ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡಿನ ಔಷಧ ಕಾರ್ಖಾನೆಗೆ ಕೋವಿಡ್‌ ಬಂದಿದ್ದು ಹೇಗೆ? ತನಿಖಾ ವರದಿಯಲ್ಲೇನಿದೆ?

ಔಷಧ ಕಾರ್ಖಾನೆ ಕೋವಿಡ್‌ ಪ್ರಸರಣ ಪ್ರಕರಣ–ಐದು ಪುಟಗಳ ವರದಿ
Last Updated 15 ಮೇ 2020, 19:30 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹರಡಿದ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ‘ಸೋಂಕಿನ ಮೂಲ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ’ ಎಂಬ ಅಂಶ ಉಲ್ಲೇಖವಾಗಿರುವುದು ಗೊತ್ತಾಗಿದೆ.

ಐದು ಪುಟಗಳ ವರದಿ ನೀಡಿದ್ದು, ತನಿಖಾ ವಿಚಾರಗಳಿಗಿಂತ ಹೆಚ್ಚಾಗಿ ಮೈಸೂರು ಜಿಲ್ಲಾಡಳಿತದ ಪಾತ್ರ, ಜವಾಬ್ದಾರಿ, ಹೊಣೆಗಾರಿಕೆ ಬಗ್ಗೆಯೇ ಹೆಚ್ಚಿನ ಪ್ರಸ್ತಾಪಗಳಿವೆ ಎಂದು ಮೂಲಗಳು ತಿಳಿಸಿವೆ.

‘ಕಾರ್ಖಾನೆ ವಿಚಾರದಲ್ಲಿ ಹೆಚ್ಚು ತನಿಖೆ ಮಾಡಲು ಸಾಧ್ಯವಾಗಲಿಲ್ಲ. ತನಿಖೆ ಆರಂಭಿಸುವಷ್ಟರಲ್ಲಿ ಸೋಂಕು ಹರಡಿ ಹಲವು ದಿನಗಳು ಕಳೆದಿದ್ದವು. ಸ್ಥಳೀಯವಾಗಿ ಚೆನ್ನಾಗಿ ತಿಳಿದಿರುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ ತನಿಖೆ ಮಾಡಬಹುದಿತ್ತು. ಯಾವುದೇ ಅಧಿಕಾರ, ಸಹಕಾರ, ಪರಿಣತರ ನೆರವು ಇಲ್ಲದೇ ಏನು ಮಾಡುವುದು? ಜಿಲ್ಲಾಡಳಿತವೇ ತನಿಖೆ ಮಾಡಿದರೆ ಒಳ್ಳೆಯದು’ ಎಂಬ ಸಲಹೆಯನ್ನೂ ನಮೂದಿಸಿರುವುದು ತಿಳಿದುಬಂದಿದೆ.

ಕಾರ್ಖಾನೆಯಲ್ಲಿ ಕೋವಿಡ್‌ ದೃಢಪಟ್ಟ ಮೊದಲ ಉದ್ಯೋಗಿಗೆ (ಪಿ–52) ಸೋಂಕು ತಗುಲಿದ್ದು ಹೇಗೆ ಎಂಬುದರ ತನಿಖೆಗೆ ಅವರನ್ನು ಸರ್ಕಾರ ನೇಮಿಸಿತ್ತು. ಆದರೆ, ಇಲಾಖೆಗಳ ಅಸಹಕಾರದಿಂದಾಗಿ ಅಪೂರ್ಣ ವರದಿ ಸಲ್ಲಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹರ್ಷ ಗುಪ್ತ, ‘ಕೊರೊನಾ ಸೋಂಕು ಭಾರತಕ್ಕೆ ಹೇಗೆ ಬಂತು ಎಂಬುದೇ ಸರಿಯಾಗಿ ಗೊತ್ತಿಲ್ಲ. ಇನ್ನು ಕಾರ್ಖಾನೆ ನೌಕರನಿಗೆ ಹೇಗೆ ಬಂತು ಎಂಬುದರ ಪತ್ತೆಗೆ ದಿನಗಟ್ಟಲೇ ವ್ಯಯಿಸುವುದರಿಂದ ಏನು ಪ್ರಯೋಜನ?’ ಎಂದಿದ್ದಾರೆ.

‘ಕಾರ್ಖಾನೆಯ ನಿರ್ಲಕ್ಷ್ಯವೂ ಇದರಲ್ಲಿದೆ. ಕಾರ್ಖಾನೆ ಮುಚ್ಚಿದ್ದರಿಂದ ಮಾಹಿತಿ ಕಲೆಹಾಕಲು ಅದರ ವ್ಯವಸ್ಥಾಪಕರು ಲಭ್ಯರಾಗಲಿಲ್ಲ. ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದರು. ಈ ಸ್ಥಿತಿಯಲ್ಲಿ ಹೇಗೆ ತನಿಖೆ ಮಾಡುವುದು’ ಎಂಬುದು ಅವರ ಪ್ರಶ್ನೆ.

‘ಕಾರ್ಖಾನೆ ಬಗ್ಗೆ ನಾವು ಪದೇಪದೇ ಮಾತನಾಡುತ್ತೇವೆ. ಆದರೆ, ಬೆಂಗಳೂರಿಗೆ ಸೋಂಕು ಹೇಗೆ ಬಂತು? ವಿಮಾನದಲ್ಲಿ ಬಂದ ಸೋಂಕಿತರನ್ನು ಯಾವ ವೈದ್ಯರು ತಪಾಸಣೆ ಮಾಡಿದರು? ನಿಲ್ದಾಣದ ಅಧಿಕಾರಿಗಳಿಗೇನು ದಂಡ ವಿಧಿಸಿದರು..? ಹೀಗೆ ಪ್ರಶ್ನೆ ಮಾಡುತ್ತಾ ಹೋದರೆ ಕೊನೆಯೇ ಇರುವುದಿಲ್ಲ’ ಎನ್ನುತ್ತಾರೆ ಅವರು.

10 ಗ್ರಾಮ ದತ್ತು

‘ಸ್ಥಳೀಯರಿಗೆ 50 ಸಾವಿರ ರೇಷನ್‌ ಕಿಟ್‌ ವಿತರಿಸಲು, 10 ಗ್ರಾಮ ದತ್ತು ಪಡೆಯಲು ಕಾರ್ಖಾನೆಯ ಆಡಳಿತದವರು ಒಪ್ಪಿದ್ದಾರೆ. ಮುಂದೆ ಅನಾಹುತವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ರಾಜ್ಯದ ಸಚಿವರೊಬ್ಬರ ಸಮ್ಮುಖದಲ್ಲೇ ಈ ಒಪ್ಪಂದ ನಡೆದಿದೆ. ಕಾರ್ಖಾನೆಯ ಪ್ರಮುಖ ವ್ಯಕ್ತಿ ಜೊತೆ ಚರ್ಚೆ ನಡೆದಿದೆ’ ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಬಿ.ಹರ್ಷವರ್ಧನ್‌ ತಿಳಿಸಿದ್ದಾರೆ.

‘ನನ್ನ ಮೇಲೆ ಒತ್ತಡ ಬಂದರೂ ತನಿಖೆಗೆ ಆಗ್ರಹಿಸಿದ್ದೆ. ಸೋಂಕಿನ ಮೂಲ ಪತ್ತೆ ಯಾರಿಗೂ ಸಾಧ್ಯವಾಗಲಿಲ್ಲ. ಇದು ಮುಗಿದ ಅಧ್ಯಾಯ. ಆದರೆ, ಕ್ಷೇತ್ರ ಜನರಿಗೆ ನಾನು ಏನೆಂದು ಉತ್ತರಿಸುವುದು’ ಎಂದು ಪ್ರಶ್ನಿಸಿದ್ದಾರೆ.

***

ಸೋಂಕು ಹೇಗೆ ಬಂತು, ಯಾರಿಂದ ಬಂತು ಎಂಬುದು ಅನವಶ್ಯಕ. ಆರಂಭದಲ್ಲೇ ಪತ್ತೆ ಹಚ್ಚಿದ್ದರೆ ಹೆಚ್ಚಿನ ನೌಕರರಿಗೆ ಹರಡುವುದನ್ನು ತಡೆಯಬಹುದಿತ್ತು

- ಹರ್ಷ ಗುಪ್ತ, ಹಿರಿಯ ಐಎಎಸ್‌ ಅಧಿಕಾರಿ

***

ನಾಲ್ಕೈದು ಕಡೆಗಳಿಂದ ಸೋಂಕು ಬಂದಿರಬಹುದು. ನನ್ನಿಂದ, ಎಸ್‌ಪಿ, ಆರೋಗ್ಯ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ ಹರ್ಷ ಗುಪ್ತ ವರದಿ ಸಲ್ಲಿಸಿದ್ದಾರೆ

- ಅಭಿರಾಂ ಜಿ.ಶಂಕರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT