ಮಕ್ಕಳ ಕಳ್ಳಸಾಗಣೆ ಆರೋಪ: ಪೊಲೀಸರಿಂದ ವಿವರ ಕೇಳಿದ ಹೈಕೋರ್ಟ್‌

7
ಸೆ.18ಕ್ಕೆ ವಿಚಾರಣೆ

ಮಕ್ಕಳ ಕಳ್ಳಸಾಗಣೆ ಆರೋಪ: ಪೊಲೀಸರಿಂದ ವಿವರ ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ‘ಎಂಟು ವರ್ಷದ ಇಬ್ಬರು ಮಕ್ಕಳನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಟ್ರಾವೆಲ್‌ ಏಜೆನ್ಸಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರಿತು ವಿವರಣೆ ನೀಡಿ’ ಎಂದು ಪುಲಕೇಶಿ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ನಗರದ ಅನಿತಾ ಎಸ್‌ ಹಾಗೂ ಆಲ್ಫ್ರೆಡ್‌ ವಿಲಿಯಮ್‌ ರಾಜೇಶ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಏನಿದು ಪ್ರಕರಣ?: ‘ಅರ್ಜಿದಾರರು 2013ರಲ್ಲಿ ಒಬ್ಬ ಬಾಲಕ ಮತ್ತು ಬಾಲಕಿಯನ್ನು ಅಮೆರಿಕಕ್ಕೆ ಕರೆದೊಯ್ದಿದ್ದರು ಮತ್ತು ಅಲ್ಲಿಯೇ ಇದ್ದ ಅವರ ಪೋಷಕರ ವಶಕ್ಕೆ ನೀಡಿ ಬೆಂಗಳೂರಿಗೆ ವಾಪಸು ಬಂದಿದ್ದರು’ ಎಂಬ ಪ್ರಕರಣದಲ್ಲಿ ಅಮೆರಿಕದ ಕಾನ್ಸುಲೇಟ್ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೇ ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ ಎಂದು ಶಂಕಿಸಿತ್ತು.

ಈ ಕುರಿತಂತೆ ಚೆನ್ನೈನಲ್ಲಿರುವ ತನ್ನ ಕಾನ್ಸುಲೇಟ್‌ ಜನರಲ್‌ ಅವರಿಗೆ ಪತ್ರ ಬರೆದಿದ್ದ ಅಮೆರಿಕ ಅನಿತಾ ಮತ್ತು ಆಲ್ಫ್ರೆಡ್‌ ಮಕ್ಕಳನ್ನು ಯಾರ ವಶಕ್ಕೆ ನೀಡಿ ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ಪತ್ರ ಬರೆದಿದ್ದರು.

ಅನಿತಾ ಸೊನ್ಯಾಸಿ ಹಾಗೂ ಆಲ್‌ಫ್ರಡ್ ವಿಲಿಯಂ ರಾಜೇಶ್ ಮಕ್ಕಳು ಅಮೇರಿಕಾಗೆ ತಂದು ಬಿಟ್ಟುಹೋಗಿದ್ದಾರೆ. ಅವರನ್ನು ಯಾರ ವಶಕ್ಕೆ ನೀಡಲಾಗಿದೆ? ಎಂಬುದರ ಕುರಿತು ಮಾಹಿತಿ ಇಲ್ಲವಾಗಿದೆ ಎಂದು ಪತ್ರ ಬರೆದಿದ್ದರು.

ಈ ಕುರಿತು ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಜನರಲ್, ಪುಲಕೇಶಿ ನಗರ ಪೊಲೀಸ್‌ ಠಾಣೆಗೆ 2013ರ ಮೇ 22ರಂದು ಪತ್ರ ಬರೆದಿದ್ದರು. ಇದರನ್ವಯ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

‘ಕಾನ್ಸುಲೇಟ್‌ ಜನರಲ್‌ ಪತ್ರ ತಲುಪಿದ ದಿನವೇ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದೇನೊ ಸರಿ. ಆದರೆ,  ಮೂರು ದಿನಗಳ ನಂತರ ಅನಿತಾ ಮತ್ತು ಆಲ್ಫ್ರೆಡ್‌ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.  ಯಾವ ಆಧಾರದ ಮೇಲೆ ಅರ್ಜಿದಾರರನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ’ ಎಂಬ ಬಗ್ಗೆ ವಿವರಣೆ ನೀಡಿ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !