ಗುರುವಾರ , ಜುಲೈ 29, 2021
26 °C

ರಾಜ್ಯ ಸರ್ಕಾರದಿಂದ ಕರಾಳ ನಿರ್ಣಯ: ಎಚ್.ಕೆ. ಪಾಟೀಲ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ್ದು ಕರಾಳ ನಿರ್ಣಯ. ಈ ಮೂಲಕ ಕಪ್ಪು ಹಣವನ್ನು ಆಸ್ತಿ ರೂಪದಲ್ಲಿ ಪರಿವರ್ತನೆಗೆ ಸರ್ಕಾರವೇ ದಾರಿ ಮಾಡಿಕೊಟ್ಟಿದೆ’ ಎಂದು ಶಾಸಕ ಎಚ್.ಕೆ. ಪಾಟೀಲ ಕಿಡಿಕಾರಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಭೂ ಸುಧಾರಣೆ ಕಾಯ್ದೆ ಮೂಲಕ ಗೇಣಿದಾರರಿಗೆ ಅನುಕೂಲ ಮಾಡಿತ್ತು. ಆದರೆ, ರಾಜ್ಯ ಸರ್ಕಾರ, ಹಣವಂತರಿಗೆ ಮಣೆ ಹಾಕಿದೆ. ಇದರಿಂದ ಕೃಷಿಕರ ಕ್ಷೇತ್ರ, ಹಣವಂತರು, ವ್ಯಾಪಾರಿಗಳಿಂದ ತುಂಬಲಿದೆ. ರಾಜ್ಯದಲ್ಲಿ ಕಾಂಚಾಣ ಕುಣಿಯುತ್ತಿದೆ ಎಂಬದಕ್ಕೆ ಈ ನಿರ್ಣಯವೇ ಒಂದು ಉತ್ತಮ ಉದಾಹರಣೆ’ ಎಂದರು.

‘ಈ ತಿದ್ದುಪಡಿಯಿಂದ ಜಮೀನಿನ ದರ ಕೊಂಚ ಹೆಚ್ಚಾಗಬಹುದು. ಆದರೆ, ಕೃಷಿಯೇ ಆಧಾರವಾಗಿರುವ ಕುಟುಂಬಕ್ಕೆ ಇದು ಹೊರೆಯಾಗಲಿದೆ.  ಉಳುವವನ ಊರುಗೋಲಾಗಿದ್ದ ಭೂಮಿ ಇನ್ನು ಮುಂದೆ ಉಳ್ಳವನ ಪಾಲಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯ್ತಿಗಳಿಗೆ ಆಡಳಿತ ಮಂಡಳಿ ನೇಮಕಕ್ಕೆ ಕಾಂಗ್ರೆಸ್ ವಿರೋಧಿಸಿತ್ತು. ಇದೇ ವಿಚಾರ ಇಟ್ಟುಕೊಂಡು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಅದು ಜೂ.17 ರಂದು ನ್ಯಾಯಾಲಯದ ಮುಂದೆ ಬರಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪುರಾವೆ ಸಹಿತ ಪತ್ರ: ಕೋವಿಡ್-19 ನಿರ್ವಹಣೆಯಲ್ಲಿ ಅಗತ್ಯ ಉಪಕರಣ ಖರೀದಿಯಲ್ಲಿ ಆಗಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ತನಿಖೆ ಹಾಗೂ ಪರಿಶೀಲನೆಗೆ ಅವಕಾಶ ಕೋರಿ ದೂರುದಾರರ ಅರ್ಜಿ, ಅವರು ಒದಗಿಸಿರುವ ಪುರಾವೆ ಸಹಿತ ವಿಧಾನಸಭಾಧ್ಯಕ್ಷರಿಗೆ ಎರಡನೇ ಪತ್ರ ಬರೆಯಲಾಗಿದೆ’ ಎಂದು ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಆಗಿರುವ ಎಚ್.ಕೆ. ಪಾಟೀಲ ಹೇಳಿದರು.

‘ಕೊರೊನಾ ಸೋಂಕಿತರಿಗೆ ನೀಡುವ ಔಷಧಿಯನ್ನು ಸಹ ಕಪ್ಪು ಪಟ್ಟಿಗೆ ಸೇರಿರುವ ಕಂಪನಿ ಮೂಲಕ ಖರೀದಿಸಿದ್ದು, ಈ ಬಗ್ಗೆ ಪುರಾವೆಗಳುಇವೆ. ಈ ಕಾರಣಕ್ಕೆ ತನಿಖೆ ನಡೆಸಲು ಅನುಮತಿ ಕೋರಿದ್ದು, ಅವರಿಂದ ಸಮ್ಮತಿ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು