ಶುಕ್ರವಾರ, ಏಪ್ರಿಲ್ 16, 2021
20 °C
ಎಸ್‌ಎಲ್‌ಸಿಸಿ ಸಭೆಗಳಲ್ಲೂ ಐಎಂಎ ಪ್ರತಿಧ್ವನಿ

ಸಿಎಸ್‌ ಆದೇಶಕ್ಕೂ ಸಿಗದ ಬೆಲೆ!

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ವ್ಯವಹಾರ ನಡೆಸುತ್ತಿರುವ ಐಎಂಎ ಸಮೂಹ ಕಂಪನಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿದ್ದ ಸ್ಪಷ್ಟ ಆದೇಶಗಳಿಗೆ ಸಂಬಂಧಪಟ್ಟ ಇಲಾಖೆಗಳು ಬೆಲೆ ಕೊಡದೆ ಜವಾಬ್ದಾರಿಯಿಂದ ಜಾರಿಕೊಂಡಿವೆ.  

ಷೇರುದಾರರಿಂದ ಐಎಂಎ ಅಕ್ರಮವಾಗಿ ಠೇವಣಿ ಸಂಗ್ರಹಿಸುತ್ತಿರುವ ಮಾಹಿತಿ 2016ರಲ್ಲೇ ಸರ್ಕಾರದ ಗಮನಕ್ಕೆ ಬಂದಿತ್ತು. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ‘ರಾಜ್ಯ ಮಟ್ಟದ ಸಮನ್ವಯ ಸಮಿತಿ’ಯ (ಎಸ್‌ಎಲ್‌ಸಿಸಿ) 37ನೇ ಸಭೆಯಲ್ಲಿ ಮೊದಲ ಸಲ ಈ ವಿಷಯ ಚರ್ಚೆಯಾಗಿತ್ತು. ‘ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ತ್ವರಿತ ತನಿಖೆ ನಡೆಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದರು. 

ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯದ ಡಿಜಿ ಮತ್ತು ಐಜಿ, ಬೆಂಗಳೂರು ಪೊಲೀಸ್‌ ಕಮಿಷನರ್‌, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ), ಹಣಕಾಸು, ಕಂದಾಯ, ಕಾನೂನು, ಸಹಕಾರಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಐಜಿಪಿ, ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌, ಸೆಬಿ, ರಿಸರ್ವ್‌ ಬ್ಯಾಂಕ್‌, ಆದಾಯ ತೆರಿಗೆ ಮತ್ತಿತರ ಇಲಾಖೆಗಳ ಅಧಿಕಾರಿಗಳು (ಎಲ್ಲರೂ ಎಸ್‌ಎಲ್‌ಸಿಸಿ ಸದಸ್ಯರು) ಈ ಸಭೆಯಲ್ಲಿದ್ದರು. 

ಆನಂತರ ಸೇರಿದ್ದ ಎಸ್‌ಎಲ್‌ಸಿಸಿ ಮತ್ತು ಅದರ ಉಪ ಸಮಿತಿ ಸಭೆಗಳಲ್ಲೂ ಈ ಪ್ರಕರಣ ಚರ್ಚೆಯಾಗಿತ್ತು. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಜನರಲ್‌ ಮ್ಯಾನೇಜರ್‌ ಕೆ.ಎಸ್‌.ಜ್ಯೋತ್ಸ್ನಾ ಐಎಂಎ ಅಕ್ರಮ ವ್ಯವಹಾರದ ಕುರಿತು ಪದೇ ಪದೇ ಎಚ್ಚರಿಸಿದ್ದರು. 

ಒಂದು ಹಂತದಲ್ಲಿ, ‘ಕಂಪನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ’ ಎಂದು ಸಿಐಡಿ ಹೇಳಿತ್ತು. ಬಳಿಕ ಇದಕ್ಕೆ ತದ್ವಿರುದ್ಧವಾದ ವರದಿ ಕೊಟ್ಟು ಕೈತೊಳೆದುಕೊಂಡಿತು. ಮೂರು ವರ್ಷದ ಹಿಂದೆಯೇ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರೂ ಐಎಂಎಗೆ ‘ಕ್ಲೀನ್‌ ಚಿಟ್‌’ ಕೊಟ್ಟರು. ಸಿಸಿಬಿಯೂ ಇದೇ ನಿಲುವು ವ್ಯಕ್ತಪಡಿಸಿತ್ತು. ಡಿಜಿ ಮತ್ತು ಐಜಿ ಜನವರಿಯಲ್ಲಿ ಈ ವರದಿಗಳನ್ನು ಸಮರ್ಥಿಸಿಕೊಂಡಿದ್ದರು.

‘ಐಎಂಎ ವಿರುದ್ಧ ದೂರು ಕೊಟ್ಟಿರುವ ಜ್ಯೋತ್ಸ್ನಾ, ಯಾರ್‍ಯಾರಿಗೆ ವಂಚನೆಯಾಗಿದೆ ಎಂಬ ಮಾಹಿತಿ ನೀಡಿಲ್ಲ’ ಎಂದೂ ಆರೋಪಿಸಲಾಗಿತ್ತು.’ ಪೊಲೀಸರ ವರದಿ ಆರ್‌ಬಿಐನ ಮಾರುಕಟ್ಟೆ ಬೇಹುಗಾರಿಕೆ ವಿಭಾಗದ ವರದಿಗೆ ವ್ಯತಿರಿಕ್ತವಾಗಿದೆ’ ಎಂಬ ಪ್ರತಿ ಆರೋಪವನ್ನು ಆರ್‌ಬಿಐ ಮಾಡಿತ್ತು.

‘ಈ ವಿಷಯದಲ್ಲಿ ಕಂದಾಯ, ಸಹಕಾರ ಇಲಾಖೆ, ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ ಹಾಗೂ ಸೆಬಿ ವಿಫಲವಾಗಿವೆ’ ಎಂಬ ಚರ್ಚೆಗಳು ಎಸ್‌ಎಲ್‌ಸಿಸಿ ಸಭೆಗಳಲ್ಲಿ ನಡೆದಿತ್ತು.

ಎಸ್‌ಐಟಿ ಮೇಲೆ ನಿರೀಕ್ಷೆ?

ಐಎಂಎ ವಂಚನೆ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ, ಆರೋಪಿ ಅಧಿಕಾರಿಗಳನ್ನು ಬಂಧಿಸಲಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈಗಾಗಲೇ ಪ್ರಕರಣದ ಸಂಬಂಧ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ವಿಜಯಶಂಕರ್‌ ಹಾಗೂ ಬೆಂಗಳೂರು ಉತ್ತರದ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಯಾರೇ ಭಾಗಿ ಆಗಿದ್ದರೂ ಎಸ್‌ಐಟಿ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು