ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುವ ಕಡೆ ಕುರುಬರಿಗೆ ಟಿಕೆಟ್‌: ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು

Last Updated 30 ಏಪ್ರಿಲ್ 2019, 15:36 IST
ಅಕ್ಷರ ಗಾತ್ರ

ದಾವಣಗೆರೆ: ‘ಸೋಲುವಂತಹ ಕ್ಷೇತ್ರಗಳಲ್ಲಿ ಕುರುಬರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ತಮ್ಮನ್ನು ಕುರುಬರ ನಾಯಕ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದರು.

‘ಬಿಜೆಪಿಯಲ್ಲಿ ಒಬ್ಬ ಕುರುಬನಿಗೂ ಟಿಕೆಟ್‌ ಕೊಡಿಸದ ಈಶ್ವರಪ್ಪ ರಾಜಕೀಯ ಸನ್ಮಾಸತ್ವ ಪಡೆಯಬೇಕು’ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.

‘ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ನಿರಾಕರಿಸಿದ ಮೇಲೆ ಸೋಲುವಂತಹ ಟಿಕೆಟ್‌ ಅನ್ನು ಕುರುಬರಾದ ಎಚ್‌.ಬಿ. ಮಂಜಪ್ಪಗೆ ಕೊಡಿಸಿದರು. ಇದೇನಾ ಅವರಿಗೆ ಕುರುಬರ ಮೇಲಿರುವ ಪ್ರೀತಿ’ ಎಂದು ಪ್ರಶ್ನಿಸಿದರು.

‘ವಿಜಯಶಂಕರ್‌ ಅವರನ್ನು ಬಿಜೆಪಿಯು ಶಾಸಕ, ಸಚಿವ, ಸಂಸದರನ್ನಾಗಿ ಮಾಡಿತ್ತು. ಅವರ ಮೂಗಿಗೆ ತುಪ್ಪ ಹಚ್ಚಿ ಸಿದ್ದರಾಮಯ್ಯ ಕಾಂಗ್ರೆಸ್‌ ಟಿಕೆಟ್‌ ಕೊಟ್ಟು ಮೈಸೂರಿನಲ್ಲಿ ನಿಲ್ಲಿಸಿದರು. ಆದರೆ, ದೇವೇಗೌಡರು, ಕುಮಾರಸ್ವಾಮಿಯೇ ವಿಜಯಶಂಕರ್‌ ಅವರನ್ನು ಸೋಲಿಸುತ್ತಾರೆ. ಸೋಲುವಂತಹ ಟಿಕೆಟ್‌ಗಳನ್ನು ಕುರುಬರಿಗೆ ಕೊಡಿಸಿರುವ ಅವರು ಯಾವ ಮುಖ ಇಟ್ಟುಕೊಂಡು ತಮ್ಮನ್ನು ಕುರುಬರ ನಾಯಕ ಎಂದು ಹೇಳುತ್ತಾರೆ’ ಎಂದು ಕೇಳಿದರು.

ಹಿಂದುಳಿದ ವರ್ಗದವರು ಒಂದು ಮತವನ್ನೂ ಬಿಜೆಪಿಗೆ ಹಾಕಬಾರದು ಎಂದು ಸಿದ್ದರಾಮಯ್ಯ ಕರೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಸೊಕ್ಕಿನ ಮಾತನಾಡಿದ್ದರಿಂದಲೇ ಕುರುಬ ಮತದಾರರು ಹೆಚ್ಚಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೆಸೆದರು. ಜೊತೆಗೆ ಕಾಂಗ್ರೆಸ್‌ ಸರ್ಕಾರವೂ ಹೋಯಿತು. ಸಿದ್ದರಾಮಯ್ಯ ಅವರನ್ನು ಕುರುಬರೇ ಒಪ್ಪಿಕೊಳ್ಳುತ್ತಿಲ್ಲ. ಬಾದಾಮಿಯಲ್ಲಿ ಅಲ್ಪಮತಗಳ ಅಂತರದಿಂದ ಗೆದ್ದಿದ್ದಾರೆ. ಮುಂದಿನ ಬಾರಿ ಬಾದಾಮಿಗೆ ಬರಲಿ ಸೋಲಿಸುತ್ತೇವೆ’ ಎಂದು ಈಶ್ವರಪ್ಪ ಗುಡುಗಿದರು.

ನಾಲಿಗೆ ಹೊರಚಾಚಿದ ಈಶ್ವರಪ್ಪ!
‘ಇಷ್ಟುದ್ದದ ನಾಲಿಗೆ ಹೊರಚಾಚುತ್ತಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿರುವ ಕುರಿತ ಪ್ರಶ್ನೆಗೆ ಈಶ್ವರಪ್ಪ ಅವರು ಮಾಧ್ಯಮದವರ ಎದುರು ತಮ್ಮ ನಾಲಿಗೆಯನ್ನು ಹೊರಚಾಚಿ ‘ಹೌದು’ ಎಂದು ಸಮರ್ಥಿಸಿಕೊಂಡರು.

‘ಈ ನಾಲಿಗೆ ಇರುವುದು ಭಾರತ ಮಾತಾಕಿ ಜೈ, ವಂದೇ ಮಾತರಂ ಹೇಳಲಿಕ್ಕೆ. ಆದರೆ, ಇಂಥವರ ಹೆಸರು ಹೇಳಬೇಕಾದಂತಹ ದುರಾದೃಷ್ಟ ಬಂದಿದೆಯಲ್ಲ. ದೇವರಲ್ಲಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಹಾಸ್ಯಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT