ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ | ‘ಇಂದಿರಾ ಕಿಚನ್‌’ನಲ್ಲಿ ಕಳಪೆ ಅಕ್ಕಿ–ಕೊಳೆತ ತರಕಾರಿ!

ಬೊಮ್ಮನಹಳ್ಳಿ: ಅಡುಗೆ ಮನೆ ಅವ್ಯವಸ್ಥೆ ಆಗರ, ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 30 ಜೂನ್ 2019, 7:55 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸುವ ಆಹಾರ ಬೇಯಿಸಲು ಬೊಮ್ಮನಹಳ್ಳಿವಾರ್ಡ್‌ನ ದೇವರ ಚಿಕ್ಕನಹಳ್ಳಿಯಲ್ಲಿ ನಿರ್ಮಿಸಿರುವ ಅಡುಗೆಮನೆಯಲ್ಲಿ ಕಳಪೆ ಅಕ್ಕಿ ಹಾಗೂ ಕೊಳೆತ ತರಕಾರಿ ಬಳಸಲಾಗುತ್ತಿದೆ ಎಂದು ಪಾಲಿಕೆ ಸದಸ್ಯ ರಾಮ್‌ಮೋಹನ್‌ ರಾಜ್‌ ಆರೋಪಿಸಿದರು.

ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಅವರು ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಗೆ ಪಾಲಿಕೆ ಅಧಿಕಾರಿಗಳ ಜೊತೆಗೆ ಶನಿವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

‘ವಾರದ ಹಿಂದೆ ತರಲಾಗಿದ್ದ ತರಕಾರಿಗಳನ್ನು ಅಡುಗೆಗೆ ಬಳಸಲಾಗುತ್ತಿದೆ. ಅಡುಗೆ ಮನೆಯಲ್ಲಿದ್ದ ತೆಂಗಿನಕಾಯಿ ಹಾಗೂ ತರಕಾರಿ ಕೊಳೆತು ಹೋಗಿದ್ದವು. ಇವತ್ತು (ಶನಿವಾರ) ತಯಾರಿಸಿದ್ದ ಪೊಂಗಲ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಉಪ್ಪು ಹಾಕಲಾಗಿದೆ’ ಎಂದು ದೂರಿದರು.

‘ಬೊಮ್ಮನಹಳ್ಳಿಯಲ್ಲಿರುವ ಆರು ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರವು ಇದೇ ಅಡುಗೆಮನೆಯಿಂದ ಪೂರೈಕೆ ಆಗುತ್ತದೆ. ಪೌರಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಇದೇ ಆಹಾರ ಪೂರೈಸಲಾಗುತ್ತಿದೆ. ಕೈದಿಗಳಿಗೂ ಜೈಲಿನಲ್ಲಿ ಇಷ್ಟು ಕಳಪೆ ಆಹಾರ ನೀಡುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಆಂಧ್ರ ಪ್ರದೇಶದಿಂದ ₹400ಕ್ಕೆ 25 ಕೆ.ಜಿ.ಯಂತೆ ಸೊಸೈಟಿ ಅಕ್ಕಿಯನ್ನು ತರಿಸಿದ್ದಾರೆ. ಅದು ಹಾಳಾಗಿದ್ದು, ಹಸಿರು ಮಿಶ್ರಿತ ಹಳದಿ
ಬಣ್ಣಕ್ಕೆ ತಿರುಗಿದೆ. ಬೇಳೆ ಕೂಡ ಹಾಳಾಗಿದೆ. ನಿತ್ಯ 350 ರಿಂದ 400 ಜನಕ್ಕೆ ಆಹಾರ ಪೂರೈಸುತ್ತಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ಜನರ ಆರೋಗ್ಯದ ಗತಿ ಏನು’ ಎಂದು ಅವರು ಪ್ರಶ್ನಿಸಿದರು.

‘ನಿತ್ಯವೂ ಕಳಪೆ ಆಹಾರವನ್ನೇ ನೀಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪೌರಕಾರ್ಮಿಕರು ದೂರಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿದಪಾಲಿಕೆ ಜಂಟಿ ಆಯುಕ್ತ (ಆರೋಗ್ಯ) ಸರ್ಫರಾಜ್‌ ಖಾನ್‌, ‘ಶೆಫ್‌ಟಾಕ್‌ ಕಂಪನಿಗೆ ಈ ಕ್ಯಾಂಟೀನ್‌ ನಿರ್ವಹಣೆಯ ಗುತ್ತಿಗೆ ನೀಡಲಾಗಿತ್ತು. ಕೊಳೆತಿರುವ ಮತ್ತು ಕೆಟ್ಟಿರುವ ಆಹಾರ ಪದಾರ್ಥಗಳನ್ನು ಬಳಸಿರುವುದು, ಕಳಪೆ ಆಹಾರ ತಯಾರಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಹೇಳಿದರು.

‘ಸ್ಥಳೀಯ ಆರೋಗ್ಯ ಅಧಿಕಾರಿಗಳು ಈ ಕುರಿತು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆರೋಪ
ಸಾಬೀತಾದರೆ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದರು.

‘ಈ ತರಕಾರಿಗಳನ್ನು ಬಿಸಾಡಲು ಇಟ್ಟುಕೊಂಡಿದ್ದೆವು’ ಎಂದು ಅಡುಗೆಮನೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಶೆಫ್‌ಟಾಕ್‌ ಕಂಪನಿಯ ಮಾಲೀಕರಿಗೆ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೆಫ್ ಟಾಕ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಪೂಜಾರಿ, 'ಬೊಮ್ಮನಹಳ್ಳಿಯ ಇಂದಿರಾ ಕಿಚನ್ ಅನ್ನು ನಮ್ಮ ಕಂಪನಿ ನಿರ್ವಹಿಸುತ್ತಿಲ್ಲ. ಪಾಲಿಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT