ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಾರ್ದನ ರೆಡ್ಡಿಗೆ ಮನುಷ್ಯತ್ವ ಇಲ್ಲ’

Last Updated 30 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಹೊಸಪೇಟೆ: ‘ಮಗನ ಸಾವು ಸಿದ್ದರಾಮಯ್ಯನವರಿಗೆ ದೇವರು ಕೊಟ್ಟ ಶಿಕ್ಷೆ ಎಂದಿರುವ ಮಾಜಿಸಚಿವ ಜನಾರ್ದನ ರೆಡ್ಡಿ ಅವರಿಗೆ ಮನುಷ್ಯತ್ವ ಇಲ್ಲ. ಮನುಷ್ಯತ್ವ ಇರುವವರು ಈ ರೀತಿಯ ಹೇಳಿಕೆ ಕೊಡುವುದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ. ಸಿ. ವೇಣುಗೋಪಾಲ್‌ ಕುಟುಕಿದರು.

ಮಂಗಳವಾರ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಪರ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕೀಯದಲ್ಲಿ ಪರಸ್ಪರ ಟೀಕೆ, ಟಿಪ್ಪಣಿ ಮಾಡುವುದು ಸಹಜ. ಆದರೆ, ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಅದರಲ್ಲೂ ಸಾವಿನ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವುದು ಶೋಭೆ ತರುವಂತಹದ್ದಲ್ಲ. ಗೌರವದ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಬಗ್ಗೆ ಜನಾರ್ದನ ರೆಡ್ಡಿ ಅವರು ಇಷ್ಟು ಲಘುವಾಗಿ ಮಾತನಾಡಬಾರದಿತ್ತು’ ಎಂದರು.

‘ಬಳ್ಳಾರಿಗೆ ಬಂದರೆ ಕಾನೂನು ಭಂಗ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಸುಪ್ರೀಂಕೋರ್ಟ್‌ ಜನಾರ್ದನ ರೆಡ್ಡಿ ಅವರ ಮೇಲೆ ನಿರ್ಬಂಧ ಹೇರಿದೆ. ಹೀಗಿರುವಾಗ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ರೆಡ್ಡಿಗೆ ಮಾಧ್ಯಮಗಳಲ್ಲಿ ಅನಗತ್ಯ ಮಹತ್ವ’

ಬಳ್ಳಾರಿ: ‘ಅಕ್ರಮ ಗಣಿಗಾರಿಕೆಯ ಆರೋಪಿ ಜಿ.ಜನಾರ್ದನ ರೆಡ್ಡಿ ಅವರಿಗೆ ಮಾಧ್ಯಮಗಳು ಏಕೆ ಅನಗತ್ಯ ಪ್ರಾಮುಖ್ಯತೆ ಕೊಡುತ್ತಿವೆಯೋ ಗೊತ್ತಾಗುತ್ತಿಲ್ಲ. ಜಿಲ್ಲೆಯ ಪಕ್ಕದ ತಾಲ್ಲೂಕಲ್ಲಿ ಕುಳಿತು ಅವರು ಸುದ್ದಿಗೋಷ್ಠಿ ನಡೆಸಿದರೆ ರಾಜ್ಯ ಸರ್ಕಾರದಲ್ಲಿ ಬದಲಾವಣೆ ಆಗುತ್ತದೆ. ಕಾಂಗ್ರೆಸ್‌ನಲ್ಲಿ ಆತಂಕ ಮೂಡಿದೆ ಎಂಬುದೆಲ್ಲ ತಪ್ಪು ಕಲ್ಪನೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿಪಾದಿಸಿದರು.

‘ಪ್ರಚಾರಕ್ಕೆ ಬರಬೇಡಿ ಎಂದು ರೆಡ್ಡಿಯವರಿಗೆ ಬಿಜೆಪಿಯವರೇ ಹೇಳಿದ್ದಾರೆ. ಬಳ್ಳಾರಿಗೆ ಹೋಗಕೂಡದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅವರನ್ನು ಜೈಲಿಗೆ ಕಳಿಸಲು ಸಿದ್ದರಾಮಯ್ಯನವರೇನು ಹೈಕೋರ್ಟ್‌ ನ್ಯಾಯಾಧೀಶರೇ. ರೆಡ್ಡಿಗೂ ನಮಗೂ ಏನು ಸಂಬಂಧ’ ಎಂದು ನಗರದಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಅವರ ಹೇಳಿಕೆಯನ್ನಷ್ಟೇ ಪ್ರಕಟಿಸಿದ್ದೇವೆ. ಅನಗತ್ಯ ಮಹತ್ವ ಕೊಟ್ಟಿಲ್ಲ’ ಎಂಬ ಸುದ್ದಿಗಾರರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ದಿನೇಶ್‌, ‘ರೆಡ್ಡಿಗೆ ಆದ್ಯತೆ ಕೊಡಬಾರದು. ಅವರಿಂದ ಯಾವ ದೊಡ್ಡ ಬದಲಾವಣೆಯೂ ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT