ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರಗೆ ಬಂದು ಸೀನಿ, ವೈರಸ್ ಹರಡಿ’ ಎಂದ ಇನ್ಫೊಸಿಸ್ ಟೆಕಿ ಬಂಧನ

ಜನರಲ್ಲಿ ಪ್ರಚೋದನೆ ನೀಡುವ ಪೋಸ್ಟ್‌ ಪ್ರಕಟಿದ್ದ ಆರೋಪಿ
Last Updated 28 ಮಾರ್ಚ್ 2020, 1:48 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊರಗಡೆ ಬಂದು ಸೀನಿ, ವೈರಸ್ ಹರಡಿ’ ಎಂದು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದ ಸಾಫ್ಟ್‌ವೇರ್‌ ಎಂಜಿನಿಯರ್ ಮುಜೀಬ್ ಮೊಹಮ್ಮದ್ (34) ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಮಹದೇವಪುರ ಸಮೀಪದ ಎ. ನಾರಾಯಣಪುರದ ಮುಜೀಬ್, ಇನ್ಫೊಸಿಸ್ ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ ₹1.40 ಲಕ್ಷ ಸಂಬಳ ಪಡೆಯುತ್ತಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೊರೊನಾ ವೈರಾಣು ಜನರಲ್ಲಿ ಭೀತಿಯನ್ನುಂಟು ಮಾಡಿದ್ದು, ಇದರ ತಡೆಗೆ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಇಂಥ ಸಂದರ್ಭದಲ್ಲೇ ಆರೋಪಿ ಜನರನ್ನು ಪ್ರಚೋದಿಸುವ ಪೋಸ್ಟ್‌ ಅನ್ನು ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾನೆ’ ಎಂದರು.

‘Spread the word to end the word’ ಎಂದು ತನ್ನ ಫೋಟೊ ಸಮೇತವೇ ಆರೋಪಿ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಹಾಕಿದ್ದ. ಆ ಬಗ್ಗೆ ಸಾರ್ವಜನಿಕರೊಬ್ಬರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಕೆಲ ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

‘ಆರೋಪಿ ಕೃತ್ಯದ ಬಗ್ಗೆ ಕಂಪನಿ ಆಡಳಿತ ಮಂಡಳಿಗೂ ಮಾಹಿತಿ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಮುಜೀಬ್ ಸಹ ಅದೇ ರೀತಿಯಲ್ಲೇ ಮನೆಯಿಂದ ಕೆಲಸ ಮಾಡುತ್ತಿದ್ದ. ಇದೇ ಸಂದರ್ಭದಲ್ಲೇ ಪೋಸ್ಟ್ ಅಪ್‌ಲೋಡ್ ಮಾಡಿದ್ದ’ ಎಂದರು.

ತಮಾಷೆಗೆ ಬರೆದುಕೊಂಡೆ: ‘ಎಲ್ಲೆಡೆ ಕೊರೊನಾ ವೈರಾಣು ಹರಡುವಿಕೆ ಭಯವಿದೆ. ಹೀಗಾಗಿ, ತಮಾಷೆಗಾಗಿ ಪೋಸ್ಟ್ ಪ್ರಕಟಿಸಿದ್ದೆ’ ಎಂಬುದಾಗಿ ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

‘ನಗರದಲ್ಲೇ ಹುಟ್ಟಿರುವ ಆರೋಪಿ, ಇಲ್ಲಿಯೇ ಶಿಕ್ಷಣ ಮುಗಿಸಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಈತ ಈ ರೀತಿ ಪೋಸ್ಟ್ ಪ್ರಕಟಿಸಿದ್ದರ ಹಿಂದೆ ಏನಾದರೂ ಸಂಚು ಇರಬಹುದೆಂಬ ಅನುಮಾನವಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT