ಭಾನುವಾರ, ಫೆಬ್ರವರಿ 16, 2020
22 °C
‘ದಲಿತ ಬಂಡಾಯ; ಸ್ಥಿತ್ಯಂತರದ ನೆಲೆಗಳು’ ಗೋಷ್ಠಿ

ಶೋಷಣೆ ಬಗ್ಗೆ ಮಾತನಾಡಿದರೆ ದೇಶದ್ರೋಹ ಪಟ್ಟ: ಗೋಷ್ಠಿಯಲ್ಲಿ ಆತಂಕ

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ‘ಸಾಹಿತ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಅಸ್ಪೃಶ್ಯತೆ ಇನ್ನೂ ನಿವಾರಣೆಯಾಗಿಲ್ಲ. ಶೋಷಣೆ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟುವ ವಾತಾವರಣ ಇದೆ. ಮೀಸಲಾತಿ ಸೌಲಭ್ಯವನ್ನೂ ಅನರ್ಹರು ಕಬಳಿಸುತ್ತಿದ್ದಾರೆ’ ಎಂಬ ಆತಂಕ ಇಲ್ಲಿ ನಡೆದ ‘ದಲಿತ ಬಂಡಾಯ; ಸ್ಥಿತ್ಯಂತರದ ನೆಲೆಗಳು’ ಗೋಷ್ಠಿಯಲ್ಲಿ ಮಾರ್ದನಿಸಿತು.

‘ದಲಿತರು ಅನ್ಯ ಧರ್ಮ ಸ್ವೀಕರಿಸುವುದು ದೇಶದ್ರೋಹ ಅಲ್ಲ; ಮೆಕಾಲೆಯಿಂದಾಗಿಯೇ ಭಾರತದಲ್ಲಿ ಶೋಷಿತರು ಶಿಕ್ಷಣ ಪಡೆಯುವಂತಾಯಿತು’ ಎಂಬ ಪ್ರತಿಪಾದನೆಯೂ ವ್ಯಕ್ತವಾಯಿತು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ‘ಸಾಹಿತ್ಯ ಮತ್ತು ಸಮಾಜ’ ಕುರಿತು ವಿಷಯ ಮಂಡಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಎಚ್‌.ಟಿ. ಪೋತೆ, ‘ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಈ ಕಾರಣಕ್ಕಾಗಿಯೇ ದಲಿತರು ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮ ಸ್ವೀಕರಿಸುತ್ತಿದ್ದಾರೆ. ಇದು ದೇಶದ್ರೋಹದ ಕೆಲಸವಲ್ಲ. ಅದು ಅವರಿಗಿರುವ ಸ್ವಾತಂತ್ರ್ಯ ಮತ್ತು ಸಂವಿಧಾನ ಬದ್ಧ ಹಕ್ಕು’ ಎಂದರು.

‘ನಕಲಿ ಜಾತಿ ಪ್ರಮಾಣಪತ್ರದಿಂದ ಪರಿಶಿಷ್ಟರ ಮೀಸಲಾತಿ ಸೌಲಭ್ಯ ಕಸಿಯುವ ಕೆಲಸ ನಡೆಯುತ್ತಿದೆ. ಅಂಬೇಡ್ಕರ್‌ ಅವರ ಮೊಮ್ಮಗನನ್ನು ಹಾಗೂ ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲಕುಮಾರ್‌ ಶಿಂಧೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ನಕಲಿ ದಲಿತ ವ್ಯಕ್ತಿಗಳು’ ಎಂದು ಕಿಡಿಕಾರಿದರು.

ಮೆಕಾಲೆ ಬರುವವರೆಗೆ ದೇಶದಲ್ಲಿ ಶಿಕ್ಷಣದ ಮೆಥಡಾಲಜಿ (ಅಧ್ಯಯಕ್ರಮ) ಇರಲಿಲ್ಲ ಎಂದು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಹೇಳಿರುವುದನ್ನು ಪ್ರಸ್ತಾಪಿಸಿದ ಪೋತೆ, ‘ನಮ್ಮಲ್ಲಿ ಶಿಕ್ಷಣದ ಮೆಥಡಾಲಜಿ ಇರಲಿಲ್ಲ ಎಂಬುದು ಸುಳ್ಳು. ಇಲ್ಲಿ ಜಾತಿ ವ್ಯವಸ್ಥೆ ಇದ್ದ ಕಾರಣ ದಲಿತರಿಗೆ ಶಿಕ್ಷಣ ನೀಡಲಿಲ್ಲ. ಮೆಕಾಲೆ ಭಾರತಕ್ಕೆ ಬಂದಿದ್ದರಿಂದಾಗಿಯೇ ದಲಿತರು ಶಿಕ್ಷಣ ಪಡೆಯಲು ಸಾಧ್ಯವಾಯಿತು’ ಎಂದರು.

‘ಪುರಾಣ ಒಂದು ಸುಳ್ಳಿನ ಕಂತೆಯಾಗಿದ್ದು, ಪುರಾಣಗಳ ಮರು ವಿಮರ್ಶೆನಡೆಯಬೇಕಿದೆ. ದಲಿತ–ಬಂಡಾಯಗಾರರ ಭಾಷೆ ವಾಚ್ಯ ಎಂದು ಹೇಳುತ್ತಾರೆ. ಇದು ತಪ್ಪು ವ್ಯಾಖ್ಯಾನ. ಇದು ನೋವಿನ ಅಭಿವ್ಯಕ್ತಿ. ದಲಿತ ಸಾಹಿತ್ಯ ಬರದೇ ಹೋಗಿದ್ದರೆ ಕನ್ನಡ ಸಾಹಿತ್ಯಕ್ಕೆ ಮಾನವೀಯತೆಯೇ ಬರುತ್ತಿರಲಿಲ್ಲ’ ಎಂದು ಹೇಳಿದರು.

‘ಶೋಷಣೆ ಮತ್ತು ಬಿಡುಗಡೆ’ ವಿಷಯವಾಗಿ ಮಾತನಾಡಿದ ಡಾ.ಸುಬ್ರಾವ ಎಂಟೆತ್ತಿನವರ, ‘ಇಂದು ಶೋಷಣೆ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟುವ ವಾತಾವರಣ ಬಂದಿದೆ. ದಲಿತರ ವಿರುದ್ಧ ದೌರ್ಜನ್ಯ ನಿಂತಿಲ್ಲ. ಆದಿವಾಸಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಲಿಲ್ಲ. ಇಂತಹ ಸಂದರ್ಭದಲ್ಲಿ ಈ ಹೋರಾಟಕ್ಕೆ ಸಂವಿಧಾನವೇ ದಾರಿ. ಆದರೆ, ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬ ಮಾತು ಕೇಳಿಬರುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ ನಾವು ಶೋಷಣೆ ಬಗ್ಗೆ ಮಾತನಾಡುತ್ತಿದ್ದೇವೆ. ಇದು ನಾಚಿಕೆಯ ವಿಷಯ. ಹಲವಾರು ಸಂಘಟನೆಗಳ ಮೂಲಕ ಶೋಷಣೆಯ ಪ್ರಮಾಣ ಕಡಿಮೆಯಾಗಿದೆ ನಿಜ. ಪೂರ್ತಿ ಹೋಗಿಲ್ಲ. ದಲಿತ ಸಂಘಟನೆಗಳು ಎಸಿ ರೂಮಿನಿಂದ ಹೊರ ಬಂದು ಕೆಲಸ ಮಾಡಬೇಕು. ಅಂಬೇಡ್ಕರ್‌ ಕಾರಣದಿಂದ ಉನ್ನತ ಸ್ಥಾನಮಾನ ಪಡೆದು ಲಕ್ಷಾಂತರ ಸಂಬಳ ಎಣಿಸುತ್ತಿರುವವರು ದಲಿತ ಕೇರಿಗಳಿಗೆ ಹೋಗಿ ಅಲ್ಲಿಯವರ ಬದುಕು ಹಸನಾಗಿಸುವ ಕೆಲಸವಾಗಬೇಕಿದೆ’ ಎಂದ ಅವರು, ದಲಿತರಿಂದಲೇ ಪ್ರಜಾಪ್ರಭುತ್ವ ರಕ್ಷಣೆ ಸಾಧ್ಯ ಎಂದು ಹೇಳಿದರು.

‘ಕಲೆ ಮತ್ತು ಸಂಸ್ಕೃತಿ’ ವಿಷಯವಾಗಿ ಮಾತನಾಡಿ ಡಾ.ಕೆ.ಕೃಷ್ಣಪ್ಪ, ‘ಸಾವಿರಾರು ದಲಿತ ಸಂಘಟನೆಗಳು ಇದ್ದರೂ ಅವೆಲ್ಲ ಅಸಂಘಟಿತವಾಗಿವೆ ಮತ್ತು ನೈತಿಕಮೌಲ್ಯ ಕಳೆದುಕೊಂಡಿವೆ. ಎಡ–ಬಲ ಸಂಘರ್ಷ ದಲಿತರಿಂದ ಇನ್ನೂ ದೂರವಾಗಿಲ್ಲ. ದಲಿತರ ಉದ್ಧಾರಕ್ಕೆ ದಲಿತರೂ ಕೈಜೋಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಚಳವಳಿಗಳು’ ಕುರಿತು ವಿಷಯ ಮಂಡಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಾ.ಡಿ.ಜಿ.ಸಾಗರ, ‘ದುರ್ಬಲರ ವಿರುದ್ಧ ಸಬಲರು ಸವಾರಿ ಮಾಡಿದರೆ ಚಳವಳಿ ಹುಟ್ಟುತ್ತವೆ. ನಮ್ಮ ಹೋರಾಟ ಯಾವುದೇ ಜಾತಿ–ವರ್ಗದ ವಿರುದ್ಧ ಅಲ್ಲ. ದಲಿತ ಚಳವಳಿಗಳಿಗೆ ಕೇವಲ ದಲಿತ ನಾಯಕರಷ್ಟೇ ಅಲ್ಲ; ಮೇಲ್ವರ್ಗದ ಕೆಲ ಹೋರಾಟಗಾರರೂ ಬಲ ತುಂಬಿದ್ದಾರೆ’ ಎಂದರು.

‘ಆಡಳಿತಾರೂಢ ಸರ್ಕಾರ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಯತ್ನ ನಡೆಸುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಮುಂದಿನ ಸಮ್ಮೇಳನ ಹಾವೇರಿಯಲ್ಲಿ

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ. ಗುರುವಾರ ಇಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

‘ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿ ಮುಂದಿನ ಸಮ್ಮೇಳನ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಹಾವೇರಿಗೆ ಆತಿಥ್ಯ ವಹಿಸುವ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ವ್ಯಕ್ತವಾಗಲಿಲ್ಲ’ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು