ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ವಿವಿ : ಕುಲಸಚಿವ ಹುದ್ದೆಗೆ ಮತ್ತೆ ಕಲ್ಲಪ್ಪ ಲಾಬಿ?

ಉನ್ನತಶಿಕ್ಷಣ ಸಚಿವರ ಬಳಿ ಮರು ನೇಮಕ ಪ್ರಸ್ತಾವನೆಯ ಕಡತ
Last Updated 10 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಲೈಂಗಿಕ ಕಿರುಕುಳ, ಸಂಶೋಧನಾ ಲೇಖನ ಕೃತಿ ಚೌರ್ಯದಂತ ಗಂಭೀರ ಆರೋಪ ಹೊತ್ತಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಪ್ರಾಧ್ಯಾಪಕ ಡಾ.ಕಲ್ಲಪ್ಪ ಎಂ.ಹೊಸಮನಿ ಅವರನ್ನು ಪುನಃ ಕುಲಸಚಿವ ಸ್ಥಾನಕ್ಕೆ ನೇಮಕ ಮಾಡುವ ಪ್ರಯತ್ನ ನಡೆದಿದೆ.

ಈ ಸಂಬಂಧ ಕಡತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಮುಂದಿದ್ದು, ರಾಜಕೀಯ ಒತ್ತಡಗಳ ಪರಿಣಾಮ ಕುಲಸಚಿವ (ಆಡಳಿತ) ಸ್ಥಾನಕ್ಕೆ ಪುನಃ ನೇಮಕ ಮಾಡುವ ಪ್ರಯತ್ನ ನಡೆದಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಸರ್ಕಾರದ ಈ ನಡೆಯ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉನ್ನತ ಶಿಕ್ಷಣ ಸಚಿವರು ಕಳಂಕಿತ ವ್ಯಕ್ತಿಯನ್ನು ಮತ್ತೆ ಉನ್ನತ ಹುದ್ದೆಗೆ ನೇಮಕ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿದ್ದ ಕಲಪ್ಪ ಅವರನ್ನು ಆರು ತಿಂಗಳ ಹಿಂದೆ ಕುಲಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಅವರ ವಿರುದ್ಧ ಲೈಂಗಿಕ ಕಿರುಕುಳ, ಸಂಶೋಧನಾ ಪ್ರಬಂಧದ ಕೃತಿಚೌರ್ಯ, ಅಧಿಕಾರ ದುರುಪಯೋಗ, ದಾಖಲೆ ತಿದ್ದುವಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಿದ್ದವು. ಈ ಬಗ್ಗೆ ಸತ್ಯಶೋಧನಾ ಸಮಿತಿ ತನಿಖೆ ನಡೆಸಿತ್ತು. ಲೈಂಗಿಕ ಕಿರುಕುಳ ಕುರಿತ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ಎರಡು ವೇತನ ಬಡ್ತಿಗಳನ್ನು ಕಡಿತಗೊಳಿಸಲಾಗಿತ್ತು. ಅಲ್ಲದೆ, ಎರಡು ಬಾರಿ ಸಂಶೋಧನಾ ಪ್ರಬಂಧವನ್ನು ಕೃತಿ ಚೌರ್ಯ ಮಾಡಿದ್ದರಿಂದ ಸಂಶೋಧನಾ ಪ್ರಬಂಧ ಪ್ರಕಟಿಸುವ ಜರ್ನಲ್‌ನ ಸಂಪಾದಕರು ಲೇಖನ ಹಿಂದಕ್ಕೆ ಪಡೆದಿದ್ದಾರೆ. ಯುಜಿಸಿ ನಿಯಮಾವಳಿ ಪ್ರಕಾರ ಸಂಶೋಧನಾ ಪ್ರಬಂಧದ ಕೃತಿ ಚೌರ್ಯ ಗಂಭೀರ ಅಪರಾಧವಾಗಿದೆ. ಆರ್‌ಟಿಐ ವ್ಯಾಪ್ತಿಗೆ ಬರಾದ ಹಲವು ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಸಾಯನ ವಿಜ್ಞಾನ ವಿಭಾಗದಿಂದಲೂ ಅಮಾನತ್ತುಗೊಳಿಸಿ, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿ ಕೆ.ಎಲ್.ಸುಬ್ರಮಣ್ಯ ಅವರು ವಿಶ್ವವಿದ್ಯಾಲಯಕ್ಕೆ ಫೆಬ್ರುವರಿ 1 ರಂದು ಪತ್ರ ಬರೆದಿದ್ದರು.

ಅಚ್ಚರಿ ಎಂದರೆ, ಅದೇ ದಿನ (ಫೆ.1) ಕಲ್ಲಪ್ಪ ಅವರ ಅಮಾನತ್ತು ಮತ್ತು ಇಲಾಖಾ ತನಿಖಾ ನಡೆಸಬೇಕು ಎಂಬ ಉಪ ಕಾರ್ಯದರ್ಶಿಯವರ ಆದೇಶ ಕಸದ ಬುಟ್ಟಿಗೆ ಸೇರುವಂತೆ ಮಾಡಿ, ಮತ್ತೆ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಮರು ನಿಯುಕ್ತಿಗೊಳ್ಳುವಲ್ಲಿ ಕಲ್ಲಪ್ಪ ಯಶಸ್ವಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಕುಲಸಚಿವ ಹುದ್ದೆಗೆ ಬೇರೆಯವರನ್ನು ನೇಮಿಸುವರೆಗೆ ಸೂಕ್ತ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ಈ ಮಧ್ಯೆ ಕಳಂಕಿತ ವ್ಯಕ್ತಿಯನ್ನು ಅದೇ ಸ್ಥಾನಕ್ಕೆ ತರುವ ಪ್ರಯತ್ನದಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಘನತೆಗೆ ಕುಂದುಂಟಾಗುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್ ಅವರನ್ನು ಪ್ರಶ್ನಿಸಿದಾಗ, ‘ಅಂತಹ ಕಡತ ನನ್ನ ಬಳಿ ಬಂದಿಲ್ಲ’ ಎಂದು ಹೇಳಿದರು. ಸಚಿವ ಜಿ.ಟಿ.ದೇವೇಗೌಡ ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT