ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ಪ್ರಭಾವಿಗಳಿಗೆ ₹200 ಕೋಟಿ?

ಅಕ್ರಮದ ಗೋಪ್ಯತೆ ಕಾಪಾಡಲು ಮೊಹಮ್ಮದ್‌ ಮನ್ಸೂರ್‌ ಖಾನ್‌ ತಂತ್ರ
Last Updated 20 ಜುಲೈ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ಜ್ಯುವೆಲ್ಸ್‌ ಸಮೂಹ ಕಂಪನಿಗಳ ಅಕ್ರಮ ವ್ಯವಹಾರದ ಗೋಪ್ಯತೆ ಕಾಪಾಡಲು ಮೊಹಮ್ಮದ್‌ ಮನ್ಸೂರ್‌ ಖಾನ್‌ ₹ 200ಕೋಟಿಗೂ ಹೆಚ್ಚು ಹಣವನ್ನು ಹಲವು ಪ್ರಭಾವಿಗಳಿಗೆ ನೀಡಿದ್ದಾನೆ’ ಎಂಬ ಸ್ಫೋಟಕ ಮಾಹಿತಿಯನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.

ಕೆಲವು ರಾಜಕಾರಣಿಗಳು, ಮಹಾನಗರಪಾಲಿಕೆ ಸದಸ್ಯರು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಸಂಬಂಧಪಟ್ಟ ಪೊಲೀಸ್‌ ಠಾಣೆಗಳ ಸಿಬ್ಬಂದಿಗಳು, ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ರೌಡಿಗಳ ಹೆಸರು ಮನ್ಸೂರ್‌ ಖಾನ್‌ ಅವರಿಂದ ಹಣ ಪಡೆದವರ ಪಟ್ಟಿಯಲ್ಲಿವೆ ಎನ್ನಲಾಗಿದೆ.

ಐಎಂಎ ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿ ಈ ಮಹತ್ವದ ದಾಖಲೆಗಳಿದ್ದು, ಕಂಪನಿ ಕಚೇರಿಗಳ ಮೇಲೆ ನಡೆಸಿದ ದಾಳಿ ಸಮಯದಲ್ಲಿ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಯಾರಿಗೆ ಹಣ ಕೊಡಲಾಗಿದೆ; ಎಷ್ಟು ಹಣ ಕೊಡಲಾಗಿದೆ; ಯಾವ ಸ್ಥಳದಲ್ಲಿ ಕೊಡಲಾಗಿದೆ; ಯಾರ ಮುಖಾಂತರ ಕೊಡಲಾಗಿದೆ ಹಾಗೂ ಯಾವ ದಿನ ಕೊಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕಂಪ್ಯೂಟರ್‌ಗಳಲ್ಲಿ ದಾಖಲಿಸಲಾಗಿದೆ. ಇಲೆಕ್ಟ್ರಾನಿಕ್ಸ್‌ ಆಧಾರಿತ ಈ ದಾಖಲೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮನ್ಸೂರ್‌ಖಾನ್‌, ತನಿಖಾ ಸಂಸ್ಥೆಗಳ ಕೈಗೆ ಸಿಗುವ ಮುನ್ನ ಬಿಡುಗಡೆ ಮಾಡಿರುವ ಧ್ವನಿಸುರಳಿಗಳಲ್ಲಿ ತಮ್ಮಿಂದ ಹಣ ಪಡೆದ ಪ್ರಭಾವಿಗಳ ಹೆಸರನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರು. ಈಗ ಖಾನ್‌ ಅವರನ್ನು ಇ.ಡಿ ಅಧಿಕಾರಿಗಳು ಸಮಗ್ರ ವಿಚಾರಣೆಗೆ ಒಳಪಡಿಸಿದ್ದು, ಅಕ್ರಮ ಫಲಾನುಭವಿಗಳ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಹಣ ಪಡೆದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮನ್ಸೂರ್‌ ಖಾನ್‌ ಅವರಿಗೆ ಒಂದಲ್ಲಾ ಒಂದು ಅನುಕೂಲ ಮಾಡಿದ್ದಾರೆ. ಯಾರು ಏನು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಂಚಕ ಕಂಪನಿಯಿಂದ ಹಣ ಪಡೆದ ಆರೋಪದ ಮೇಲೆ ಈಗಾಗಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್‌ ಹಾಗೂ ಬೆಂಗಳೂರು ಉತ್ತರದ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ಬಂಧಿಸಲಾಗಿದೆ.

ಶಿವಾಜಿ ನಗರದ ಶಾಸಕ ರೋಷನ್‌ ಬೇಗ್‌ ಅವರನ್ನು ಎಸ್‌ಐಟಿ ವಿಚಾರಣೆ ಮಾಡಿದೆ. ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಇ.ಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಕೆಲವು ಐಪಿಎಸ್‌ ಅಧಿಕಾರಿಗಳು ಯಾವ ಕಾರಣಕ್ಕೆ ಹಣ ಪಡೆದಿದ್ದಾರೆ. ಪೊಲೀಸ್‌ ಠಾಣೆಗಳ ಅಧಿಕಾರಿಗಳಿಗೆ ಮನ್ಸೂರ್‌ ಖಾನ್ ಯಾವ ಕಾರಣಕ್ಕೆ ಹಣ ಕೊಟ್ಟಿದ್ದಾನೆ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಜಾರಿ ನಿರ್ದೇಶನಾಲಯದ ಕಸ್ಟಡಿಯ ಅವಧಿ ಮುಗಿದ ಬಳಿಕ ಆರೋಪಿಯನ್ನು ಎಸ್ಐಟಿ ತಮ್ಮ ವಶಕ್ಕೆ ಕೇಳಲಿದೆ. ಅವರಿಂದ ಹೇಳಿಕೆ ಪಡೆದ ಬಳಿಕ ಅಕ್ರಮ ಲಾಭ ಪಡೆದಿರುವ ಹಿರಿಯ ಅಧಿಕಾರಿಗಳಿಗೂ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸುವ ಸಂಭವವಿದೆ.

ಖಾನ್‌ ಅವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಇ.ಡಿಯೂ ವಿಚಾರಣೆಗೆ ಕರೆಯಲಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಇ.ಡಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಈಗ ಮನ್ಸೂರ್‌ ಖಾನ್‌ ಹಿಂತಿರುಗಿ ಬಂದಿರುವುದು ಅನೇಕರಿಗೆ ನಡುಕ ಹುಟ್ಟಿಸಿದೆ ಎನ್ನಲಾಗಿದೆ.

ಖಾನ್‌ ನಾಲ್ಕನೇ ಪತ್ನಿ ವಿಚಾರಣೆ
ಮನ್ಸೂರ್‌ ಖಾನ್‌ ಅವರ ನಾಲ್ಕನೇ ಪತ್ನಿ ಇಝ್ನಾ, ಅವರ ಮೂವರು ಮಕ್ಕಳು ಹಾಗೂ ಭಾವಮೈದುನ ಜುಬೇದ್‌ ಅವರನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಇವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ. ಐಎಂಎ ಸಮೂಹ ಕಂಪನಿಗಳಲ್ಲಿ ಇವರ ಪಾತ್ರವೇನು ಎಂಬ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮನ್ಸೂರ್ ಖಾನ್‌ ಜೊತೆ ಇಝ್ನಾ ಹಾಗೂ ಮಕ್ಕಳೂ ದುಬೈಗೆ ತೆರಳಿದ್ದರು. ಕೆಲವು ದಿನಗಳ ಬಳಿಕ ಇವರು ಹಿಂತಿರುಗಿದ್ದರು. ಆದರೆ, ಬೆಂಗಳೂರಿನಿಂದ ಕೋಲ್ಕತ್ತಾಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು ಎಂದೂ ಮೂಲಗಳು ವಿವರಿಸಿವೆ.

ಐಎಂಎ ಹಗರಣದ ಬಗ್ಗೆ ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT