ಶುಕ್ರವಾರ, ಫೆಬ್ರವರಿ 21, 2020
19 °C

‘ಪತ್ರಕರ್ತರು ಸಾಮಾಜಿಕ ಶಿಕ್ಷಕರು’

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ಪ್ರಜಾಪ್ರಭುತ್ವದನಾಲ್ಕನೆಯ ಆಯಾಮ ಎನಿಸಿರುವ ಮಾಧ್ಯಮ ಕ್ಷೇತ್ರ ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳ ವಿಶ್ಲೇಷಣೆಗೆ ಸಾಹಿತ್ಯ ಸಮ್ಮೇಳನ ವೇದಿಕೆಯಾಯಿತು.

‘ಮಾಧ್ಯಮ: ಸವಾಲುಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ‘ಪ್ರಜಾಪ್ರಭುತ್ವವನ್ನು ಕಾಯುವ ಕೆಲಸ ಮಾಡಬೇಕಾದ್ದು ಪತ್ರಿಕೆಗಳ ಕರ್ತವ್ಯ. ಆದರೆ ಈ ಕಾವಲುನಾಯಿ ಇಂದು ಸಾಕುನಾಯಿಯಾಗಲು ಹೊರಟಿದೆ’ ಎಂದು ಎಚ್ಚರಿಸಿದರು. ‘ಮಾಧ್ಯಮಗಳು ಬೊಗಳುವ, ಕಚ್ಚುವ, ಎಚ್ಚರಿಸುವ ನಾಯಿಗಳಾಗಬೇಕಾದ ಅನಿವಾರ್ಯತೆಯಿದೆ’ ಎಂದೂ ಹೇಳಿದರು.

‘ಇಂದು ಕೆಲವರು ಮಾಧ್ಯಮಗಳೇ ಬೇಡ ಎಂದು ಕರೆ ಕೊಡುತ್ತಿದ್ದಾರೆ. ಆದರೆ ಸಮಾಜದ ಸಾಕ್ಷಿಪ್ರಜ್ಞೆ ಎಂದರೆ ಅದು ಮಾಧ್ಯಮವೇ ಹೌದು ಎನ್ನುವುದನ್ನು ಮರೆಯಬಾರದು. ಸಮಾಜದಲ್ಲಿ ಶಿಕ್ಷಕರಿಗೆ ಇರುವಷ್ಟೇ ಮಹತ್ವ ಪತ್ರಕರ್ತರಿಗೂ ಇದೆ. ಚಿಕಿತ್ಸಕ ದೃಷ್ಟಿಯೊಂದಿಗೆ ಸಾಮಾಜಿಕ ಹೊಣೆಗಾರಿಕೆಯೂ ಜತೆಯಾದಾಗ ಮಾತ್ರ ಮಾಧ್ಯಮ ಬಲಿಷ್ಠವಾಗುತ್ತದೆ. ಯಾವುದನ್ನು ವೈಭವೀಕರಿಸಬೇಕು, ಯಾವುದನ್ನು ನಿರ್ಲಕ್ಷಿಸಬೇಕು ಎನ್ನುವುದನ್ನು ಮಾಧ್ಯಮಗಳೇ ಕಂಡುಕೊಳ್ಳಬೇಕಿದೆ. ದೇಶದಲ್ಲಿ ನಡೆಯುವ ತಪ್ಪುಗಳಲ್ಲಿ ಪತ್ರಿಕೆಗಳ ಹೊಣೆಗಾರಿಕೆಯೂ ಇದೆ ಎನ್ನುವುದನ್ನು ಮರೆಯುವಂತಿಲ್ಲ’ ಎಂದೂ ಅಭಿಪ್ರಾಯಪಟ್ಟರು.

‘ಮುದ್ರಣ ಮಾಧ್ಯಮ, ಮಾಧ್ಯಮ ಕ್ಷೇತ್ರದ ತಾಯಿಯಿದ್ದಂತೆ. ಇತರ ಮಾಧ್ಯಮಗಳ ಮೂಲಕ ಮುದ್ರಣ ಮಾಧ್ಯಮಕ್ಕೆ ಧಕ್ಕೆ ಎದುರಾಗುತ್ತದೆ ಎನ್ನಲಾಗುತ್ತದೆ. ಆದರೆ ಉಳಿದ ಮಾಧ್ಯಮಗಳು ಪತ್ರಿಕೆಗಳಿಗೆ ಪೂರಕವೇ ಹೊರತು ಮಾರಕವಲ್ಲ. ಹೀಗೆ ಅವನ್ನು ಪೂರಕವಾಗಿ ಬಳಸುವ ಜಾಣ್ಮೆ ನಮ್ಮದಾಗಬೇಕು. ಪತ್ರಿಕೆಗಳು ಇಂದು ತಮ್ಮ ಕಚೇರಿಯ ಹತ್ತಿಪ್ಪತ್ತು ವರದಿಗಾರರಷ್ಟನ್ನೇ ನಮ್ಮವರು ಎಂದು ಭಾವಿಸದೆ, ಸಾಮಾಜಿಕ ಜಾಲತಾಣದ ಬಳಕೆದಾರರೆಲ್ಲರೂ ನಮ್ಮ ವರದಿಗಾರರು ಎಂದು ಸ್ವೀಕರಿಸಿದರೆ ಆಗ ಅವುಗಳ ವ್ಯಾಪ್ತಿ ಹಿಗ್ಗುತ್ತದೆ. ಟಿವಿ ಮಾಧ್ಯಮ ಬಂದ ಮೇಲೆ ಮುದ್ರಣ ಮಾಧ್ಯಮ ಹೆಚ್ಚು ಕ್ರಿಯಾಶೀಲವಾಯಿತು ಎಂಬುದನ್ನು ಮರೆಯಬಾರದು’ ಎಂದರು.

‘ಟಿವಿ ಮಾಧ್ಯಮದ ಪ್ರಭಾವದ ನಡುವೆಯೂ ಕನ್ನಡದಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚಾಗಿರುವುದಕ್ಕೆ ಅವುಗಳ ವಿಶ್ವಾಸಾರ್ಹತೆಯೇ ಕಾರಣ’ ಎಂದು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು. ಗೋಷ್ಠಿಯ ಆಶಯ ಭಾಷಣವನ್ನು ಮಾಡುತ್ತಾ, ‘ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದೇ ಇಂದಿನ ದೊಡ್ಡ ಸವಾಲು’ ಎಂದರು.

‘ನಾಯಿ ನಮಗೆ ಪರಿಚಯವಾದರೆ ಆಗ ಅದು ಕಚ್ಚುವುದಿಲ್ಲ, ಕೊನೆಗೆ ಬೊಗಳುವುದನ್ನೂ ನಿಲ್ಲಿಸುತ್ತದೆ. ಮಾಧ್ಯಮಗಳನ್ನು ಕಚ್ಚುವಂತೆಯೂ ಬೊಗಳುವಂತೆಯೂ ಬೆಳೆಸುವುದು ಇಂದಿನ ಸವಾಲು’ ಎಂದು ಮಾಧ್ಯಮಗಳ ವಿಶ್ವಾಸಾರ್ಹತೆಗೂ ಕ್ರಿಯಾ
ಶೀಲತೆಗೂ ಇರುವ ಪರಸ್ಪರ ಸಂಬಂಧವನ್ನು ಪರೋಕ್ಷವಾಗಿ ಸೂಚಿಸಿದರು.

 ‘ಮುದ್ರಣ ಮಾಧ್ಯಮ’ ಎಂಬ ವಿಷಯದ ಕುರಿತು ಮಾತನಾಡಿದ ‘ವಿಜಯವಾಣಿ’ ಪತ್ರಿಕೆಯ ಸಂಪಾದಕ ಕೆ.ಎನ್‌. ಚನ್ನೇಗೌಡ, ಪತ್ರಿಕೆಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಇಂದು ಪತ್ರಿಕೆಗಳಲ್ಲಿ ಕೆಲಸಮಾಡಬಲ್ಲಂತಹ ನಿಪುಣ ಕೆಲಸಗಾರರು ಸಿಗುತ್ತಿಲ್ಲ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ಟಿವಿ ಮಾಧ್ಯಮ ಪರಸ್ಪರ ಪೈಪೋಟಿಯ ಕಾರಣದಿಂದ ಕೆಲವೊಂದು ತಪ್ಪುಗಳನ್ನು ಮಾಡಿದೆ ಎಂದು ರಮಾಕಾಂತ್‌ ಎ.ಎಸ್‌. ಹೇಳಿದರು.
ಅವರು ‘ದೃಶ್ಯ ಶ್ರವ್ಯ ಮಾಧ್ಯಮ’ ಎಂಬ ವಿಷಯವಾಗಿ ಮಾತನಾಡುತ್ತಾ, ಮಾಲೀಕರ ಮರ್ಜಿ, ಸಾಮಾಜಿಕ ಜಾಲತಾಣಗಳು ಮುಂತಾದ ಹಲವು ಒತ್ತಡಗಳನ್ನು ಟಿವಿ ಮಾಧ್ಯಮ ಎದುರಿಸುತ್ತಿದೆ ಎಂದು ವಿಷಾದಿಸಿದರು.

‘ಅಂತರ್ಜಾಲ ಮಾಧ್ಯಮ’ದ ಬಗ್ಗೆ ಮಾತನಾಡಿದ ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮೀ, ಡಿಜಿಟಲ್‌ ಮಾಧ್ಯಮವೇ ಮುಂದಿನ ಮಾಧ್ಯಮಯುಗ ಎಂದು ಅಭಿಪ್ರಾಯಪಟ್ಟರು.

ಮೊಬೈಲ್‌ ಇದ್ದವರೆಲ್ಲರೂ ಇಂದು ಪತ್ರಕರ್ತರೇ ಹೌದು ಎಂದು ಪ್ರತಿಪಾದಿಸಿದವರು ಸುಭಾಷ್ ಹೂಗಾರ್‌. ‘ಸಾಮಾಜಿಕ ಜಾಲತಾಣ’ಗಳ ಬಗ್ಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಸಾಮಾನ್ಯಜನರಿಗೆ ಸಿಕ್ಕಅಸ್ತ್ರವಾಗಿದೆ. ಸಾಮಾಜಿಕ ಜಾಲತಾಣಗಳ ಅಭಿಯಾನದ ಕಾರಣದಿಂದ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಸಾಧ್ಯವಾಗಿದೆ ಎಂದು ಕೆಲವು ಉದಾಹರಣೆಗಳನ್ನೂ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು