ರಾತ್ರಿ ಪ್ರಭೆ ಚೆಲ್ಲುವ, ವಿವಾಹಗಳಿಗೆ ಮೆರಗು ನೀಡುವ ರೇಷ್ಮೆ ವಸ್ತ್ರ!

7
ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸ್ವಯಂ ಪ್ರಭೆ ಬೀರುವ ರೇಷ್ಮೆ ತಳಿ

ರಾತ್ರಿ ಪ್ರಭೆ ಚೆಲ್ಲುವ, ವಿವಾಹಗಳಿಗೆ ಮೆರಗು ನೀಡುವ ರೇಷ್ಮೆ ವಸ್ತ್ರ!

Published:
Updated:
Deccan Herald

ಲಖನೌ: ಭಾರತೀಯರ ವಿವಾಹದ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುವ, ವಧು–ವರರ ಸಡಗರ ನೂರ್ಮಡಿಗೊಳಿಸುವ ರೇಷ್ಮೆ ವಸ್ತ್ರಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಇದು ಅಂತಿಂಥಾ ರೇಷ್ಮೆಯಲ್ಲ; ರಾತ್ರಿ ಹೊತ್ತಿನಲ್ಲಿ ವಧು–ವರರು ಇದನ್ನು ತೊಟ್ಟು ಬಂದರೆ, ಬೆಳಕಿನ ಪ್ರಭೆಯೇ ನಡೆದು ಬಂದಂತಾಗುತ್ತದೆ. ಗಂಧರ್ವ ಲೋಕದ ವಿವಾಹದ ವಾತಾವರಣ ಸೃಷ್ಟಿಸಿದರೂ ಅಚ್ಚರಿ ಇಲ್ಲ. ಇಂತಹ ರೇಷ್ಮೆ ತಳಿಯನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಬಗೆಯ ರೇಷ್ಮೆಗೆ ದೇಶ– ವಿದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಸ್ವಯಂ ಪ್ರಭೆ ಬೀರುವ ರೇಷ್ಮೆ ಹುಳುವಿನ ಕುಲಾಂತರಿ ತಳಿ ಪ್ರಯೋಗಾಲಯದಲ್ಲಿ ವಿವಿಧ ಬಗೆಯ ಪರೀಕ್ಷೆಗೆ ಒಳಪಟ್ಟಿದೆ. ಈ ತಳಿ ರೋಗ ನಿರೋಧಕ ಗುಣವನ್ನೂ ಹೊಂದಿದೆ. ಇದರಿಂದ ತಯಾರಿಸಿದ ಉಡುಪುಗಳು  ಧರಿಸುವವರಲ್ಲಿ ಸಹಜವಾಗಿ ಖುಷಿ ಮೂಡಿಸುತ್ತದೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿ ಸಂಶೋಧನಾ ವಿಭಾಗದ ವಿಜ್ಞಾನಿ ಡಾ.ರಾಜೇಶ್ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಲಖನೌದಲ್ಲಿ ನಡೆಯುತ್ತಿರುವ 4 ನೇ ಅಂತರ ರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಅವರು ದೇಶದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ರೇಷ್ಮೆ ತಳಿಗಳ ಕುರಿತು ಮಾಹಿತಿ ನೀಡಿದರು.

ಬೆಳಕು ಚೆಲ್ಲುವ ರೇಷ್ಮೆ ಹುಳುಗಳು ಕುಲಾಂತರಿ ತಳಿಗಳು. ಸದ್ಯಕ್ಕೆ ಇವು ಪ್ರಯೋಗಾಲಯದಲ್ಲಿ ಭದ್ರವಾಗಿವೆ. ಇವುಗಳಿಂದ ತಯಾರಾದ ಗೂಡನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಈ ರೇಷ್ಮೆ ಹುಳುಗಳು ಸಹಜವಾಗಿ ವಿಭಿನ್ನ ಬಣ್ಣಗಳ ನಾರುಯುಕ್ತ ಪ್ರೊಟೀನ್‌ ಹೊರಸೂಸಿ ಗೂಡು ನಿರ್ಮಿಸುತ್ತವೆ. ಭಾರತದಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದ ನಾರು ಹೊರ ಸೂಸುವ  ಹುಳುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜಪಾನ್‌ನಲ್ಲೂ ಈ ದಿಸೆಯಲ್ಲಿ ಪ್ರಯೋಗಗಳು ನಡೆದಿವೆ ಎಂದರು.

ಬೆಳಗುವ ರೇಷ್ಮೆಯ ಅಭಿವೃದ್ಧಿ ಹೇಗೆ:  ರೇಷ್ಮೆ ನೂಲು ಸ್ವಯಂ ಬೆಳಕು ನೀಡಲು, ದೇಶ–ವಿದೇಶಗಳ ವಿಜ್ಞಾನಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ. ವಾಣಿಜ್ಯಕವಾಗಿ ಸಾಕಷ್ಟು ಬೇಡಿಕೆ ಇದೆ. 

ಈಗಾಗಲೇ ನಿಸರ್ಗದಲ್ಲಿ ಸ್ವಯಂ ಪ್ರಭೆ ನೀಡುವ ಜೀವಿಗಳಿವೆ. ಮುಖ್ಯವಾಗಿ, ಲೋಳೆ ಮೀನು, ಹವಳಗಳಲ್ಲಿ ಈ(ಸ್ವಯಂ ಪ್ರಭೆಯ) ಆಣ್ವಿಕಗಳಿವೆ. ವಿಜ್ಞಾನಿಗಳು ಲೋಳೆ ಮೀನು ಮತ್ತು ಹವಳಗಳಲ್ಲಿ ಹುದುಗಿರುವ ಡಿಎನ್‌ಎ ಅನುಕ್ರಮ ಸರಪಳಿಯಲ್ಲಿರುವ ಬೆಳಕು ನೀಡುವ ಫ್ಲೊರೊಸೆಂಟ್‌ ಪ್ರೊಟೀನ್‌ಗಳನ್ನು ಬೇರ್ಪಡಿಸಿ ರೇಷ್ಮೆ ಹುಳುವಿನ ವಂಶವಾಹಿಗೆ ಜೋಡಿಸಿದ್ದಾರೆ. ಇದನ್ನು ಟ್ರಾನ್ಸ್‌ಜೆನಿಕ್‌ ರೇಷ್ಮೆ ಎಂದೂ ಕರೆಯಲಾಗುತ್ತದೆ. ಕೆಂಪು ಮತ್ತು ಕಿತ್ತಳೆ ಬಣ್ಣಗಳು ಹವಳದ ಮೂಲಗಳಿಂದ ತಯಾರಿಸಿದರೆ, ಹಳದಿ ಮತ್ತು ಹಸಿರು ಬಣ್ಣ ಲೋಳೆ ಮೀನುಗಳ ಡಿಎನ್‌ಎಯ ಪ್ರೊಟೀನ್‌ ಮೂಲವಾಗಿದೆ. 

ಪತಂಗದ ನಾರಿನ ವಸ್ತ್ರ: ಪತಂಗಗಳ ಪ್ರೊಟೀನ್‌ ನಾರಿನಿಂದ ತಯಾರಿಸುವ ರೇಷ್ಮೆಗೆ ಅಮೆರಿಕಾ, ಯುರೋಪ್‌ ಮತ್ತು ಆಸ್ಟ್ರೇಲಿಯಾದಲ್ಲಿ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ಡಾ.ರಾಜೇಶ್‌ ಕುಮಾರ್‌.

ಅದರಲ್ಲೂ ಮುಗಾ ತಳಿಯ ರೇಷ್ಮೆ ಕೆ.ಜಿಗೆ ₹15,000 ದಿಂದ ₹18,000ದವರೆಗೆ ಬೆಲೆ ಇದೆ. ದೊಡ್ಡ ಗಾತ್ರದ ಪತಂಗ (Moth)ಗಳಿಂದ ತಯಾರಾಗುವ ರೇಷ್ಮೆ ತುಂಬಾ ಗಟ್ಟಿಮುಟ್ಟು. ಮುಗಾದಲ್ಲೇ ಚಿನ್ನದ ಬಣ್ಣದ ಪ್ರೊಟೀನ್‌ಯುಕ್ತ ನಾರು ವಿಶೇಷವಾದುದು. ಇದಕ್ಕೆ ಭಾರಿ ಬೇಡಿಕೆ ಇದೆ. ತಸಾರ್‌, ಓಕ್‌ ತಸಾರ್‌, ಕಾಡು ಪತಂಗದ ನಾರುಗಳಿಂದ ನೂಲನ್ನು ತಯಾರಿಸಲಾಗುತ್ತಿದೆ. ಜಾರ್ಖಂಡ್‌, ಈಶಾನ್ಯ ರಾಜ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಈ ರೇಷ್ಮೆ ಬೆಳೆಯಲಾಗುತ್ತಿದೆ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !