ಗುರುವಾರ , ನವೆಂಬರ್ 14, 2019
19 °C
ಎಚ್ಆರ್‌ಪಿಯಲ್ಲಿ 1654 ಎಕರೆ ಅಕ್ರಮ ಮಂಜೂರಾತಿ

ಕ್ರಿಮಿನಲ್ ಕೇಸ್ ದಾಖಲಿಸಿ, ಜೈಲಿಗೆ ಹಾಕಿ

Published:
Updated:
Prajavani

ಹಾಸನ: ‘ಹೇಮಾವತಿ ಜಲಾಶಯ ಯೋಜನೆಯ (ಎಚ್‍ಆರ್‌ಪಿ) ಮುಳುಗಡೆ ಸಂತ್ರಸ್ತರಿಗೆ ಮೀಸಲಿರಿಸಿದ್ದ ಭೂ ಮಂಜೂರಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ, ಜೈಲಿಗೆ ಕಳುಹಿಸುವಂತೆ’ ಶಾಸಕ ಎಚ್.ಡಿ.ರೇವಣ್ಣ ಅವರು ಸರ್ಕಾರವನ್ನು ಒತ್ತಾಯಿಸಿದರು.

‘ಜಮೀನು ಕಳೆದುಕೊಂಡ ಸಂತ್ರಸ್ತರು ಹಾಜರು ಪಡಿಸಿರುವ ದಾಖಲೆಗಳಲ್ಲಿ ಭಾರೀ ವ್ಯತ್ಯಾಸ ಇರುವುದನ್ನು ಎಸಿ ನಾಗರಾಜ್‌ ನೇತೃತ್ವದ ತನಿಖಾ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ (ಎಸ್‌ಎಲ್‌ಓ) ಯಲ್ಲಿ ಮಂಜೂರಾದ ಕಡತಗಳು 323 ಆಗಿದ್ದರೆ, ತಾಲ್ಲೂಕು ಕಚೇರಿಯಲ್ಲಿ ಸ್ವೀಕೃತ ಕಡತ ಸಂಖ್ಯೆ 611, ವ್ಯತ್ಯಾಸ 288 ಆಗಿದೆ. ಅದೇ ರೀತಿ ಬೇಲೂರು ಎಸ್ ಎಲ್ ಓ ಕಚೇರಿಯಲ್ಲಿ ಮಂಜೂರಾದ ಕಡತ 149,  ಸೀಕೃತ ಕಡತ 241, ವ್ಯತ್ಯಾಸ 92, ಆಲೂರಲ್ಲಿ ಮಂಜೂರಾದ ಕಡತ 38, ಸ್ವೀಕೃತ ಕಡತ 36, ವ್ಯತ್ಯಾಸ 02, ಹಾಸನದಲ್ಲಿ ಮಂಜೂರಾದ ಕಡತ 37, ಸ್ವೀಕೃತ ಕಡತ 49, ವ್ಯತ್ಯಾಸ 12, ಅರಕಲಗೂಡಿನಲ್ಲಿ ಮಂಜೂರಾದ ಕಡತ 18, ಸ್ವೀಕೃತ ಕಡತ 38, ವ್ಯತ್ಯಾಸ 20, ಹೊಳೆನರಸೀಪುರ ಮತ್ತು ಸೋಮವಾರಪೇಟೆಯಲ್ಲಿ ಮಂಜೂರಾದ ಮತ್ತು ಸ್ವೀಕೃತ ಕಡತಗಳು ತಲಾ 02’ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ಮಂಜೂರಾದ ಕಡತಗಳ ಸಂಖ್ಯೆ 569. ಆದರೆ, ತಾಲ್ಲೂಕು ಕಚೇರಿಯಲ್ಲಿ ಸ್ವೀಕೃತವಾದ ಕಡತಗಳ ಸಂಖ್ಯೆ 979, 414 ಕಡತಗಳ ವ್ಯತ್ಯಾಸ ಕಂಡು ಬಂದಿದೆ’ ಎಂದರು.

‘2015ರ ಜ.1ರಿಂದ 2018ರ ನ. 30 ರ ವರೆಗೆ ಮಂಜೂರಾಗಿರುವ 569 ಕಡತಗಳನ್ನು ಪರಿಶೀಲಿಸಿದಾಗ ಬಹುತೇಕ ದಾಖಲೆಗಳು ಸಮರ್ಪಕವಾಗಿಲ್ಲ. ಜೊತೆಗೆ ಕೆಲವು ದಾಖಲೆಗಳನ್ನು ಲಗತ್ತಿಸಿಲ್ಲ. ಹಿಂದಿನ ಭೂ ಸ್ವಾಧೀನಾಧಿಕಾರಿಗಳಾದ ವಿಜಯಾ-32, ಬಿ.ಎ.ಜಗದೀಶ್-429 ಮತ್ತು ರವಿಚಂದ್ರ ನಾಯಕ್ ಎಂಬುವರು 108 ಅಧಿಕೃತ ಜ್ಞಾಪನಾಗಳನ್ನು ಅವರ ಸಹಿಗಳಲ್ಲಿ ಹೊರಡಿಸಿರುವುದನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಹೇಳಿದರು.

‘ಭೂಮಿ ಮಂಜೂರಾದ 979 ಪ್ರಕರಣಗಳ ಪೈಕಿ 414 ಪ್ರಕರಣಗಳಲ್ಲಿ ಅಧಿಕಾರಿಗಳ ಸಹಿ ನಕಲು ಮಾಡಿ 1654 ಎಕರೆ ಭೂಮಿ ಮಂಜೂರು ಆಗಿದೆ. ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಭೂಮಿ ಮಂಜೂರಾತಿ ರದ್ದುಪಡಿಸಬೇಕು. ಅಗತ್ಯವಿದ್ದರೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಬಹುದೆಂದು ಸಮಿತಿ ಶಿಫಾರಸ್ಸು ಮಾಡಿದೆ’ ಎಂದು ರೇವಣ್ಣ ತಿಳಿಸಿದರು.

‘ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಲು ಸಹಕರಿಸಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು. ರವಿಚಂದ್ರ ನಾಯಕ್ ಅವಧಿಯಲ್ಲಿ 300 ಪ್ರಕರಣಗಳಲ್ಲಿ ಪೂರ್ವಾನುಮತಿ ಪಡೆಯದೆ ಅಧಿಕೃತ ಜ್ಞಾಪನೆ ಹೊರಡಿಸಿದ್ದಾರೆ. ಬಿ.ಎ.ಗದೀಶ್ ಅವಧಿಯಲ್ಲಿ ನಕಲಿ ಸಹಿ ಮಾಡಿ ಭೂ ಮಂಜೂರು ಮಾಡಿದ 50 ಪ್ರಕರಣಗಳು ಪತ್ತೆಯಾಗಿವೆ ಎಂದು ತನಿಖಾ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ’ ಎಂದರು.

‘ಹಾಸನಾಂಬ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಸಂಸದರು ಮತ್ತು ಶಾಸಕರ ಹೆಸರನ್ನು ಮುದ್ರಿಸಬೇಕಿತ್ತು. ಈ ಬಗ್ಗೆ ಯಾರನ್ನು ಪ್ರಶ್ನಿಸಲು ಹೋಗುವುದಿಲ್ಲ. ಜಿಲ್ಲಾಡಳಿತ ನೀಡಿದ್ದ ಪಾಸ್‌ಗಳನ್ನು ಸಂಸದ ಪ್ರಜ್ವಲ್‌ ಹಾಗೂ ನಾನು ಹಿಂದಿರುಗಿಸಿದ್ದೇವೆ’ ಎಂದರು.

ಶಾಸಕ ಸಾ.ರಾ ಮಹೇಶ್‌ ಅವರು ರಾಜೀನಾಮೆ ನೀಡಿದ ತಕ್ಷಣ ಅಂಗೀಕರವಾಗಲ್ಲ. ವರಿಷ್ಠರು ಅವರ ಜತೆ ಮಾತನಾಡುವರು ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಬಿಜೆಪಿ ಸರ್ಕಾರದ್ದು ಎಂದು ಜನರಿಗೆ ತಪ್ಪು ಮಾಹಿತಿ ನೀಡಿ ವಿವಿಧ ಕಾಮಗಾರಿಗಳಿಗೆ ಹಾಸನ ಕ್ಷೇತ್ರದ ಶಾಸಕರು ಭೂಮಿ ಪೂಜೆ ಮಾಡುತ್ತಿದ್ದಾರೆ. ಸಮಯ ಬಂದಾಗ ಯಾವ ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ನೀಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಹಿರಿಯ ಮುಖಂಡ ಬಿ.ಆರ್.ಸತ್ಯನಾರಾಯಣ ಇದ್ದರು.

ಪ್ರತಿಕ್ರಿಯಿಸಿ (+)