು’ ಎಂದು ತೆಲಗಾವಿ ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !