ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹನಿಟ್ರ್ಯಾಪ್’ಗೆ ಸಿಲುಕಿಸಿ ₹75.55 ಲಕ್ಷ ಕಿತ್ತರು!

ಪೊಲೀಸರ ಸೋಗಿನಲ್ಲಿ ನಿರಂತರ ಸುಲಿಗೆ
Last Updated 4 ಡಿಸೆಂಬರ್ 2018, 17:56 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾಟರಿಂಗ್‌ ವ್ಯವಹಾರ ಮಾಡುತ್ತಿದ್ದ ಕೃಷ್ಣಪ್ರಸಾದ್ ಎಂಬುವರನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿ, ₹73.55 ಲಕ್ಷ ಕಿತ್ತಿದ್ದ ತಾಯಿ–ಮಗಳು ಸೇರಿ ನಾಲ್ವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಬೇಬಿರಾಣಿ (39), ಆಕೆಯ ಮಗಳು ನಿವೇದಿತಾ ಅಲಿಯಾಸ್ ಪ್ರೀತಿ(23), ಸಂಬಂಧಿಕರಾದ ಮಣಿಕಂಠ (27) ಹಾಗೂ ಕಮ್ಮನಹಳ್ಳಿಯ ಎಂ.ಪ್ರಸಾದ್ ಬಂಧಿತರು. ಅವರಿಂದ ₹11.17 ಲಕ್ಷ ನಗದು, 60 ಗ್ರಾಂ ತೂಕದ ಚಿನ್ನಾಭರಣ, ಎರಡು ಕಾರು ಜಪ್ತಿ ಮಾಡಲಾಗಿದೆ.

‘ನಂದಿನಿ ಲೇಔಟ್ ನಿವಾಸಿಯಾದ ಕೃಷ್ಣಪ್ರಸಾದ್, ಸಭೆ–ಸಮಾರಂಭ–ಮದುವೆಗಳಿಗೆ ಊಟ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಅವರಿಗೂ ಬೇಬಿರಾಣಿಗೂ ಹತ್ತು ವರ್ಷಗಳಿಂದ ಪರಿಚಯವಿತ್ತು. ಅವರ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ ಬೇಬಿರಾಣಿ, ಮಗಳು ಹಾಗೂ ಆಕೆಯ ಪತಿ ಮಣಿಕಂಠ್ ಮತ್ತು ಸಂಬಂಧಿ ಪ್ರಸಾದ್ ಜೊತೆ ಸೇರಿ ಹನಿಟ್ರ್ಯಾಪ್‌ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಪೊಲೀಸರ ಸೋಗಿನಲ್ಲಿ ದಾಳಿ: ‘ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದು, ಸ್ವಲ್ಪ ಹಣ ಬೇಕಿತ್ತು. ನಮ್ಮ ಮನೆಗೆ ಬಂದು ಹಣ ಕೊಟ್ಟು ಹೋಗಿ’ ಎಂದು ಬೇಬಿರಾಣಿ ಹೇಳಿದ್ದರು. ಅದನ್ನು ನಿಜವೆಂದು ನಂಬಿದ್ದ ಕೃಷ್ಣಪ್ರಸಾದ್, ಹಣದ ಸಮೇತ ಮನೆಗೆ ಹೋಗಿದ್ದರು. ಇಬ್ಬರೂ ಮನೆಯೊಳಗೆ ಇರುವಾಗಲೇ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿದ್ದ ಮೂವರು ಆರೋಪಿಗಳು, ಕೃಷ್ಣಪ್ರಸಾದ್ ಬಳಿಯ ಹಣ ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ನಂದಿನಿ ಲೇಔಟ್ ಪೊಲೀಸರು ಹೇಳಿದರು.

‘ಕೆಲವು ತಿಂಗಳ ಬಳಿಕ ಬೇಬಿರಾಣಿ, ಪುನಃ ಕೃಷ್ಣಪ್ರಸಾದ್‌ ಅವರನ್ನು ಮನೆಗೆ ಕರೆಸಿಕೊಂಡಿದ್ದಳು. ಅವಾಗಲೂ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿದ್ದ ಆರೋಪಿಗಳು, ‘ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ’ ಎಂದು ಬೆದರಿಸಿ ದೂರುದಾರರಿಂದ ₹5 ಲಕ್ಷ ಕಿತ್ತುಕೊಂಡು ಹೋಗಿದ್ದರು’ ಎಂದರು.

ಬದುಕಿದ್ದವಳು ಸತ್ತಿದ್ದಾಳೆಂದು ಹಣ ವಸೂಲಿ: ಜುಲೈನಲ್ಲಿ ಕೃಷ್ಣಪ್ರಸಾದ್‌ಗೆ ಕರೆ ಮಾಡಿದ್ದ ಆರೋಪಿಗಳು, ‘ನಿನ್ನ ಬೇಬಿರಾಣಿ ಕೂಲೆ ಆಗಿದ್ದಾಳೆ. ನಿನ್ನ ಮೇಲೆಯೇ ಅನುಮಾನವಿರುವುದಾಗಿ ಮಗಳು ದೂರು ನೀಡಿದ್ದಾಳೆ. ಈಗಲೇ ನಿನ್ನನ್ನು ಬಂಧನ ಮಾಡಲಿದ್ದೇವೆ. ಪ್ರಕರಣ ದಾಖಲಿಸಬಾರದು ಎಂದರೆ ₹17 ಲಕ್ಷ ಕೊಡು’ ಎಂದು ಬೇಡಿಕೆ ಇಟ್ಟಿದ್ದರು. ನಿಜವೆಂದು ತಿಳಿದ ದೂರುದಾರರು, ಹಣ ಕೊಟ್ಟಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಸೆಪ್ಟೆಂಬರ್‌ನಲ್ಲಿ ಮತ್ತೇ ಕರೆ ಮಾಡಿದ್ದ ಆರೋಪಿಗಳು, ‘ನಿನ್ನ ಮೇಲಿನ ಕೊಲೆ ಪ್ರಕರಣದ ತನಿಖೆ ಮತ್ತೇ ಆರಂಭವಾಗಿದೆ. ನಿನ್ನನ್ನು ಬಂಧಿಸಬಾರದೆಂದರೆ ₹20 ಲಕ್ಷ ಕೊಡು’ ಎಂದು ಕೇಳಿ ಪಡೆದುಕೊಂಡಿದ್ದರು. ಅದಾಗಿ ಕೆಲವು ದಿನಗಳ ನಂತರ ಕೃಷ್ಣಪ್ರಸಾದ್‌ಗೆ ಕರೆ ಮಾಡಿದ್ದ ಬೇಬಿರಾಣಿ ಮಗಳು ನಿವೇದಿತಾ, ‘ನನ್ನ ತಾಯಿಯನ್ನು ನೀನೇ ಕೊಲೆ ಮಾಡಿರುವೆ. ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಕೊಡುತ್ತೇನೆ’ ಎಂದು ಹೇಳಿ ಹೆದರಿಸಿ ₹20 ಲಕ್ಷ ಪಡೆದಕೊಂಡಿದ್ದಳು’ ಎಂದರು.

‘ಇತ್ತೀಚೆಗೆ ಪುನಃ ಕರೆ ಮಾಡಿದ್ದ ಆರೋಪಿಗಳು, ‘ಬೇಬಿರಾಣಿ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣ ಮುಚ್ಚಿಹಾಕಲು ₹65 ಲಕ್ಷ ಬೇಕು. ನ್ಯಾಯಾಧೀಶರಿಗೆ ₹25 ಲಕ್ಷ ಹಾಗೂ ₹40 ಲಕ್ಷ ಪೊಲೀಸರಿಗೆ ಕೊಡಬೇಕು’ ಎಂದಿದ್ದರು. ಆರೋಪಿಗಳು ಕೇಳಿದಾಗಲೆಲ್ಲ ಹಣ ಕೊಟ್ಟು ಬೇಸತ್ತಿದ್ದ ಕೃಷ್ಣಪ್ರಸಾದ್,ನ. 22ರಂದು ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡರು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT