ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಎಸ್‌’ ಕನಸು ಪ್ರೊಬೇಷನರಿಯಲ್ಲೇ ಅಂತ್ಯ!

ಕೆಪಿಎಸ್‌ಸಿ: ಜಾರಿಯಾಗದ 1998ರ ಪರಿಷ್ಕೃತ ಪಟ್ಟಿ * ಹಿಂಬಡ್ತಿಗೊಳ್ಳಬೇಕಿದ್ದ ಅಧಿಕಾರಿ ‘ಐಎಎಸ್’ನಲ್ಲಿ ನಿವೃತ್ತಿ!
Last Updated 25 ಮೇ 2020, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಅರ್ಹತೆ’ ಇಲ್ಲದಿದ್ದರೂ ಐಎಎಸ್‌ಗೆ ಪದೋನ್ನತಿ ಹೊಂದಿದ ಅಧಿಕಾರಿಯೊಬ್ಬರು ಏ. 30 ನಿವೃತ್ತಿ ಹೊಂದಿದರೆ, ಹೈಕೋರ್ಟ್‌– ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ ಐಎಎಸ್‌ ಪಡೆಯಬೇಕಿದ್ದ ಅಧಿಕಾರಿಯೊಬ್ಬರು ಪ್ರೊಬೇಷನರಿ ಅವಧಿಯಲ್ಲೇ ಇದೇ 31ರಂದು ನಿವೃತ್ತಿಯಾಗಲಿದ್ದಾರೆ!

ಕೋರ್ಟ್‌ ತೀರ್ಪಿನಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2019ರ ಆ. 22ರಂದು ಪರಿಷ್ಕರಿಸಿದ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 323 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ರಾಜ್ಯ ಸರ್ಕಾರ ಯಥಾವತ್‌ ಜಾರಿಗೊಳಿಸದ ಕಾರಣದಿಂದ ಈ ಸ್ಥಿತಿ ಉಂಟಾಗಿದೆ.

ಪರಿಷ್ಕೃತ ಪಟ್ಟಿ ಯಥಾವತ್‌ ಜಾರಿಗೊಂಡರೆ, ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದ 11 ಅಧಿಕಾರಿಗಳು ಹಿಂಬಡ್ತಿಗೊಳ್ಳುತ್ತಾರೆ. ಅಲ್ಲದೆ, ಈ ಅಧಿಕಾರಿಗಳು ಕೆಎಎಸ್‌ನಿಂದ ಬೇರೆ ಹುದ್ದೆಗೆ ಸ್ಥಾನಪಲ್ಲಟಗೊಳ್ಳುತ್ತಾರೆ. ಈ ಪೈಕಿ, ನಿವೃತ್ತಿ ಹೊಂದಿದ ಐಎಎಸ್‌ ಅಧಿಕಾರಿ ವೃಷಭೇಂದ್ರ ಮೂರ್ತಿ ಕೂಡಾ ಒಬ್ಬರು.

ಆದರೆ, ಪರಿಷ್ಕೃತ ಪಟ್ಟಿ ಅನ್ವಯ ರಾಜ್ಯ ಲೆಕ್ಕಪತ್ರ ಇಲಾಖೆಯ ಹಿರಿಯ ಶ್ರೇಣಿಯ ಜಂಟಿ ಲೆಕ್ಕಪತ್ರ ನಿಯಂತ್ರಕರಾಗಿದ್ದ ರಾಮಪ್ಪ ಹಟ್ಟಿ, ವರ್ಷದ ಹಿಂದೆಯೇ ಕೆಎಎಸ್‌ ಹುದ್ದೆಗೆ ಬದಲಾಗಿದ್ದರು. ಆದರೆ, ಎಂಟು ತಿಂಗಳು ಅವರಿಗೆ ಯಾವುದೇ ಹುದ್ದೆ ತೋರಿಸದ ಸರ್ಕಾರ, ಎರಡು ತಿಂಗಳ ಹಿಂದೆಯಷ್ಟೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹುದ್ದೆ ನೀಡಿತ್ತು. ಐಎಎಸ್‌ ಬಡ್ತಿಯ ಕನಸು ಕಂಡಿದ್ದ ಅವರು ಅತ್ಯಂತ ಕಿರಿಯ ಶ್ರೇಣಿಯ ಹುದ್ದೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಅಧಿಕಾರಿಯೊಬ್ಬರು ಪ್ರೊಬೇಷನರಿ ಹುದ್ದೆಯಲ್ಲೇ ನಿವೃತ್ತಿಯಾಗುತ್ತಿರುವುದು ಇದೇ ಮೊದಲ ಎನ್ನುತ್ತಾರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹಿರಿಯ ಅಧಿಕಾರಿ.‌

ಪರಿಷ್ಕೃತ ಪಟ್ಟಿ ಜಾರಿಗೊಳಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ, ಯಥಾವತ್‌ ಜಾರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನ. 27ರಂದೇ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅದರಂತೆ, ಹಲವು ಇಲಾಖೆಗಳ 100ಕ್ಕೂ ಹೆಚ್ಚು ಅಧಿಕಾರಿಗಳ ಹುದ್ದೆ ಬದಲಾಗಿದೆ. ಆದರೆ, 14 ವರ್ಷ ಬೇರೆ ಇಲಾಖೆಯಲ್ಲಿದ್ದ ಈ ಹಿರಿಯ ಅಧಿಕಾರಿಗಳನ್ನು ಹೊಸಬರಂತೆ ನೇಮಿಸಿಕೊಳ್ಳಲಾಗಿದೆ. ಸೇವಾ ಜ್ಯೇಷ್ಠತೆ, ವೇತನ, ಸ್ಥಳ ನಿಯುಕ್ತಿ ವಿಷಯದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಈ ಅಧಿಕಾರಿಗಳು ದೂರಿದ್ದಾರೆ.

ಈ ಮಧ್ಯೆ, ಕೆಲವು ಅಧಿಕಾರಿಗಳು ಪರಿಷ್ಕೃತ ಪಟ್ಟಿಯನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದು ತಡೆಯಾಜ್ಞೆ ತಂದಿದ್ದಾರೆ. ಆದರೆ, ಪರಿಷ್ಕೃತ ಪಟ್ಟಿ ಜಾರಿಯಾಗಿಲ್ಲವೆಂದು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ (2019ರ ಏ. 16), ‘ಸುಪ್ರೀಂ ಕೋರ್ಟ್‌ ಅಂತಿಮ ಆದೇಶಕ್ಕೆ ಒಳಪಟ್ಟು ಐಎಎಸ್‌ಗೆ ಪದೋನ್ನತಿ ಪಡೆದು, ಪರಿಷ್ಕೃತ ಪಟ್ಟಿಯಲ್ಲಿ ಬೇರೆ ಇಲಾಖೆಗೆ ಬದಲಾವಣೆಯಾದವರು ಕೆಎಟಿಯಿಂದ ಪಡೆದ ತಡೆಯಾಜ್ಞೆ ಸಮರ್ಥನೀಯವಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

1998ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದ ತೀರ್ಪಿನ ವಿರುದ್ಧ ಸರ್ಕಾರ ಮತ್ತು ಹುದ್ದೆ ಬದಲಾಗುವ ಅಭ್ಯರ್ಥಿಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ 2019ರ ಫೆ. 27ರಂದೇ ವಜಾಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿದ್ದ ಕ್ಯೂರೇಟಿವ್‌ ಅರ್ಜಿಯನ್ನೂ ಇದೇ 19ರಂದು ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT