ಶನಿವಾರ, ಏಪ್ರಿಲ್ 17, 2021
31 °C

24 ಗಂಟೆಗಳ ಒಳಗೆ ಬೆಂಗಳೂರಿಗೆ ವಾಪಸ್ ಬರಲು ಸಿದ್ಧ: ಐಎಂಎ ಕಂಪನಿಯ ಮನ್ಸೂರ್ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾನು 24 ಗಂಟೆಗಳ ಒಳಗೆ ಬೆಂಗಳೂರಿಗೆ ವಾಪಸ್ ಬರಲು ಸಿದ್ಧ’ ಎಂದು ಸಾವಿರಾರು ಜನರನ್ನು ವಂಚಿಸಿರುವ ‘ಐಎಂಎ ಸಮೂಹ ಕಂಪನಿ’ ಮಾಲೀಕ ಮಹಮದ್ ಮನ್ಸೂರ್ ಖಾನ್‌ ಇಂದು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

ಆ ಸಂಬಂಧ ‘ಐಎಂಎ ಗ್ರೂಪ್’ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿರುವ ಮನ್ಸೂರ್ ಖಾನ್, ‘ಭಾರತದ ನ್ಯಾಯಾಂಗ ಹಾಗೂ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. 24 ಗಂಟೆಯೊಳಗೆ ಭಾರತಕ್ಕೆ ಬರಲು ಸಿದ್ಧತೆ ಮಾಡಿಕೊಂಡಿದ್ದು, ಟಿಕೆಟ್ ಸಹ ಖರೀದಿಸಿಟ್ಟುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ವಿಡಿಯೊ ವಿವರ: ‘ಎಲ್ಲರಿಗೂ ನಮಸ್ಕಾರ. ತಿಂಗಳಿನಿಂದಲೇ ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ. ಅದು ಸಾಧ್ಯವಾಗುತ್ತಿಲ್ಲ. ಅನಾರೋಗ್ಯಕ್ಕೆ ತುತ್ತಾಗಿರುವ ನಾನು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಕೆಲ ರಾಜಕಾರಣಿಗಳು ಹಾಗೂ ಸಮಾಜ ವಿರೋಧಿಗಳ ಒತ್ತಡದಿಂದ ಭಾರತ ಬಿಟ್ಟು ತಪ್ಪು ಮಾಡಿದೆ. ಭಾರತಕ್ಕೆ ವಾಪಸ್ ಬರುವುದಾಗಿ ಕಳೆದ ವಿಡಿಯೊದಲ್ಲಿ ಹೇಳಿದ್ದೆ. ನನ್ನ ಹೃದಯದಲ್ಲಿ ಮೂರು ರಂಧ್ರಗಳಿರುವುದಾಗಿ ವೈದ್ಯರು ಹೇಳಿದ್ದು, ಚಿಕಿತ್ಸೆ ಪಡೆಯಲೂ ಹಣವಿಲ್ಲದಂತಾಗಿದೆ. ಹೀಗಾಗಿ, 24 ಗಂಟೆಯೊಳಗೆ ಭಾರತಕ್ಕೆ ಬರುತ್ತೇನೆ’ ಎಂದು ತಿಳಿಸಿದ್ದಾರೆ.

‘ನನ್ನಿಂದ ಸಾಲ ಪಡೆದವರು ಹಾಗೂ ಲಂಚ ಪಡೆದವರ ಪಟ್ಟಿಯನ್ನು ಸಿದ್ಧಪಡಿಸಿದ್ದೇನೆ. ಆ ಪಟ್ಟಿಯನ್ನು ನೇರವಾಗಿ ನ್ಯಾಯಾಲಯಕ್ಕೆ ನೀಡಲಿದ್ದೇನೆ. ಪೊಲೀಸರ ಜೊತೆಗೆಯೂ ಹಂಚಿಕೊಳ್ಳಲಿದ್ದೇನೆ. ಅದರ ಜೊತೆ ಎಲ್ಲ ದಾಖಲೆಗಳನ್ನೂ ಕೊಡುತ್ತೇನೆ. ಪ್ರಕರಣದ ತನಿಖೆಗೆ ನ್ಯಾಯಾಲಯ ಹಾಗೂ ಪೊಲೀಸರಿಗೆ ಎಲ್ಲ ಸಹಕಾರ ನೀಡಲು ಸಿದ್ಧನಾಗಿದ್ದೇನೆ’ ಎಂದು ಹೇಳಿದ್ದಾರೆ.

‘ನನ್ನ ಪರ ವಾದ ಮಾಡಲು ವಕೀಲರು ಯಾರು ಇಲ್ಲ. ಭಾರತಕ್ಕೆ ಬಂದ ನಂತರ ಯಾರಾದರೂ ಸಿಗಬಹುದು ಎಂದುಕೊಂಡಿದ್ದೇನೆ. ಕಂಪನಿಯ ಗ್ರಾಹಕರೆಲ್ಲರೂ ನನ್ನ ಮೇಲೆ ನಂಬಿಕೆ ಇಡಬೇಕು. ಕಂಪನಿಯ ಆಸ್ತಿ ಹಾಗೂ ಹಣ ಎಲ್ಲಿದೆ ಎಂಬುದನ್ನು ಪಟ್ಟಿ ಮಾಡಿದ್ದೇನೆ. ಅದನ್ನು ಪೊಲೀಸರಿಂದ ಜಪ್ತಿ ಮಾಡಿಸಿ, ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡುತ್ತೇನೆ. ದೇವರ ಮೇಲೆ ನಂಬಿಕೆ ಇಟ್ಟು ನನ್ನ ಜೊತೆಗೆ ನಿಲ್ಲಿ’ ಎಂದು ಮನ್ಸೂರ್ ಖಾನ್ ತಿಳಿಸಿದ್ದಾರೆ. 

ಇನ್ನಷ್ಟು...

‘ಮೌಲ್ವಿ’ ಮಗ ಕೋಟ್ಯಧಿಪತಿಯಾದ!

ಚಹಾ ಮಾರುತ್ತಿದ್ದವನನ್ನೇ ನಿರ್ದೇಶಕನನ್ನಾಗಿ ಮಾಡಿದ!

ಐಎಂಎ ಮಾಲೀಕನ ₹ 485 ಕೋಟಿ ಮೌಲ್ಯದ ಆಸ್ತಿ ಪತ್ತೆ​

ಜಮೀನು ಮಾರಿ ₹ 70 ಲಕ್ಷ ಹೂಡಿದ್ದ ಅಲೆಮಾರಿ

11 ಸಾವಿರ ಜನರಿಗೆ ದೋಖಾ​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.