ಮಂಗಳವಾರ, ಮೇ 18, 2021
31 °C

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಹರಿದ ಬಟ್ಟೆ: ಬಿಜೆಪಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಧಿಕಾರದ ಲಾಲಸೆಯಿಂದ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು, ನಾಯಕರ ನಡುವೆ ಅಸಮಾಧಾನ, ಅಪನಂಬಿಕೆ ಹೆಚ್ಚಾಗಿ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಮೈತ್ರಿಕೂಟವು ಮತ್ತೆ ಹೊಲಿಗೆ ಹಾಕಲಾರದಂತಹ ಹರಿದ ಬಟ್ಟೆಯಾಗಿದೆ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಟೀಕಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅಭ್ಯರ್ಥಿಗಳೇ ಇಲ್ಲ. ಎಲ್ಲಿ ನಿಲ್ಲಬೇಕು ಎಂದು ಗೊತ್ತಾಗದೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ತುಮಕೂರು ಕ್ಷೇತ್ರವನ್ನು ಮುದ್ದಹನುಮೇಗೌಡರಿಂದ ಕಿತ್ತುಕೊಂಡಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಗೆದ್ದರೆ ಅಂಬರೀಷ್‌ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಮತಕ್ಕಾಗಿ ಬ್ಲ್ಯಾಕ್‌ಮೇಲ್‌ ತಂತ್ರ ಅನುಸರಿಸಲಾಗುತ್ತಿದೆ’ ಎಂದರು.

‘ಮಂಡ್ಯ ಕ್ಷೇತ್ರದಲ್ಲಿ ಆಡಳಿತ ಯಂತ್ರದ ದುರುಪಯೋಗ, ಶಾಂತಿ ಸುವ್ಯವಸ್ಥೆಗೆ ಧಕ್ಕೆ, ನೀತಿಸಂಹಿತೆ ಉಲ್ಲಂಘನೆಯಂಥ ಪ್ರಕರಣಗಳು ವರದಿಯಾಗುತ್ತಿವೆ. ಚುನಾವಣೆ ವೇಳೆ ಹಣದ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಚುನಾವಣೆ ಶಾಂತಿಯುತವಾಗಿ ನಡೆಯಲು ಬಿಗಿ ಬಂದೋಬಸ್ತ್‌ ಮಾಡಬೇಕು. ಈ ಕ್ಷೇತ್ರವನ್ನು ಅತಿ ಸೂಕ್ಷ್ಮ ಎಂದು ಆಯೋಗ ಘೋಷಿಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿಗೌಡ, ‘ಮಂಡ್ಯ ಕ್ಷೇತ್ರದಲ್ಲಿ ಆಡಳಿತ ಯಂತ್ರದ ದುರುಪಯೋಗವಾಗುತ್ತಿದೆ. ಎಚ್‌.ಡಿ.ಕುಮಾರಸ್ವಾಮಿ ತಾವು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ಪುತ್ರನ ಗೆಲುವಿಗಾಗಿ ಮಂಡ್ಯಕ್ಕಷ್ಟೇ ಸೀಮಿತರಾಗಿದ್ದಾರೆ’ ಎಂದು ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು