ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಪರಮೇಶ್‌ ಲಾಕರ್‌ನಲ್ಲಿ ₹ 6 ಕೋಟಿ ಪತ್ತೆ

Last Updated 5 ಏಪ್ರಿಲ್ 2019, 17:28 IST
ಅಕ್ಷರ ಗಾತ್ರ

ಬೆಂಗಳೂರು/ಶಿವಮೊಗ್ಗ: ಕಳೆದ ವಾರ ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿಗೆ ಒಳಗಾಗಿದ್ದ ಶಿವಮೊಗ್ಗದ ಉದ್ಯಮಿ ಡಿ.ಟಿ‍‍ ಪರಮೇಶ್‌ ಹೊಂದಿರುವ ಎರಡು ಬ್ಯಾಂಕ್‌ ಲಾಕರ್‌ಗಳಲ್ಲಿ ₹ 6 ಕೋಟಿ ನಗದು ಮತ್ತು ಮಹತ್ವದ ದಾಖಲೆಗಳು ಸಿಕ್ಕಿವೆ.

ಪರಮೇಶ್‌ ಶಿವಮೊಗ್ಗದಲ್ಲಿ ಕಾರ್‌ ಷೋ ರೂಂ ತೆರೆದಿದ್ದು,ಕೆನರಾ ಹಾಗೂ ಕರ್ನಾಟಕ ಬ್ಯಾಂಕ್‌ಗಳಲ್ಲಿ ಲಾಕರ್‌ಗಳನ್ನು ಹೊಂದಿದ್ದಾರೆ. ಮಾರ್ಚ್‌ 28ರಂದು ನಡೆದ ಐ.ಟಿ ದಾಳಿ ವೇಳೆ ಈ ಲಾಕರ್‌ಗಳು ಪತ್ತೆಯಾಗಿದ್ದವು. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಗುತ್ತಿಗೆದಾರರಿಂದ₹ 6 ಕೋಟಿ ಸಂಗ್ರಹಿಸಿ, ಬಚ್ಚಿಡಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಮೂಲಗಳು ತಿಳಿಸಿವೆ.

ಲಾಕರ್‌ಗಳನ್ನು ತೆರೆಯಲು ಯತ್ನಿಸಿದಾಗ, ‘ಕೀಗಳು ಕಳೆದಿವೆ’ ಎಂದು ಪರಮೇಶ್‌ ಹೇಳಿದ್ದರು. ಬಳಿಕ ಅವುಗಳನ್ನು ತೆರೆಯದಂತೆ ಐ.ಟಿ ನಿರ್ಬಂಧಿಸಿತ್ತು. ಗುರುವಾರ ಲಾಕರ್‌ಗಳನ್ನು ಅಧಿಕಾರಿಗಳು ಒಡೆಯುವ ಸಿದ್ಧತೆಯಲ್ಲಿದ್ದಾಗ ಬೀಗದ ಕೀಗಳನ್ನು ಪರಮೇಶ್‌ ತಂದೊಪ್ಪಿಸಿದರು. ಅವುಗಳನ್ನು ತೆರೆದಾಗ ₹ 6 ಕೋಟಿ ಪತ್ತೆಯಾಯಿತು.

ಇದರೊಂದಿಗೆ ಜೆಡಿಎಸ್‌ ಮುಖಂಡರು, ಅವರ ಆಪ್ತ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಏಕಕಾಲಕ್ಕೆ ನಡೆದ ದಾಳಿ ₹ 10 ಕೋಟಿಗೂ ಅಧಿಕ ಹಣ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಂತಾಗಿದೆ ಎಂದೂ ಮೂಲಗಳು ಖಚಿತಪಡಿಸಿವೆ.

ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರ ಸಂಬಂಧಿಗಳು, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಆಪ್ತ ಗುತ್ತಿಗೆದಾರರು, ಅಧಿಕಾರಿಗಳು ಸೇರಿದಂತೆ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳಲ್ಲಿ ಏಕಕಾಲಕ್ಕೆ ಐ.ಟಿ ದಾಳಿ ನಡೆದಿತ್ತು. ಈದಾಳಿ ವಿರೋಧಿಸಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಿತ್ರ ಪಕ್ಷಗಳು ‍ಪ್ರತಿಭಟನೆ ನಡೆಸಿದ್ದವು.

₹ 57 ಲಕ್ಷ ವಶ: ಈ ಮಧ್ಯೆ, ಹೊಸಕೋಟೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಶ್ರೀಧರ್‌ ಮನೆಯ ಮೇಲೆ ಬುಧವಾರ ನಡೆದ ದಾಳಿ ವೇಳೆ ₹ 31 ಲಕ್ಷ ಹಾಗೂ ನಾಗೇಶ್‌ ರೆಡ್ಡಿ ಅವರ ಮನೆಯಿಂದ ₹ 26 ಲಕ್ಷವನ್ನುಐ.ಟಿ. ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲಂಚ ಪಡೆದ ಪಿಡಿಒ ಬಂಧನ
ದೊಡ್ಡಬಳ್ಳಾಪುರ ತಾಲೂಕು ಕೊಡಿಗೆಹಳ್ಳಿ ಗ್ರಾಮ ಪಂಚಾಯ್ತಿಯ ಮಾದಗೊಂಡನಹಳ್ಳಿ ಗ್ರಾಮಕ್ಕೆ ನೀರಗಾವಲು ಕಾಮಗಾರಿಯ ಎನ್‌ಎಂಆರ್‌ ಮೊತ್ತ ಮಂಜೂರು ಮಾಡಲು ಗುತ್ತಿಗೆದಾರರೊಬ್ಬರಿಂದ ₹ 33 ಸಾವಿರ ಲಂಚ ಪಡೆಯುತ್ತಿದ್ದ ಪಿಡಿಒ ಕೃಷ್ಣಯ್ಯ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಆರೋಪಿ ₹ 44 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚೌಕಾಸಿಯ ಬಳಿಕ ₹ 33 ಸಾವಿರಕ್ಕೆ ಒಪ್ಪಿದ್ದರು. ಶುಕ್ರವಾರ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ.

ಐ.ಟಿ ವಿರುದ್ಧ ವಾಗ್ದಾಳಿ ನಡೆಸಿದ ಎಚ್‌ಡಿಕೆ
ಪರಮೇಶ್‌ ಅವರ ಲಾಕರ್‌ಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಂತೆ, ಕರ್ನಾಟಕ ಮತ್ತು ಗೋವಾ ವೃತ್ತದ ಪ್ರಧಾನ ಮುಖ್ಯ ಕಮಿಷನರ್‌ ಬಾಲಕೃಷ್ಣ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದರು.

‘ಪರಮೇಶ್‌ದೇವೇಗೌಡರ ದೂರದ ಸಂಬಂಧಿ. ಹಲವಾರು ವರ್ಷಗಳಿಂದ ಮಾರುತಿ ಷೋ ರೂಂ ಇಟ್ಟುಕೊಂಡಿದ್ದಾರೆ. ಐ.ಟಿ ಅವರು ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲೇ ಏಕೆ ದಾಳಿ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

‘ನನ್ನ ಹಾಗೂ ಕುಟುಂಬದ ಆಸ್ತಿಗಾಗಿ ಎಲ್ಲೆಲ್ಲಿ ಶೋಧನೆ ಮಾಡಿದ್ದಾರೆ ಎಂಬ ಮಾಹಿತಿ ನನಗಿಲ್ವೆ. ಎರಡು ಸಲ ನಾನು ಮುಖ್ಯಮಂತ್ರಿ ಆದರೂ ಏನೂ ಸಿಗುತ್ತಿಲ್ಲ ಎಂದು ಬಾಲಕೃಷ್ಣ ಒದ್ದಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಐ.ಟಿ ಅಧಿಕಾರಿಗಳ ಅಮಾನತು
ಇಲ್ಲಿನ ‘ವಿಂಡ್ಸರ್‌ ಎಡಿಫೈಸ್‌ ಪ್ರವೇಟ್‌ ಲಿ’. ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರಾವ್‌ ಅವರಿಂದ ಲಂಚ ಸ್ವೀಕರಿಸುವಾಗ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಆದಾಯ ತೆರಿಗೆ ಇಲಾಖೆಯ ಎಚ್‌.ಆರ್‌. ನಾಗೇಶ್‌ ಮತ್ತು ನರೇಂದರ್‌ ಸಿಂಗ್‌ ಅಮಾನತುಗೊಂಡಿದ್ದಾರೆ.

ಪ್ರಕರಣವೊಂದರ ಸಂಬಂಧ ರಾವ್‌ ಅವರಿಂದ ₹ 14 ಲಕ್ಷ ಲಂಚ ಸ್ವೀಕರಿಸುವಾಗ ನಾಗೇಶ್‌ ಸಿಕ್ಕಿಬಿದ್ದಿದ್ದರು. ಆನಂತರ ನರೇಂದರ್‌ ಸಿಂಗ್‌ ಅವರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಅಧಿಕಾರಿಗಳನ್ನು ಇದೇ 8ರಂದು ಸೋಮವಾರದವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ನಿಯಮಗಳ ಪ್ರಕಾರ 48 ಗಂಟೆ ಸತತವಾಗಿ ಪೊಲೀಸ್‌ ಅಥವಾ ನ್ಯಾಯಾಂಗ ಬಂಧನದಲ್ಲಿದ್ದರೆ ಸೇವೆಯಿಂದ ಸಹಜವಾಗಿಯೇ ಸಸ್ಪೆಂಡ್‌ ಆಗಲಿದ್ದಾರೆ. ಬಂಧಿತ ಅಧಿಕಾರಿಗಳು ಸಲ್ಲಿಸಿರುವ ಜಾಮೀನು ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ. ಅಂದು ಸಿಬಿಐ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ.

**

ಇದೊಂದು ರಾಜಕೀಯ ಪ್ರೇರಿತ ದಾಳಿ. ಐ.ಟಿ ಅಧಿಕಾರಿಗಳು ಸದಾನಂದಗೌಡರ ಮೇಲೆ ದಾಳಿ ಮಾಡ್ಲಿ, ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಮಾಡ್ಲಿ. ಅವರ ಮನೇಲಿ ದುಡ್ಡಿಲ್ವಾ?
–ಸಿದ್ದರಾಮಯ್ಯ, ಸಿಎಲ್‌ಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT