ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಸೂಚಿಸಿದರೂ ಒಪ್ಪದ ಸಿ.ಟಿ. ರವಿ

ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಕೆ.ಪಿ.ನಂಜುಂಡಿ ಆಗ್ರಹ
Last Updated 1 ಜನವರಿ 2020, 22:04 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಈ ವರ್ಷದಿಂದ ಸರ್ಕಾರದ ವತಿಯಿಂದಲೇ ಆಚರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸು ಮಾಡಿದ್ದರು. ಆದರೂ, ಈ ಕುರಿತ ಆದೇಶಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಂಕಿತ ಹಾಕಲಿಲ್ಲ‌’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಅವರು ಕಿಡಿಕಾರಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಬುಧವಾರ ಇಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿಯವರೇ ಶಿಫಾರಸು ಮಾಡಿದ್ದರಿಂದ ಈ ಕಾರ್ಯಕ್ರಮವನ್ನು ಈ ವರ್ಷದಿಂದಲೇ ಸರ್ಕಾರ ಆಚರಿಸುತ್ತದೆ ಎಂದು ಭಾವಿಸಿದ್ದೆ. ಆದರೆ, ಸಚಿವರಿಗೆ ಈ ಬಗ್ಗೆ ಇನ್ನೂ ಏನೋ ಚರ್ಚಿಸಬೇಕಂತೆ. ಅವರ ಈ ನಡವಳಿಕೆಯಿಂದ ನೋವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ಜಕಣಾಚಾರಿ ಜಯಂತಿಯನ್ನು ಇನ್ನು ಮುಂದೆ ಸರ್ಕಾರದಿಂದಲೇ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

‘ದೈವಿಕ ಸಂಸ್ಕೃತಿ ರಕ್ಷಣೆಯಲ್ಲಿ ವಿಶ್ವಕರ್ಮರ ಪಾತ್ರ ಮಹತ್ತರವಾದುದು. ಗುಡಿ, ಗೋಪುರ, ಮಠ ಮಂದಿರಗಳನ್ನು ನಿರ್ಮಿಸುವ ಕುಶಲಕರ್ಮಿಗಳು ಸಮಾಜದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ’ ಎಂದರು.

ವಿಶ್ವಕರ್ಮ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ, ‘ವಿಶ್ವಕರ್ಮ ಸಮಾಜದವರು ಎಲ್ಲರಂತೆ ಬದುಕಬೇಕಾದರೆ ಅಧಿಕಾರ ಸಿಗಬೇಕು. ಈ ಬಗ್ಗೆ 67 ಮಠಾಧೀಶರು ಸೇರಿ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಈ ಬಾರಿಯೂ ಸಮಾಜದವರಿಗೆ ಅಧಿಕಾರ ನೀಡದೇ ಹೋದರೆ ಇನ್ನು ಭಿಕ್ಷೆ ಬೇಡುವುದಿಲ್ಲ. ಈಗಲೂ ನಿಮ್ಮ ಬಗ್ಗೆ ವಿಶ್ವಾಸ ಇಟ್ಟಿದ್ದೇವೆ’ ಎಂದು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೇಳಿದರು.

ವರವಿ ಮೌನೇಶ್ವರ ದೇವಸ್ಥಾನ, ಶಿರಸಂಗಿ ಕಾಳಿಕಾ ದೇವಿ ದೇವಾಲಯ, ಚಿಕ್ಕಲ್ಲೂರಿನ ಸಿದ್ಧಪ್ಪಾಜಿಯ ದೇವಾಲಯ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋತಲೂರಿನ ವೀರಬ್ರಹ್ಮೇಂದ್ರ ಸ್ವಾಮಿ ಪಾಪಾಗ್ನಿ ಮಠ, ತಿಂಥಣಿಯ ಮೌನೇಶ್ವರ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸುವಂತೆ ನಂಜುಂಡಿ ಒತ್ತಾಯಿಸಿದರು.

‘ಚಿನ್ನ ಮತ್ತು ಬೆಳ್ಳಿ ಕೆಲಸ ಮಾಡುವ ಅಮಾಯಕರ ಮೇಲೆ ಪೊಲೀಸ್‌ ಇಲಾಖೆ ಕಳವು ಮಾಲು ಹುಡುಕುವ ನೆಪದಲ್ಲಿ ದೌರ್ಜನ್ಯ ನಡೆಸುತ್ತಿದೆ. ಇದು ಮುಂದುವರಿದರೆ, ನಾನೇ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ನಿಗಮಕ್ಕೆ ₹ 50 ಕೋಟಿ: ಭರವಸೆ
ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಾಲ ಪಡೆಯಲು 1.02 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಬೇಡಿಕೆ ಪೂರೈಸಲು ₹ 500 ಕೋಟಿಯಾದರೂ ಬೇಕು. ಸರ್ಕಾರ ಕನಿಷ್ಠಪಕ್ಷ ₹ 200 ಕೋಟಿ ಅನುದಾನವನ್ನಾದರೂ ಒದಗಿಸಬೇಕು ಎಂದು ವಿಶ್ವಕರ್ಮ ಮಠಾಧಿಪತಿಗಳ ಒಕ್ಕೂಟ ಬೇಡಿಕೆ ಸಲ್ಲಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಬೇಡಿಕೆಗಳು

*ವಿಶ್ವಕರ್ಮರ ಪಂಚಕಸುಬುಗಳಿಗೆ ಸಂಬಂಧಿಸಿದಂತೆ ಜಕಣಾಚಾರಿ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ

*ಬೇಲೂರು ಚನ್ನಕೇಶವ ದೇವಾಲಯದ ಆವರಣದಲ್ಲಿ ಜಕಣಾಚಾರಿ ಪುತ್ಥಳಿ ಸ್ಥಾಪನೆ

*ಕಬ್ಬಿಣ ಮತ್ತು ಮರಗೆಲಸದವರಿಗೆ ಆರ್ಥಿಕ ನೆರವು

*ಕಲಬುರ್ಗಿ ವಿಮಾನನಿಲ್ದಾಣಕ್ಕೆ ಜಕಣಾಚಾರಿ ಹೆಸರು

*
ವಿಶ್ವಕರ್ಮರು ಕರ್ಮಯೋಗಿಗಳು. ದೇಶದ ಶಿಲ್ಪಕಲೆಗಳು ವಿಶ್ವಕರ್ಮರ ಸಂತತಿಯ ಕೊಡುಗೆ. ಇದನ್ನು ಸ್ಮರಿಸಬೇಕಾದುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ.
-ವಿನಯ ಗುರೂಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT