ಶುಕ್ರವಾರ, ಜೂನ್ 25, 2021
21 °C
ಸುದ್ದಿ ವಿಶ್ಲೇಷಣೆ

‘ಸಾಮ್ರಾಜ್ಯ’ಕೈ ತಪ್ಪುವ ಭೀತಿ; ಜಾರಕಿಹೊಳಿ ‘ಕ್ರಾಂತಿ’

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಗಾವಿ ‘ಸಾಮ್ರಾಜ್ಯ’ಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಲಗ್ಗೆ ಇಡುತ್ತಿದ್ದಂತೆ ಗಾಬರಿಯಾಗಿರುವ ಜಾರಕಿಹೊಳಿ ಸಹೋದರರು ತಮ್ಮ ಪ್ರಭಾವ ಉಳಿಸಿಕೊಳ್ಳಲು ಶುರುವಿಟ್ಟಿರುವ ‘ಕ್ರಾಂತಿ’ ಈಗ ಕೋಲಾಹಲ ಸೃಷ್ಟಿಸಿದೆ.

ಈ ಬೆಳವಣಿಗೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವ ಮಟ್ಟಿಗೆ ಬೆಳೆದಿದೆ ಎಂದು ಬಿಂಬಿತವಾಗುತ್ತಿದೆ. ಈ ಅವಕಾಶದ ‘ಸದ್ಬಳಕೆ’ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ, ಅಧಿಕಾರ ಹಿಡಿಯಲು ತಂತ್ರಗಾರಿಕೆ ಹೆಣೆದಿದೆ. ಲೋಕಸಭೆ ಚುನಾವಣೆಗೆ ಮುನ್ನವೇ, ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಡಿದೆ.

ನಾಲ್ಕೈದು ರಾಜಕೀಯ ನಾಯಕರ ಮೇಲಾಟ ಹಾಗೂ ವೈಯಕ್ತಿಕ ಪ್ರತಿಷ್ಠೆ ಈಗಿನ ರಾಜಕೀಯ ಗೊಂದಲಗಳಿಗೆ ಕಾರಣವಾಗಿವೆ. ಅವಕಾಶವನ್ನು ಬಳಸಿಕೊಂಡು ತಮ್ಮ ಕೈ ಬಲಪಡಿಸುವ, ಮತ್ತೊಬ್ಬರನ್ನು ಬದಿಗೆ ಸರಿಸುವ ಲೆಕ್ಕಾಚಾರಗಳೂ ಇದರ ಹಿಂದಿವೆ.

ಜಾರಕಿಹೊಳಿ ‘ಕ್ರಾಂತಿ’: ಯಾವುದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ಬೆಳಗಾವಿಯ ಪಾಳಯಪಟ್ಟು ತಮ್ಮ ಅಂಕೆಯಲ್ಲಿ ಇರಬೇಕು ಎಂಬುದು ಜಾರಕಿಹೊಳಿ ಸಹೋದರರಾದ ಎಣಿಕೆ. ಸತೀಶ(ಯಮಕನಮರಡಿ), ರಮೇಶ(ಗೋಕಾಕ) ಕಾಂಗ್ರೆಸ್‌ನಲ್ಲಿದ್ದರೆ, ಬಾಲಚಂದ್ರ (ಅರಭಾವಿ) ಬಿಜೆಪಿಯಲ್ಲಿದ್ದಾರೆ.

ಸರ್ಕಾರ ಯಾವುದೇ ಇದ್ದರೂ ಒಬ್ಬರಲ್ಲ ಒಬ್ಬರು ಸಚಿವರಾಗಿ, ಜಿಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡು ತಮಗೆ ಬೇಕಾದಂತೆ ಸ್ಥಳೀಯ ರಾಜಕಾರಣವನ್ನು ಆಟವಾಡಿಸಬಲ್ಲ ‘ತಾಕತ್ತು’ ಹಾಗೂ ಚಾಣಾಕ್ಷತೆಯನ್ನು ಜಾರಕಿಹೊಳಿ ಸಹೋದರರು ಮೆರೆಯುತ್ತಾರೆ. ಯಾವುದೇ ಚುನಾವಣೆ ಇರಲಿ, ತಮ್ಮ ಬಣವೇ ಅವಿರೋಧವಾಗಿ ಆಯ್ಕೆಯಾಗಬೇಕು ಎಂಬ ಅಪೇಕ್ಷೆ ಅವರದ್ದು.

ಜಾರಕಿಹೊಳಿ ಕುಟುಂಬ ಕಟ್ಟಿಕೊಂಡಿರುವ ಕೋಟೆಗೆ ಏಟು ಕೊಟ್ಟಿದ್ದು ಲಕ್ಷ್ಮಿ ಎಂಬ ಹೆಣ್ಣುಮಗಳು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯೂ ಆಗಿರುವ ಅವರು, ಹಿಂದೆ ನಡೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು. ಬೆಳಗಾವಿಯ ಪರಿಧಿಯಿಂದ ಆಚೆಗೆ ಜಿಗಿದ ಅವರು, ತಮ್ಮ ಸಂಪರ್ಕ ಬಲವನ್ನು ದೆಹಲಿಯವರೆಗೂ ಹಿಗ್ಗಿಸಿಕೊಂಡರು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಬೆಂಬಲ ಸಿಕ್ಕಿದ್ದರಿಂದ ಹೆಚ್ಚಿನ ಧೈರ್ಯವೂ ಅವರಿಗೆ ಬಂತು.

ಸಿದ್ದರಾಮಯ್ಯ ಸರ್ಕಾರದ ಆರಂಭದ ಅವಧಿಯಲ್ಲಿ ಸತೀಶ ಸಚಿವರಾಗಿದ್ದರು. ಆದರೆ, ಸಿದ್ದರಾಮಯ್ಯ–ಸತೀಶ ಮಧ್ಯೆ ಉಂಟಾದ ವೈಮನಸ್ಸಿನಿಂದ ಸಂಪುಟ ಪುನಾರಚನೆ ವೇಳೆ, ಸತೀಶ ಬದಲು ರಮೇಶ ಸಂಪುಟಕ್ಕೆ ಸೇರಿದರು. ಈ ಹೊತ್ತಿನಲ್ಲಿ ರಮೇಶ ಹಾಗೂ ಲಕ್ಷ್ಮಿ ಒಟ್ಟಾಗಿಯೇ ಬೆಳಗಾವಿಯಲ್ಲಿ ರಾಜಕೀಯ ನಡೆಸಲು ಆರಂಭಿಸಿದರು. ಸತೀಶ ಮತ್ತು ಆ ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಇವರ ವಿರುದ್ಧ ತಿರುಗಿ ಬಿದ್ದಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಲಕ್ಷ್ಮಿ ಶಾಸಕಿಯಾಗಿ ಆಯ್ಕೆಯಾಗುತ್ತಿದ್ದಂತೆ ಬೆಳಗಾವಿಯ ಚಿತ್ರಣವೇ ಬದಲಾಯಿತು. ತಮ್ಮ ಗಾಡ್‌ ಫಾದರ್ ಶಿವಕುಮಾರ್‌ ಅವರ ನೆರವು ಪಡೆದ ಅವರು, ಎಲ್ಲ ಹಂತಗಳ ರಾಜಕಾರಣದಲ್ಲೂ ಕೈಯಾಡಿಸಲು ಶುರು ಮಾಡಿದರು. ‘ಸಮ್ಮಿಶ್ರ ಸರ್ಕಾರ ಬಂದಮೇಲೆ ವರ್ಗಾವಣೆ, ಚುನಾವಣೆ, ನಾಮನಿರ್ದೇಶನ ಹಾಗೂ ನಮ್ಮ ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಮೂಗು ತೂರಿಸಲು ಆರಂಭಿಸಿದರು. ಇದು ಸಮಸ್ಯೆಗೆ ಮೂಲಕಾರಣ’ ಎಂದು ಜಾರಕಿಹೊಳಿ ಸಹೋದರರೇ ಹೇಳುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತು.

ಲಕ್ಷ್ಮಿ, ತಾವು ಪ್ರತಿನಿಧಿಸುವ ಬೆಳಗಾವಿ ಗ್ರಾಮಾಂತರ ಕ್ಷೇತ್ರವಲ್ಲದೇ, ಜಾರಕಿಹೊಳಿ ಸಹೋದರರ ಕ್ಷೇತ್ರದ ಮೇಲೂ ಅಧಿಕಾರ ಚಲಾಯಿಸಲು ಹೊರಟಿದ್ದು, ಅಲ್ಲಿಯ ಇಲಾಖೆಗಳಲ್ಲಿ ತಮಗೆ ಬೇಕಾದವರನ್ನು ಹಾಕಿಸಿಕೊಳ್ಳಲು ಮುಂದಾಗಿದ್ದು ರಾಜಕೀಯ ಕಾದಾಟಕ್ಕೆ ತುಪ್ಪ ಸುರಿಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹೊತ್ತಿಗೆ ಇದು ತಾರಕಕ್ಕೇರಿತು.

ಈ ಬೆಳವಣಿಗೆಗಳ ಮಧ್ಯೆ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವರಾಗಲು, ಲಕ್ಷ್ಮಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿರುವುದು ಜಾರಕಿಹೊಳಿ ಸಹೋದರರ ಕಿಚ್ಚನ್ನು ಹೆಚ್ಚಿಸಿತು. ಅವರು ಸಚಿವರಾಗಬಾರದು, ವರ್ಗಾವಣೆ, ಚುನಾವಣೆಗಳಲ್ಲಿ ಅವರ ಬೆಂಬಲಕ್ಕೆ ನಿಂತಿರುವ ಶಿವಕುಮಾರ್ ಮಧ್ಯ ಪ್ರವೇಶ ಮಾಡಬಾರದು. ಬೆಳಗಾವಿಯ ಸಾಮ್ರಾಜ್ಯ ನಮ್ಮ ಕೈಯಳತೆ ಮೀರಿ ಹೋಗಬಾರದು ಎಂದು ಜಾರಕಿಹೊಳಿ ‘ಕ್ರಾಂತಿ’ಯ ಕಹಳೆ ಮೊಳಗಿಸಿದರು.

ಹೀಗೆ ಶುರುವಾದ ಬೆಳಗಾವಿ ‘ಕ್ರಾಂತಿ’ ಈಗ ರಾಜ್ಯಕ್ಕೆ ವಿಸ್ತರಣೆಯಾಗಿದೆ.  ಈ ವಿಷಯದಲ್ಲಿ ಹೈಕಮಾಂಡ್‌ ಬಗ್ಗುವವರೆಗೂ ಸುಮ್ಮನಿರದಿರಲು ಜಾರಕಿಹೊಳಿ ನಿರ್ಧರಿಸಿದ್ದಾರೆ. ಪತನಗೊಳ್ಳುತ್ತಿರುವ ಸಾಮ್ರಾಜ್ಯವನ್ನು ಮತ್ತೆ ಭದ್ರಪಡಿಸಿಕೊಳ್ಳುವ ಹವಣಿಕೆಯಷ್ಟೇ ಅವರದ್ದು. ಆದರೆ, ಅದರ ರಾಜಕೀಯ ಪರಿಣಾಮ ಬೇರೆಯೇ ಆಗುತ್ತಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ, ಸತೀಶ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟು ಬಿಜೆಪಿಗೆ ಸೆಳೆಯುವ ಯತ್ನ ನಡೆದಿದೆ ಎಂಬ ಸುದ್ದಿ ಹರಿದಾಡಿದೆ. ಅವರ ಜತೆ 13 ಶಾಸಕರು ಬರಲಿದ್ದಾರೆ ಎಂಬ ವದಂತಿಯೂ ತೇಲಾಡಿದೆ. ಯಾವುದೇ ಕಾರಣಕ್ಕೂ ಬಿಜೆಪಿಯತ್ತ ತಲೆ ಹಾಕುವುದಿಲ್ಲ ಎಂದು ಸತೀಶ ಹೇಳಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು